ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

ಶುಕ್ರವಾರ, ಏಪ್ರಿಲ್ 19, 2019
22 °C

ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

Published:
Updated:

ಬೆಂಗಳೂರು: ವಂಚನೆ ಪ್ರಕರಣದಡಿ ಕಬ್ಬನ್ ಪಾರ್ಕ್‌ ಪೊಲೀಸರು ಬಂಧಿಸಿದ್ದ ಆರೋಪಿ ಅಕ್ಷಯ್‌ಕುಮಾರ್ (29) ಎಂಬಾತ, ಠಾಣೆಯಲ್ಲೇ ಶನಿವಾರ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಅಸ್ವಸ್ಥಗೊಂಡಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಆತನ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ರಾಜರಾಜೇಶ್ವರಿನಗರ ನಿವಾಸಿಯಾದ ಅಕ್ಷಯ್‌ಕುಮಾರ್‌ ವಿರುದ್ಧ 2016ರಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದು ಠಾಣೆಯ ಸೆಲ್‌ನಲ್ಲಿರಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕಾನ್‌ಸ್ಟೆಬಲೊಬ್ಬರು ಆರೋಪಿಗೆ ಮಧ್ಯಾಹ್ನ ಊಟ ತಂದುಕೊಟ್ಟಿದ್ದರು. ತನಗೆ ಗ್ಯಾಸ್ಟ್ರಿಕ್ ಇರುವುದಾಗಿ ಹೇಳಿದ್ದ ಆರೋಪಿ, ಮಾತ್ರೆಗಳನ್ನು ತರಿಸಿಕೊಂಡಿದ್ದ. ನೀರು ತರುವುದಕ್ಕಾಗಿ ಕಾನ್‌ಸ್ಟೆಬಲ್‌ ಪಕ್ಕದ ಕೊಠಡಿಗೆ ಹೋಗುತ್ತಿದ್ದಂತೆ ಆತ, 12 ಮಾತ್ರೆಗಳನ್ನು ಒಟ್ಟಿಗೆ ನುಂಗಿದ್ದ’ ಎಂದು ವಿವರಿಸಿದರು. 

‘ಪುಲಿಕೇಶಿನಗರದಲ್ಲಿರುವ ಹಿರಿಯ ನಾಗರಿಕರೊಬ್ಬರ ₹2 ಕೋಟಿ ಮೌಲ್ಯದ ಮನೆಯ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದ ಅಕ್ಷಯ್‌ಕುಮಾರ್‌ ಹಾಗೂ ಆತನ ಸಹಚರರು, ಅದೇ ಮನೆಯನ್ನು ₹50 ಲಕ್ಷಕ್ಕೆ ಮಾರಾಟ ಮಾಡಿದ್ದರು. ಅಮೆರಿಕದಲ್ಲಿದ್ದ ಹಿರಿಯ ನಾಗರಿಕರ ಮಕ್ಕಳು, ನಗರಕ್ಕೆ ಬಂದಾಗ ಆರೋಪಿಗಳ ಕೃತ್ಯ ಗೊತ್ತಾಗಿ ಠಾಣೆಗೆ ದೂರು ನೀಡಿದ್ದರು’

‘ಆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಅಕ್ಷಯ್‌ಕುಮಾರ್, ಜಾಮೀನು ಪಡೆದುಕೊಂಡಿದ್ದ. ಇತ್ತೀಚೆಗೆ ಜಾಮೀನು ರದ್ದಾಗಿದ್ದರಿಂದ ಆತನನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !