ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲಮನ್ನಾ ಬೇಡವೆಂದು ಹಣಕಾಸು ಇಲಾಖೆ ಕಾರ್ಯದರ್ಶಿಯೇ ಹೇಳಿದ್ದರು’: ಸುಮಲತಾ

Last Updated 4 ಏಪ್ರಿಲ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಖಜಾನೆ ಖಾಲಿ ಇದೆ, ರೈತರ ಸಾಲಮನ್ನಾ ಬೇಡ, ಮುಖ್ಯಮಂತ್ರಿ ಅವರಿಗೆ ಈ ವಿಷಯ ತಿಳಿಸಿ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿಯೇ ಅಂಬರೀಷ್ ಅವರ ಬಳಿ ಹೇಳಿಕೊಂಡಿದ್ದರು’ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು.

‘ಮುಖ್ಯಮಂತ್ರಿ ನಿಮಗೆ ಹತ್ತಿರದವರಾಗಿದ್ದಾರೆ. ಹೀಗಾಗಿ ನಿಮಗೆ ಈ ವಿಷಯ ಹೇಳುತ್ತಿದ್ದೇನೆ. ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ. ಸಾಲ ತೀರಿಸೋಕೆ ಹಣ ಎಲ್ಲಿಂದ ತರುತ್ತಾರೆ, ಇದು ಕಾರ್ಯಸಾಧುವಲ್ಲದ ಯೋಜನೆ ಎಂದು ಅವರು ಹೇಳಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೆ. ಇಂತಹ ಹಲವು ವಿಚಾರಗಳು ನಡೆದಿವೆ’ ಎಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಅವರು ತಿಳಿಸಿದರು.

ಸಾಲಮನ್ನಾ ಮಾಡುವಷ್ಟು ಹಣಕಾಸು ಸ್ಥಿತಿ ಉತ್ತಮವಾಗಿಲ್ಲ ಎಂಬುದು ಗೊತ್ತಿದ್ದರೂ ಸಾಲಮನ್ನಾ ಘೋಷಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದರು.

ಮಂಡ್ಯ ಜಿಲ್ಲೆಗೆ ₹5,000 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಒಂದು ವರ್ಷದಿಂದ ಅವರೇ ಮುಖ್ಯಮಂತ್ರಿಯಾಗಿದ್ದರು. ಈವರೆಗೆ ಮಂಡ್ಯ ಬಗ್ಗೆ ಇಲ್ಲದ ಅನುಕಂಪ ಈಗ ಏಕೆ ಬಂದಿದೆ. ಇದು ರಾಜಕೀಯ ಗಿಮಿಕ್ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಅನುದಾನ ಎಂದರೇನು ಎಂಬುದು ಸುಮಲತಾಗೆ ಗೊತ್ತಿಲ್ಲ, ರಾಜಕೀಯವೂ ಗೊತ್ತಿಲ್ಲ ಎಂಬ ಸಚಿವ ಪುಟ್ಟರಾಜು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ನನಗೆ ಗೊತ್ತಿಲ್ಲ, ನಾನು ರಾಜಕೀಯ ಮಾಡುವುದೂ ಇಲ್ಲ. ಈ ಬಗ್ಗೆ ಪುಟ್ಟರಾಜುಗೆ ಉತ್ತರ ನೀಡುವ ಅಗತ್ಯವೂ ಇಲ್ಲ ಎಂದರು.

‘ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೆ ಮತ್ತೆ ಮಂಡ್ಯ ಜಿಲ್ಲೆಗೆ ಕಾಲಿಡಬೇಡಿ ಎಂದು ಜನ ಹೇಳಿದರು. ಹೀಗಾಗಿಯೇ ಅವರ ಪ್ರೀತಿ, ಅಭಿಮಾನಕ್ಕೆ ಕಟ್ಟುಬಿದ್ದು ಚುನಾವಣೆಗೆ ನಿಂತಿದ್ದೇನೆ’ ಎಂದು ಹೇಳಿದರು.

ಚರ್ಚೆ ಮಾಡಿಲ್ಲ: ‍ಪ್ರಸಾದ್
‘ಸಾಲಮನ್ನಾ ವಿಷಯ ಕುರಿತು ಅಂಬರೀಷ್ ಜತೆ ಚರ್ಚಿಸಿದ್ದೇನೆ ಎಂಬುದು ಸುಳ್ಳು’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸ್ಪಷ್ಟಪಡಿಸಿದರು.

‘ಹಣಕಾಸು ಇಲಾಖೆ ಜವಾಬ್ದಾರಿ ಇರುವ ಕಾರಣ ನನಗೆ ಎಲ್ಲರೂ ಪರಿಚಯಸ್ಥರೇ. ಅಂಬರೀಷ್ ಅವರು ಸಚಿವರಾಗಿದ್ದಾಗ ಅವರ ಮನೆಗೆ ಹೋಗಿದ್ದೆ, ಮತ್ತೆ ಹೋಗಿಲ್ಲ. ಆ ಸಂದರ್ಭದಲ್ಲಿ ಸಾಲಮನ್ನಾ ವಿಷಯವೇ ಸರ್ಕಾರದ ಇರಲಿಲ್ಲ’ ಎಂದು ‘‍ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT