ಶನಿವಾರ, ಜುಲೈ 24, 2021
28 °C
ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ಅವಘಡ

ಬೆಂಗಳೂರು | ಶೌಚಗುಂಡಿಯಲ್ಲಿ ಬಿದ್ದು ಕಾರ್ಮಿಕ, ವ್ಯವಸ್ಥಾಪಕ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೂರ್ಯನಗರ ಠಾಣೆ ವ್ಯಾಪ್ತಿಯ ಕಂಪನಿಯೊಂದರ ಶೌಚಗುಂಡಿಯಲ್ಲಿ ಬಿದ್ದು ಉಸಿರುಗಟ್ಟಿ ವ್ಯವಸ್ಥಾಪಕ ಆನಂದ್ (31) ಹಾಗೂ ಕಾರ್ಮಿಕ ಜೇಮ್ಸ್ (24) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

ಸೋಮವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡಿರುವ ಕಂಪನಿಯ ಇನ್ನೊಬ್ಬ ವ್ಯವಸ್ಥಾಪಕ ಚಂದ್ರಶೇಖರ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ.

‘ಪಲೋಮಾ ಎಂಜಿನಿಯರಿಂಗ್ ಕಂಪನಿಯ ಶೌಚಗುಂಡಿ ಸ್ವಚ್ಛಗೊಳಿಸಲು ತಮಿಳುನಾಡಿನ ಜೇಮ್ಸ್‌ ಹಾಗೂ ಇಲಿಯಾ ಪಾಂಡೆ ಎಂಬುವರು ವಾಹನದ ಸಮೇತ ಬಂದಿದ್ದರು. ಶೌಚಗುಂಡಿಯಲ್ಲಿ ಪೈಪ್‌ ಬಿಟ್ಟು ಬೆಳಿಗ್ಗೆಯಿಂದ ಸಂಜೆಯವರೆಗೂ ಸ್ವಚ್ಛತೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲಸದ ಕೊನೆಯಲ್ಲಿ ಅಳತೆಯ ಸ್ಕೇಲ್ ಗುಂಡಿಯೊಳಗೆ ಬಿದ್ದಿತ್ತು. ಅದನ್ನು ತೆಗೆಯಲೆಂದು ಜೇಮ್ಸ್ ಗುಂಡಿಯೊಳಗೆ ಇಳಿದಿದ್ದರು. ಉಸಿರಾಡಲು ಕಷ್ಟವಾಗಿ ಕೂಗಾಡಲಾರಂಭಿಸಿದ್ದರು. ರಕ್ಷಣೆ ಹೋಗಿದ್ದ ಆನಂದ್ ಸಹ ಗುಂಡಿಯೊಳಗೆ ಬಿದ್ದಿದ್ದರು. ಅವರಿಬ್ಬರನ್ನು ರಕ್ಷಿಸಲು ಹೋದ ಚಂದ್ರಶೇಖರ್ ಸಹ ಗುಂಡಿಯೊಳಗೆ ಇಳಿದು ಪ್ರಜ್ಞೆ ಕಳೆದುಕೊಂಡಿದ್ದರು’ ಎಂದೂ ಮಾಹಿತಿ ನೀಡಿದರು.

‘ಕಂಪನಿಯ ಇತರೆ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ರಕ್ಷಿಸಲು ಮುಂದಾಗಿದ್ದರು. ಠಾಣೆಗೂ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮೂವರನ್ನು ಹೊರಗೆ ತೆಗೆದಿದ್ದರು. ಅಷ್ಟರಲ್ಲೇ ಜೇಮ್ಸ್ ಹಾಗೂ ಆನಂದ್ ಮೃತಪಟ್ಟಿದ್ದರು. ಉಸಿರಾಡುತ್ತಿದ್ದ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದೂ ಪೊಲೀಸರು ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು