‘ಜೀವಂತ ಬರುವುದೇ ಅನುಮಾನವಾಗಿತ್ತು'

ಭಾನುವಾರ, ಮಾರ್ಚ್ 24, 2019
32 °C
‘ತಾರಿಣಿ’ ಹಡಗಿನಲ್ಲಿ ಸಮುದ್ರಯಾನ ಮಾಡಿದ ಮಹಿಳಾ ಲೆಫ್ಟಿನೆಂಟ್ ಕಮಾಂಡರ್‌ಗಳು

‘ಜೀವಂತ ಬರುವುದೇ ಅನುಮಾನವಾಗಿತ್ತು'

Published:
Updated:

ಏಷ್ಯಾ ಖಂಡದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ನೌಕಾದಳದ ಆರು ಮಂದಿ ಮಹಿಳಾ ಲೆಫ್ಟಿನೆಂಟ್ ಕಮಾಂಡರ್‌ಗಳು, ‘ಸಮುದ್ರಯಾನ’ ಮಾಡುವ ಮೂಲಕ ಸಾಧನೆಗೈದಿದ್ದಾರೆ. ನೌಕಾಪಡೆಯ ‘ತಾರಿಣಿ’ ಹಡಗಿನಲ್ಲಿ 254 ದಿನಗಳಲ್ಲಿ 21,600 ನಾಟಿಕಲ್ ಮೈಲ್‌ಗಳಷ್ಟು (40,003 ಕಿ.ಮೀ) ಸಮುದ್ರ ಸುತ್ತಿ ಬಂದ ಮಹಿಳಾ ಲೆಫ್ಟಿನೆಂಟ್ ಕಮಾಂಡರ್‌ಗಳು, ಇದೀಗ ಜಗತ್ತಿನ ಗಮನ ಸೆಳೆದಿದ್ದಾರೆ. 

ಲೆಫ್ಟಿನೆಂಟ್ ಕಮಾಂಡರ್‌ಗಳಾದ ವರ್ತಿಕಾ ಜೋಷಿ, ಹಿಮಾಚಲ ಪ್ರದೇಶದ ಪ್ರತಿಭಾ ಜಮ್ವಾಲ್, ಹೈದರಾಬಾದ್‌ನ ಐಶ್ವರ್ಯ ಬಡ್ಡಪತಿ, ವಿಶಾಖಪಟ್ಟಣದ ಪಿ. ಸ್ವಾತಿ, ಮಣಿಪುರದ ಎಸ್‌.ವಿಜಯಾ ದೇವಿ ಹಾಗೂ ಡೆಹ್ರಾಡೂನ್‌ನ ಪಾಯಲ್ ಗುಪ್ತಾ ಅವರ ಸಮುದ್ರಯಾನದ ಸಾಧನೆಯನ್ನು ‘ನ್ಯಾಷನಲ್ ಜಿಯೊಗ್ರಫಿ’ ವಾಹಿನಿಯು ‘ತಾರಿಣಿ’ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿದಿದೆ. ಈ ಸಾಕ್ಷ್ಯಚಿತ್ರವು ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್‌ 8ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಸಾಕ್ಷ್ಯಚಿತ್ರದ ಪ್ರಚಾರಾರ್ಥವಾಗಿ ಬೆಂಗಳೂರಿಗೆ ಬಂದಿದ್ದ ಲೆಫ್ಟಿನೆಂಟ್ ಕಮಾಂಡರ್‌ಗಳ ಪೈಕಿ ವಿಶಾಖಪಟ್ಟಣಂನ ಪಿ. ಸ್ವಾತಿ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಸಮುದ್ರಯಾನದ ಅನುಭವ ಹಂಚಿಕೊಂಡರು.

‘ನಮ್ಮ ತಂಡದವರಿಗೆಲ್ಲ ತುಂಬಾ ಖುಷಿಯಾಗುತ್ತಿದೆ. ನಿತ್ಯವೂ ಟಿ.ವಿ ಹಾಗೂ ಪತ್ರಿಕೆಯವರು ನಮ್ಮ ಸಂದರ್ಶನ ಪಡೆಯುತ್ತಿದ್ದು, ಅದನ್ನು ನೋಡಿ ಪೋಷಕರು ಸಂತೋಷಪಡುತ್ತಿದ್ದಾರೆ. ಹೆಣ್ಣು ಮಕ್ಕಳೆಂದರೆ ನಿಮ್ಮಂಥೆ ಇರಬೇಕು ಎಂದು ಹೋದಲ್ಲೆಲ್ಲ ಹೇಳುತ್ತಿದ್ದಾರೆ. ಇದೆಲ್ಲದ್ದಕ್ಕೂ ಕಾರಣವಾಗಿದ್ದು ‘ತಾರಿಣಿ’ ಹಡಗಿನಲ್ಲಿ ನಾವು ಮಾಡಿದ ಸಮುದ್ರಯಾನ’.

‘ಏಷ್ಯಾದಲ್ಲಿ ಯಾವ ಮಹಿಳೆಯರೂ ಸಮುದ್ರಯಾನ ಮಾಡಿಲ್ಲ. ಭಾರತೀಯ ನೌಕಾಪಡೆಯ ಮಹಿಳೆಯರೇ ಮೊದಲಿಗರಾಗಿ ಅಂಥ ಪ್ರಯತ್ನ ಮಾಡಲಿ ಎಂದು ನ್ಯಾಷನಲ್ ಜಿಯೊಗ್ರಫಿ ವಾಹಿನಿಯವರು ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕೆ ಒಪ್ಪಿಕೊಂಡ ನೌಕಾಪಡೆಯ ಮುಖ್ಯಸ್ಥರು, ಸಮುದ್ರಯಾನ ಮಾಡಲು ಇಚ್ಛಿಸುವವರು ಸ್ವಯಂ ಪ್ರೇರಿತರಾಗಿ ಬರಬಹುದು ಎಂದು ನಮಗೆಲ್ಲ ಹೇಳಿದ್ದರು. ಆರು ಮಂದಿಯೂ ಸ್ವಯಂಪ್ರೇರಿತರಾಗಿ ಈ ಪ್ರಯತ್ನಕ್ಕೆ ಸಿದ್ಧವಾದೆವು’.

‘ಸಮುದ್ರಯಾನ ಎಂಬುದು ಸಾವಿನೊಂದಿಗಿನ ಹೋರಾಟವಿದ್ದಂತೆ. ಅದಕ್ಕೆ ತರಬೇತಿ ಅತ್ಯಗತ್ಯ. ಅದೇ ಕಾರಣಕ್ಕೆ ನಮಗೆ ಮೂರು ವರ್ಷಗಳ ಕಠಿಣ ತರಬೇತಿ ನೀಡಲಾಯಿತು. ಹಡಗು ನಿರ್ವಹಣೆ, ತಂತ್ರಜ್ಞಾನಗಳ ಬಳಕೆ, ಆಹಾರ ಪದ್ಧತಿ, ಸಮುದ್ರದಲ್ಲಿ ಅಲೆಗಳು ಬಂದಾಗ ಯಾವ ರೀತಿ ಎದುರಿಸಬೇಕು... ಹೀಗೆ ಸಮುದ್ರಯಾನಕ್ಕೆ ಬೇಕಾದ ಪ್ರತಿಯೊಂದು ಸಂಗತಿಯನ್ನು ತರಬೇತಿಯಲ್ಲಿ ತಿಳಿಸಿಕೊಟ್ಟರು’

‘ಸಮುದ್ರಯಾನವನ್ನು ‘ತಾರಿಣಿ’ ಹಡಗಿನಲ್ಲಿ ಮಾಡಬೇಕೆಂಬುದು ಮೊದಲೇ ನಿಗದಿಯಾಗಿತ್ತು. 2016–17ರಲ್ಲಿ ನಿರ್ಮಿಸಿದ್ದ ‘ತಾರಿಣಿ’ ಹಡಗು, ನ್ಯಾವಿಗೇಷನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ನಮ್ಮ ಪ್ರಯಾಣದಲ್ಲಿ ಈ ಹಡಗು ಒಂದು ದಿನವೂ ಕೆಟ್ಟು ನಿಲ್ಲಲಿಲ್ಲ. ಅಲೆಗಳ ಆರ್ಭಟದ ನಡುವೆಯೋ ಗುಂಡಿನಂತೆ ಸೀಳಿಕೊಂಡು ಮುಂದೆ ಹೋಗುತ್ತಿತ್ತು. ಆಕಸ್ಮಾತ್ ಹಡಗು ಕೈ ಕೊಟ್ಟಿದ್ದರೆ, ನಾವು ಜೀವಂತವಾಗಿ ಬರುತ್ತಿರಲಿಲ್ಲ’.

‘2017ರ ಸೆ. 10ರಂದು ಗೋವಾದಿಂದ ಶುರುವಾದ ಸಮುದ್ರಯಾನ, 2018ರ ಮೇ 21ರಂದು ಮುಕ್ತಾಯವಾಯಿತು. ಮೂರು ಸಮುದ್ರ, ನಾಲ್ಕು ಖಂಡಗಳನ್ನು ನಾವು ನೋಡಿ ಬಂದಿದ್ದೇವೆ. ಯಾನದ ಪ್ರತಿಯೊಂದು ದೃಶ್ಯವನ್ನೂ ನಾವೇ ಆರು ಮಂದಿ, ಚಿತ್ರೀಕರಣ ಮಾಡಿದ್ದೇವೆ. ಕೆಲ ಬಾರಿ ಮಾತ್ರ, ವಾಹಿನಿಯವರು ಹೆಲಿಕಾಫ್ಟರ್‌ನಲ್ಲಿ ಬಂದು ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಆ ದೃಶ್ಯಗಳನ್ನೇ ಸಂಗ್ರಹಿಸಿ ಈಗ ‘ತಾರಿಣಿ’ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಅದನ್ನು ನೋಡಿದರೆ, ಸಮುದ್ರಯಾನದಲ್ಲಿ ನಾವು ಅನುಭವಿಸಿದ ಸವಾಲುಗಳೇನು ಎಂಬುದು ನಿಮಗೇ ಗೊತ್ತಾಗುತ್ತದೆ’.

‘ಸಮುದ್ರದಲ್ಲಿರುವಾಗ ಪ್ರತಿ ನಿಮಿಷಕ್ಕೊಮ್ಮೆ ಸವಾಲುಗಳು ಎದುರಾಗುತ್ತಿದ್ದವು. ಹವಾಮಾನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭಿನ್ನವಾಗಿರುತ್ತಿತ್ತು. ಮನುಷ್ಯನ ದೇಹ ಎಂಥ ಹವಾಮಾನಕ್ಕಾದರೂ ಒಗ್ಗುತ್ತದೆ ಎಂಬುದನ್ನು ಕೇವಲ ಪುಸ್ತಕದಲ್ಲಿ ಓದಿದ್ದೆ. ಆದರೆ, ಸಮುದ್ರಯಾನಕ್ಕೆ ಹೊರಟಾಗ ಅದನ್ನು ಅನುಭವಿಸಿದೆ. ಹಡಗಿನಲ್ಲೇ ಊಟ ಸಿದ್ಧಪಡಿಸಿದೆವು. ಹುಟ್ಟುಹಬ್ಬಗಳನ್ನೂ ಆಚರಿಸಿದೆವು’.  

‘ಜಲಚರಗಳು ಹೇಗಿರುತ್ತವೆ ಎಂಬುದನ್ನು ಪುಸ್ತಕದಲ್ಲಿ ನೋಡಿದ್ದೆ. ಸಮುದ್ರಯಾನದಲ್ಲಿ ಎಲ್ಲ ಜಲಚರಗಳನ್ನು ಕಣ್ಣಾರೆ ಕಂಡೆ. ಅವುಗಳ ಜೊತೆ ಸೆಲ್ಫಿ ಸಹ ತೆಗೆಸಿಕೊಂಡೆ. ಚಿತ್ರ–ವಿಚಿತ್ರವಾದ ಜಲಚರಗಳು ಸಮುದ್ರದಲ್ಲಿವೆ. ಅವುಗಳನ್ನು ನೋಡಿದರೆ ವಿಸ್ಮಯವಾಗುತ್ತದೆ’ 

‘ನಮ್ಮ ಹಡಗು ಪ್ರತಿ ಗಂಟೆಗೆ 12 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು. ಆದರೆ, ಸಮುದ್ರದ ಅಲೆಗಳು ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಅಪ್ಪಳಿಸುತ್ತಿದ್ದವು. ಅಂಥ ಸ್ಥಿತಿಯಲ್ಲೂ ‘ತಾರಿಣಿ’ ಮುನ್ನುಗ್ಗುತ್ತಿತ್ತು. ಅಂಟಾರ್ಟಿಕಾ ಖಂಡದಲ್ಲೇ ಅತೀ ದೊಡ್ಡ ಅಲೆಯೊಂದನ್ನು ಎದುರಿಸಿದೆವು. ಅಲ್ಲಿಯೇ ಹೆಚ್ಚು ಭಯವಾಗಿತ್ತು. ಆದರೆ, ಅಲೆಗಳನ್ನು ಸಮರ್ಥವಾಗಿ ನಿಭಾಯಿಸುವ ತಂತ್ರಗಳನ್ನು ರೂಪಿಸಿ ಹಡಗನ್ನು ಚಲಾಯಿಸಿದೆವು. ಆ ಅಲೆ ಬಂದು ಅಪ್ಪಳಿಸಿದ ದೃಶ್ಯ ಇಂದು ನನ್ನ ಕಣ್ಮುಂದಿದೆ’. 

ಸಾಧನೆಗೆ ಲಿಂಗ ತಾರತಮ್ಯ ಅಡ್ಡಿಯೇ ಅಲ್ಲ
‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರ ಸಮಾನವಾಗಿ ಬೆಳೆಯುತ್ತಿದ್ದಾರೆ. ಎಲ್ಲ ರಂಗದಲ್ಲೂ ಮಹಿಳೆಯರಿಗೆ ಅವಕಾಶಗಳಿವೆ. ಆದರೆ, ಅಂಥ ಅವಕಾಶಗಳನ್ನು ಬಳಸಿಕೊಂಡು ಗುರಿ ತಲುಪುವ ಮನೋಭಾವ ಮಹಿಳೆಯರಲ್ಲಿ ಬರಬೇಕು’.

‘ನೌಕಾದಳದಲ್ಲಿ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುರುಷರ ಸಮಾನವಾಗಿ ಮಹಿಳೆಯರಿಗೂ ಎಲ್ಲ ರೀತಿಯ ತರಬೇತಿ ನೀಡಲಾಗುತ್ತದೆ. ಹಡಗು ಏರಿದ ಕೂಡಲೇ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತೇವೆ. ಲಿಂಗ ತಾರತಮ್ಯದ ಮಾತೇ ಬರುವುದಿಲ್ಲ’.

***

‘ಕೂಲಿ ಕಾರ್ಮಿಕರ ಮಗಳು ನಾನು’
‘ನನ್ನ ವೈಯಕ್ತಿಕ ಜೀವನದ ಬಗ್ಗೆ ಹೇಳಬೇಕಾದರೆ, ತಂದೆ–ತಾಯಿ ಕೂಲಿ ಕಾರ್ಮಿಕರು. ಅವರಿಗೆ ನಾವು ಮೂವರು ಹೆಣ್ಣು ಮಕ್ಕಳು. ನಾನೇ ಕೊನೆಯವಳು. ಮೂರನೇ ಮಗು ಗಂಡಾಗಬೇಕಿತ್ತು ಎಂಬ ಆಸೆ ಅವರಿಗಿತ್ತು. ನಾನು ಹುಟ್ಟಿದಾಗ ಹೆಣ್ಣು ಹುಟ್ಟಿತಲ್ಲ ಎಂಬ ಬೇಸರ ಅವರನ್ನು ಕಾಡಲಾರಂಭಿಸಿತ್ತು. ನಾನು ಶಾಲೆ ಕಲಿಯುವ ವೇಳೆಯಲ್ಲೂ ಅವರ ಬೇಸರ ಹೋಗಿರಲಿಲ್ಲ. ಈಗ ಲೆಫ್ಟಿನೆಂಟ್ ಕಮಾಂಡರ್ ಆದ ನಂತರ, ನನ್ನ ಬಗ್ಗೆ ಅವರು ಹೆಮ್ಮೆ ಪಡುತ್ತಾರೆ. ಗಂಡು ಮಗುವಾಗಿದ್ದರೂ ನನ್ನಂತೆ ಸಾಧನೆ ಮಾಡಲು ಆಗುತ್ತಿರಲಿಲ್ಲವೆಂದು ಹೇಳುತ್ತಿದ್ದಾರೆ’.

‘ಬಾಲ್ಯದಿಂದಲೂ ಸಮವಸ್ತ್ರ ಧರಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಶಾಲಾ ದಿನಗಳಲ್ಲೇ ಎನ್‌ಸಿಸಿ ಸೇರಿದ್ದೆ. ಪದವಿ ಮುಗಿಸಯುತ್ತಿದ್ದಂತೆ ನೌಕಾದಳ ಸೇರಲು ಅರ್ಜಿ ಸಲ್ಲಿಸಿದೆ. ಅಂದುಕೊಂಡಂತೆ ಏರ್ ಟ್ರಾಫಿಕ್ ಕಂಟ್ರೋಲರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ’.  

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !