‘ಹಿರಿಯರ ಸಲಹೆ ಪಡೆದು ತೀರ್ಮಾನ’

7
ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ; ರಾಜಕೀಯ ಪ್ರವೇಶ ಕುರಿತು ಸುಮಲತಾ ಹೇಳಿಕೆ

‘ಹಿರಿಯರ ಸಲಹೆ ಪಡೆದು ತೀರ್ಮಾನ’

Published:
Updated:
Prajavani

ನಾಗಮಂಗಲ: ‘ರಾಜಕೀಯ ಪ್ರವೇಶದ ಬಗ್ಗೆ ಹಿರಿಯರ ಜೊತೆಗೆ ಚರ್ಚಿಸಿ ತೀರ್ಮಾನಿಸುತ್ತೇನೆ. ಯಾವ ಪಕ್ಷದ ಅಭ್ಯರ್ಥಿ ಎಂದು ಈಗಲೇ ಹೇಳಲಾಗುವುದಿಲ್ಲ’ ಎಂದು ನಟಿ ಸುಮಲತಾ ಅಂಬರೀಷ್‌ ಇಲ್ಲಿ ಭಾನುವಾರ ತಿಳಿಸಿದರು.

ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎರಡು ತಿಂಗಳಿಂದ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಸ್ವಾಮೀಜಿ ಜೊತೆಗೆ ಯಾವುದೇ ವಿಚಾರ ಚರ್ಚಿಸಿಲ್ಲ. ಭೇಟಿಗೆ ರಾಜಕೀಯ ಉದ್ದೇಶವೂ ಇಲ್ಲ’ ಎಂದು ಹೇಳಿದರು.

‘ಅಭಿಮಾನಿಗಳು ಅಂಬರೀಷ್ ಅವರನ್ನು ಪ್ರೀತಿ, ವಿಶ್ವಾಸದಿಂದ ಬೆಳೆಸಿದ್ದಾರೆ. ರಾಜಕೀಯ ಪ್ರವೇಶಿಸುವಂತೆ ಜಿಲ್ಲೆಯ ಜನರ ಒತ್ತಾಯವಿದೆ, ಅಂಬರೀಷ್ ಮೇಲಿನ ಪ್ರೀತಿ, ವಿಶ್ವಾಸವೇ ಇದಕ್ಕೆ ಕಾರಣ’ ಎಂದರು.

‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿರುವ ಸುದ್ದಿ ಸತ್ಯಕ್ಕೆ ದೂರವಾದುದು’ ಎಂದು ನುಡಿದರು.

‘ರಾಜಕೀಯ ಪ್ರವೇಶ ಕುರಿತು ಅಂಬರೀಷ್ ಆಪ್ತರು, ಹಿರಿಯರ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ. ಅಭಿಮಾನಿಗಳ ಒತ್ತಾಯಕ್ಕೆ ಸ್ಪಂದಿಸಬೇಕಿದೆ. ಯಾವುದೇ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಲಾಗದು’ ಎಂದರು.

ಅಂಬರೀಷ್  ಪುತ್ರ ಅಭಿಷೇಕ್, ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !