ಶುಕ್ರವಾರ, ಜುಲೈ 30, 2021
20 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿ ಕೋರಿ ಅರ್ಜಿ: ಸುಪ್ರೀಂನಲ್ಲಿ ನಾಳೆ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Supreme court

ನವದೆಹಲಿ: ರಾಜ್ಯದಲ್ಲಿ ಇದೇ 25ರಿಂದ ಆರಂಭ ಆಗಲಿರುವ ‌ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕೋವಿಡ್‌–19 ಸೋಂಕಿನ ಆತಂಕ ಇರುವುದರಿಂದ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಕೈಗೆತ್ತಿಕೊಳ್ಳಲಿದೆ.

ಪರೀಕ್ಷೆ ರದ್ದತಿ ಕೋರಿ ಬೆಳಗಾವಿ ಮೂಲದ ರಾಜಶ್ರೀ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಮೇ 27ರಂದು ವಜಾಗೊಳಿಸಿತ್ತು. ಆ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಮಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌ ನೇತೃತ್ವದ ತ್ರಿಸದಸ್ಯ ಪೀಠ ನಡೆಸಲಿದೆ.

ಇದೇ 25ರಿಂದ ಜುಲೈ 4ರವರೆಗೆ ನಿಗದಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ 8.48 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಸಿಬ್ಬಂದಿಯ ಆರೋಗ್ಯ ಅಪಾಯಕ್ಕೆ ಸಿಲುಕಲಿದೆ ಎಂಬ ಅಂಶವನ್ನು ಹೈಕೋರ್ಟ್‌ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ವಿದ್ಯಾರ್ಥಿಗಳು ಒಂದು ಊರಿಂದ ಮತ್ತೊಂದು ಊರಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ನೂಕುನುಗ್ಗಲಿನಲ್ಲೇ ತೆರಳಬೇಕಿದ್ದು, ಪ್ರತಿ ಕೇಂದ್ರದಲ್ಲಿ 500ರಿಂದ 700 ಜನ ವಿದ್ಯಾರ್ಥಿಗಳು ಹಾಗೂ ನೂರಾರು ಜನ ಸಿಬ್ಬಂದಿಯ ಆರೋಗ್ಯ ಅಪಾಯಕ್ಕೆ ಸಿಲುಕಲಿದೆ. ಇದರಿಂದ ಅವರೆಲ್ಲರಿಗೂ ಆರೋಗ್ಯ ಖಾತರಿ ಹಕ್ಕನ್ನು ನಿರಾಕರಿಸಿದಂತಾಗಲಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ಅಪ್ರಾಪ್ತರಾದ ವಿದ್ಯಾರ್ಥಿಗಳ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸದೆ, ಪರೀಕ್ಷೆ ರದ್ದುಪಡಿಸಿ ಇತರ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡ ಮಾದರಿಯಲ್ಲೇ ಆದೇಶ ಹೊರಡಿಸುವಂತೆ ಸೂಚಿಸಬೇಕು ಎಂದೂ ಅರ್ಜಿದಾರರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು