ಭಾನುವಾರ, ಫೆಬ್ರವರಿ 28, 2021
31 °C

ಕ್ಷಯ ರೋಗಿಗಳ ಪತ್ತೆಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿರುವ ಕ್ಷಯರೋಗಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಆರೋಗ್ಯ ಇಲಾಖೆ ಒಟ್ಟು 31 ಜಿಲ್ಲೆಗಳಲ್ಲಿ ಒಂದೇ ಹಂತದಲ್ಲಿ 1.3 ಕೋಟಿ ಜನರನ್ನು ಸಮೀಕ್ಷೆ ನಡೆಸುವ ಮೂಲಕ ಬಿರುಸಿನ ಚಟುವಟಿಕೆ ನಡೆಸಲಿದೆ.

ಜುಲೈ 2ರಿಂದ 13ರವರೆಗೆ ಮೊದಲ ಹಂತದ ಸಮೀಕ್ಷೆ ನಡೆಯಲಿದೆ. ಇದರಲ್ಲಿ ಗ್ರಾಮೀಣ ಭಾಗದ ಹಾಗೂ ಅಪಾಯದ (ಹೈ ರಿಸ್ಕ್‌ ಏರಿಯಾ) ಅಂಚಿನಲ್ಲಿರುವ ಜನರನ್ನು ಮುಖ್ಯವಾಗಿ ಕೇಂದ್ರೀಕರಿಸಲಾಗುತ್ತದೆ.

ಕ್ಷಯರೋಗ, ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಹರಡುವ ಕಾಯಿಲೆಯಾಗಿರುವುದರಿಂದ ಇದರ ನಿಯಂತ್ರಣಕ್ಕಾಗಿ ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಕೊಳೆಗೇರಿ, ಕೈದಿಗಳು, ವೃದ್ಧಾಪ್ಯ ಕೇಂದ್ರಗಳು, ಕಟ್ಟಡ ಕಾರ್ಮಿಕರು, ನಿರಾಶ್ರಿತರ ಶಿಬಿರಗಳು, ರಾತ್ರಿ ಆಶ್ರಯಗಳು, ವಸತಿ ಇಲ್ಲದವರು, ಬೀದಿ ಮಕ್ಕಳು, ಅನಾಥರು, ನಿರ್ಗತಿಕರು, ರಕ್ಷಣಾ ವಲಯಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗಣಿ ಕೆಲಸಗಾರರು, ತಲುಪಲಾಗದ ಪ್ರದೇಶದಲ್ಲಿ ವಾಸಿಸುವವರು, ಕಲ್ಲುಕೊರೆಯುವ ಕೆಲಸಗಾರರು, ಅಪೌಷ್ಠಿಕತೆ ಜನಸಂಖ್ಯೆಯ ಗುಂಪುಗಳು, ಹತ್ತಿ ಮಿಲ್‌ ಕೆಲಸಗಾರರು, ನೇಕಾರರು, ಕಾಫಿ, ತೋಟಗಳ ಕಾರ್ಮಿಕರು, ಕಾಯಿಸದೆ ಹಾಲನ್ನು ಕುಡಿಯುವ ಜನಸಂಖ್ಯೆ, ಬೇಯಿಸದೆ ಮಾಂಸತಿನ್ನುವವರು, ಗುಡ್ಡಗಾಡು, ಅಸಂಘಟಿತ ಕಾರ್ಮಿಕರು, ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವವರನ್ನು ಸಮೀಕ್ಷೆ ಮಾಡಲಾಗುತ್ತದೆ.
*

2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಗುರಿ

‘2025ರ ಹೊತ್ತಿಗೆ ಕ್ಷಯರೋಗ ನಿರ್ಮೂಲನೆ ಮಾಡುವುದು ಭಾರತ ಸರ್ಕಾರದ ಗುರಿ. ಇದಕ್ಕಾಗಿ ರಾಜ್ಯದ ಅಪಾಯಕಾರಿ ವಲಯಗಳನ್ನು ಪತ್ತೆಹಚ್ಚಿ ಅಲ್ಲಿ ಸಮೀಕ್ಷೆ ನಡೆಸಲಿದ್ದೇವೆ. ಮನೆ, ಮನೆಗೆ ತೆರಳಿ ಕ್ಷಯ ರೋಗದ ಲಕ್ಷಣಗಳನ್ನು ಅವರಿಗೆ ತಿಳಿಸುತ್ತೇವೆ. ಅನುಮಾನ ಬಂದವರ ಕಫದ ಪರೀಕ್ಷೆ ನಡೆಸಿ ಉಚಿತವಾಗಿ ಚಿಕಿತ್ಸೆ ಕೊಡಲಿದ್ದೇವೆ.’ ಎಂದು ಆರೋಗ್ಯ ಇಲಾಖೆ, ಕ್ಷಯ ರೋಗ ವಿಭಾಗದ ಅಧಿಕಾರಿ ರಾಮಚಂದ್ರ ಬೇರಿ ಹೇಳಿದರು.
**

ಸಮೀಕ್ಷೆ ರೂಪುರೇಷೆ

ಜಿಲ್ಲೆಗಳು; 31
ಜನಸಂಖ್ಯೆ; 1.3 ಕೋಟಿ 
ನೇರ ಸಮೀಕ್ಷೆ ಮಾಡುವವರು; 12,393 
ತಂಡದಲ್ಲಿರುವವರು; 24,786

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು