ಮಂಗಳವಾರ, ಏಪ್ರಿಲ್ 7, 2020
19 °C

ಯತ್ನಾಳ ಅವರಿಂದ ದೇಶದ್ರೋಹದ ಹೇಳಿಕೆ: ಈಶ್ವರ ಖಂಡ್ರೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀದರ್: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು  ಸ್ವಾತಂತ್ರ್ಯ ಯೋಧ ಎಚ್‌.ಎಸ್‌. ದೊರೆಸ್ವಾಮಿ ಅವರನ್ನು ಪಾಕ್‌ ಏಜೆಂಟ್‌ ಹಾಗೂ ನಕಲಿ ಸ್ವಾತಂತ್ರ್ಯ ಯೋಧ ಎಂದು ಹುಚ್ಚುಚ್ಚಾಗಿ ಹೇಳಿಕೆ ಕೊಡುವ ಮೂಲಕ ದೇಶದ ಸ್ವಾತಂತ್ರ್ಯ ಯೋಧರನ್ನು ಅವಮಾನಿಸಿದ್ದಾರೆ. ಇದೊಂದು ದೇಶದ್ರೋಹ ಹೇಳಿಕೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

‘ಬಸನಗೌಡ ಪಾಟೀಲ ಯತ್ನಾಳ ಅವರತಹ ಜನರು ಮನುಷ್ಯ ಜಾತಿಗೆ ಸೇರಿದವರಲ್ಲ. ವೃದ್ಧರಿಗೆ ಏಕವಚನದಲ್ಲಿ ಹೀಯಾಳಿಸಿರುವುದು ಲಜ್ಜೆಗೇಡಿತನದ ಧ್ಯೋತಕವಾಗಿದೆ. ಬಿಜೆಪಿ ಸಂಸ್ಕಾರವನ್ನು ಬಿಂಬಿಸಿದ್ದಾರೆ.  ರಾಷ್ಟ್ರದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ವಿಧಾನಸಭೆಯ ಸದಸ್ಯತ್ವ ರದ್ದುಪಡಿಸಬೇಕು.  ಬಿಜೆಪಿ ವರಿಷ್ಠರು ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದರು.

’ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಅಡ್ವಾನಿ ಅವರು ಪಾಕಿಸ್ತಾನದ ಮಹಮ್ಮದ್‌ ಅಲಿ ಜಿನ್ನಾ ಅವರನ್ನು ಪ್ರಶಂಸಿಸಿ  ಹೇಳಿಕೆ ಕೊಟ್ಟಿದ್ದರು. ಹಾಗಿದ್ದರೆ ಅಡ್ವಾನಿ ಅವರು ಪಾಕಿಸ್ತಾನದ ಏಜೆಂಟರಾಗಿದ್ದರೇ ಎನ್ನುವುದನ್ನು ಬಿಜೆಪಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

’ನವದೆಹಲಿಯಲ್ಲಿ ನಡೆಯುತ್ತಿರುವ ಹಿಂಸೆ ಧರ್ಮಾಧಾರಿತವಾಗಿದೆ.  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ದೇಶದಲ್ಲಿ ಭಯದ ವಾತಾವರಣ ನಿರ್ಮಿಸಲಾಗಿದೆ. ಬಿಜೆಪಿ ಮುಖಂಡರು ಅನೇಕ ಜನ ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ. ಹುಚ್ಚುತನದ ಹೇಳಿಕೆಗಳನ್ನು ಕೊಟ್ಟು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’. ‘ಕಾನೂನು ಸುವ್ಯವಸ್ಥೆ ರಾಜ್ಯದ ವ್ಯಾಪ್ತಿಗೆ ಬರುತ್ತದೆ ಎಂದು ಬಿಜಿಪಿಯವರು ಪದೇ ಪದೆ ಹೇಳುತ್ತಿದ್ದಾರೆ. ದೆಹಲಿ, ಕೇಂದ್ರದ ಅಧೀನದಲ್ಲಿದ್ದರೂ 20 ಜನ ಅಮಾಯಕರು ಮೃತಪಟ್ಟಿದ್ದಾರೆ’ ಎಂದು ಹೇಳಿದರು.

‘ಈಚೆಗೆ ಹಾಲಿನ ದರ ಹೆಚ್ಚಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಮತ್ತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣದರ ಹೆಚ್ಚಳ ಮಾಡಿದೆ.  ಸರ್ಕಾರ ದರ ಹೆಚ್ಚಳದ ಆದೇಶ ಹಿಂದಕ್ಕೆ ಪಡೆಯಬೇಕು. ರಾಜ್ಯದ ಜನ ಬರಗಾಲ, ಅತಿವೃಷ್ಟಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ.  2 ಕೋಟಿ ಜನರಿಗೆ ಪರಿಹಾರ ಕೊಡುವುದೇ ಆಗಿಲ್ಲ.  ಕೇಂದ್ರ ಸರ್ಕಾರ ಪರಿಹಾರ ಕೊಡಲು ತಾರತಮ್ಯ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಪಶು ಮೇಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರಿಂದ 20 ಕ್ವಿಂಟಾಲ್‌ ತೊಗರಿ ಖರೀದಿ ಮಾಡುವುದಾಗಿ ಘೋಷಣೆ ಮಾಡಿದ್ದರು. 18 ದಿನ ಕಳೆದರೂ ಸರ್ಕಾರದ ಆದೇಶ ಬಂದಿಲ್ಲ. ಕೇಂದ್ರದತ್ತ ಬೊಟ್ಟು ಮಾಡುವುದಿದ್ದರೆ ಬೀದರ್‌ನಲ್ಲಿ ಘೋಷಣೆ ಮಾಡುವ ಅವಶ್ಯಕತೆ ಏನಿತ್ತು?  ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಾಲದು ಅಭಿವೃದ್ಧಿಯನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು