ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚುರುಕು

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಉತ್ತಮ ಬೆಳೆಯ ನಿರೀಕ್ಷೆ
Last Updated 21 ಮೇ 2018, 5:32 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ತಂಬಾಕು ಸೇರಿದಂತೆ ಇನ್ನಿತರೆ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ.

ರಾಜ್ಯದಲ್ಲಿ ಬೆಳೆಯುವ ತಂಬಾಕಿನಲ್ಲಿ ತಾಲ್ಲೂಕಿನ ಪಾಲು ಶೇಕಡಾ 60ರಷ್ಟಿದೆ. ಪೂರ್ವ ಮುಂಗಾರು ತಾಲ್ಲೂಕಿನಲ್ಲಿ ಉತ್ತಮವಾಗಿ ಆರಂಭಗೊಂಡಿದ್ದು, ಮೇ ತಿಂಗಳಿನಲ್ಲಿ ವಾಡಿಕೆಯಂತೆ 183.20 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 209.11 ಮಿ.ಮೀ. ಮಳೆಯಾಗುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ತಾಲ್ಲೂಕಿನಲ್ಲಿ 29,800 ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತಿದ್ದು, ಪ್ರಸ್ತುತ 10,500 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. 9,965 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.

ದುಬಾರಿ ಕೂಲಿ, ಕಂಗಾಲಾದ ರೈತ: ತಾಲ್ಲೂಕಿನಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆಯಿದ್ದು, ಇರುವ ಕಾರ್ಮಿಕರು ದುಬಾರಿಯಾಗಿ ಪರಿಣಮಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ₹500 ಕೂಲಿ ನೀಡಿ ನಾಟಿ ಮಾಡಿಸಲಾಗುತ್ತಿದೆ. ಹೆಚ್ಚು ಬೇಡಿಕೆ ಇರುವ ಗ್ರಾಮಗಳಲ್ಲಿ ₹700 ಬೆಲೆ ತೆತ್ತು ನಾಟಿ ಕಾರ್ಯ ಮಾಡಿಸುವ ಅನಿವಾರ್ಯವಿದೆ ಎಂದು ಕಷ್ಟ ತೋಡಿಕೊಂಡರು ರೈತ ರಾಮೇಗೌಡ.

ತಂಬಾಕು ಮಂಡಳಿ ರಾಜ್ಯದ ರೈತರಿಗೆ 10 ಕೋಟಿ ಕೆ.ಜಿಯಷ್ಟು ತಂಬಾಕು ಬೆಳೆಯಲು ಗುರಿ ನಿಗದಿಪಡಿಸಿದೆ. ಪ್ರತಿ ತಂಬಾಕು ಬ್ಯಾರನ್‌ಗೆ 1750 ಕೆ.ಜಿ. ಬೆಳೆಯಲು ಅನುಮತಿ ನೀಡಿದೆ. ಉತ್ತಮ ಮಳೆಯಾದಲ್ಲಿ ಶೇಕಡಾ 10ರಷ್ಟು ಹೆಚ್ಚುವರಿ ಉತ್ಪಾದನೆಯಾದರೂ ಮಂಡಳಿ ಖರೀದಿಸಲಿದೆ.

ಸಾಂಪ್ರದಾಯಿಕ ಶೈಲಿಯಲ್ಲಿ ಪಟ ಮಾಡಿ ಸಸಿಗಳನ್ನು ಬೆಳೆಯಲಾಗುತ್ತಿತ್ತು. ಬದಲಾದ ದಿನಗಳಲ್ಲಿ ಆಧುನಿಕ ಪದ್ಧತಿ ಮೂಲಕ ಟ್ರೈಗಳಲ್ಲಿ ಸಸಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ರಸಗೊಬ್ಬರ ವಿತರಣೆ: ತಂಬಾಕು ಬೆಳೆಗೆ ರಸಗೊಬ್ಬರ ಕೊರತೆ ಕಾಡುವುದಿಲ್ಲ, ಕಾರಣ ಬ್ಯಾರನ್ ಪರವಾನಗಿ ಹೊಂದಿರುವವರಿಗೆ ತಂಬಾಕು ಮಂಡಳಿ ರಸಗೊಬ್ಬರ ವಿತರಣೆ ಮಾಡುತ್ತಿದೆ. ಡಿಎಪಿ, ಅಮೋನಿಯಂ ಸಲ್ಫೇಟ್‌, ಎಸ್ಒಪಿ ರಸಗೊಬ್ಬರ ವಿತರಣೆ ಮಾಡುತ್ತಿದೆ. ಕಳೆದ ಬಾರಿಯ ತಂಬಾಕು ಹರಾಜು ಪ್ರಕ್ರಿಯೆ ಸಮಯದಲ್ಲಿ ರೈತರಿಂದ ಮುಂಗಡವಾಗಿ 3 ಸಾವಿರ ಹಣ ಪಾವತಿ ಮಾಡಿಸಿಕೊಂಡು, ಉಳಿದ ಹಣವನ್ನು ಈ ಬಾರಿಯ ಹರಾಜು ಪ್ರಕ್ರಿಯೆಯ ಹಣದಲ್ಲಿ ಕಡಿತಗೊಳಿಸಿ ರಸಗೊಬ್ಬರ ನೀಡಲಾಗುತ್ತಿದೆ.

ಉತ್ತಮ ದರದ ನಿರೀಕ್ಷೆ: ಕಳೆದ ಬಾರಿಯ ತಂಬಾಕು ಹರಾಜಿನಲ್ಲಿ ಉತ್ತಮ ಗುಣಮಟ್ಟದ ಬೆಳೆಗೆ ಗರಿಷ್ಠ ₹162 ಬೆಲೆ ಸಿಕ್ಕಿದೆ. ತಂಬಾಕು ಉತ್ಪಾದನೆ ವೆಚ್ಚ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿದ್ದು, ಈ ಬಾರಿ ಗರಿಷ್ಟ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಬಿ.ಆರ್‌.ಗಣೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT