ಮಧ್ಯವರ್ತಿ ರಾಜೇಶ್‌ ಮನೆ ಮೇಲೆ ದಾಳಿ

ಶುಕ್ರವಾರ, ಮೇ 24, 2019
23 °C
ಟಿಡಿಆರ್‌ ವರ್ಗಾವಣೆ ವಂಚನೆ– ಬಗೆದಷ್ಟು ವಿಸ್ತಾರಗೊಳ್ಳುತ್ತಿರುವ ಹಗರಣ

ಮಧ್ಯವರ್ತಿ ರಾಜೇಶ್‌ ಮನೆ ಮೇಲೆ ದಾಳಿ

Published:
Updated:
Prajavani

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವಂಚನೆ ಹಗರಣದ ಮೂಲಕ್ಕೇ ಕೈ ಹಾಕಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖಾ ತಂಡಕ್ಕೆ ಬಗೆದಷ್ಟೂ ಮಾಹಿತಿಗಳು ಸಿಗುತ್ತಿವೆ. ಹಗರಣದ ಪ್ರಮುಖ ಮಧ್ಯವರ್ತಿ ಎನ್ನಲಾಗಿರುವ ರಾಜೇಶ್‌ ಕುಮಾರ್‌ ಎಂಬಾತನ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ಕಬ್ಬನ್‌ಪೇಟೆಯ ಮಹಿಳಾ ಸಹಕಾರ ಬ್ಯಾಂಕ್‌ ಮೇಲೆ ದಾಳಿ ನಡೆಸಿದಾಗ ರಾಜಸ್ಥಾನ ಮೂಲದ ರಾಜೇಶ್‌ ಕುಮಾರ್‌ ಅಲಿಯಾಸ್‌ ರಾಕೇಶ್‌ ನಿಂಬಾಜಿಯಾ ಕೋಟ್ಯಂತರ ರೂ‍ಪಾಯಿ ವಹಿವಾಟು ನಡೆಸಿರುವುದು ಪತ್ತೆಯಾಯಿತು. ಇದನ್ನು ಆಧರಿಸಿ ಕಾಟನ್‌ಪೇಟೆಯಲ್ಲಿರುವ ಇವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಟಿಡಿಆರ್‌ ಹಗರಣದಲ್ಲಿ ಬಿಬಿಎಂಪಿ ಕೆಲ ಅಧಿಕಾರಿಗಳು, ಮಧ್ಯವರ್ತಿಗಳು, ರಾಜಕಾರಣಿಗಳು ಭಾಗಿಯಾಗಿದ್ದು, ರಾಜೇಶ್‌ ಕುಮಾರ್‌ ಬಿಬಿಎಂಪಿ ಅಧಿಕಾರಿಗಳು ಮತ್ತು ಬ್ಯಾಂಕ್‌ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಪರಿಹಾರದ ಚೆಕ್‌ನಲ್ಲಿ ಶೇ 20ರಷ್ಟು ಕಮಿಷನ್‌ ಮುರಿದುಕೊಂಡು ಉಳಿದ ಹಣವನ್ನು ಆಸ್ತಿ ಮಾಲೀಕರಿಗೆ ಪಾವತಿಸಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ರಾಜೇಶ್‌ ಡೈರಿಯೂ ಸೇರಿದ್ದು, ಅದರಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಸಂಕೇತಾಕ್ಷರಗಳಲ್ಲಿ ಎಸಿ, ಎಇಇ, ಸಬ್‌ ರಿಜಿಸ್ಟ್ರಾರ್‌, ಸರ್ವೇಯರ್‌ ಮತ್ತಿತರ ಹೆಸರುಉಲ್ಲೇಖವಾಗಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

 ಅತ್ಯಂತ ಚಿಕ್ಕ ಮನೆಯಲ್ಲಿ ವಾಸವಾಗಿರುವ ರಾಜೇಶ್‌ ಕುಮಾರ್‌, ಮಹಿಳಾ ಸಹಕಾರಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾರೆ. 2009ರಲ್ಲೇ ‘ಚೆಕ್‌ ಡಿಸ್ಕೌಂಟ್‌’ ವ್ಯವಹಾರ ಆರಂಭಿಸಿದ್ದರೂ 2011, 2012 ಮತ್ತು 2013ರ ಬಳಿಕ ಬಿರುಸಿನ ವಹಿವಾಟು ನಡೆಸಿದ್ದಾರೆ. ಒಂದೊಂದು ದಿನ ಲಕ್ಷಾಂತರ ರೂಪಾಯಿ ಮೊತ್ತದ ಮೂರ್ನಾಲ್ಕು ವಹಿವಾಟು ಆಗಿದೆ. ಕಡಿಮೆ ಎಂದರೂ ₹ 30 ಕೋಟಿ ಮೊತ್ತದಷ್ಟು ಚೆಕ್‌ಗಳನ್ನು ಅವರು ನಗದೀಕರಿಸಿರಬಹುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಡೈರಿಯಲ್ಲಿ ಹೆಸರಿರುವ ಬಿಬಿಎಂ‍ಪಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಟಿಡಿಆರ್‌ ಹಗರಣದ ಸಂಪೂರ್ಣ ಆಳ– ಅಗಲದ ಅರಿವಾಗಲಿದೆ ಎಂದು ಮೂಲಗಳು ಹೇಳಿವೆ.

ಟಿಡಿಆರ್‌ ವಂಚನೆ ಪ್ರಕರಣದ ತನಿಖೆ ಮತ್ತು ಇದಕ್ಕೆ ಸಂಬಂಧಿಸಿದ ದಾಳಿಗಳು ಎಸಿಬಿ ಐಜಿ ಚಂದ್ರಶೇಖರ್‌ ಹಾಗೂ ಎಸ್‌ಪಿ ಡಾ. ಸಂಜೀವ ‍ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಡಿವೈಎಸ್‌ಪಿ ರವಿ ಕುಮಾರ್‌ ನೇತೃತ್ವದ ಒಂಬತ್ತು ಅಧಿಕಾರಿಗಳ ತಂಡ ಭಾಗವಹಿಸಿದೆ.

 ಏನಿದು ಟಿಡಿಆರ್ ಹಗರಣ?

ಬಿಬಿಎಂಪಿ ರಸ್ತೆಗಳ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡಗಳು ಮತ್ತು ನಿವೇಶನಗಳ ಅಳತೆಯನ್ನು ದಾಖಲೆಗಳಲ್ಲಿ ಹೆಚ್ಚುವರಿಯಾಗಿ ತೋರಿಸಿ, ಅಧಿಕ ಪರಿಹಾರ ಪಡೆದು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ ಮತ್ತು ಆಸ್ತಿ ಕಳೆದುಕೊಂಡ ರೈತರಿಗೂ ಸಂಪೂರ್ಣ ಪರಿಹಾರ ಪಾವತಿಸದೆ ವಂಚಿಸಿದ ಪ್ರಕರಣ ಇದಾಗಿದೆ.

ಪರಿಹಾರದ ಬೇಡವೆನ್ನುವ ಕಟ್ಟಡ, ನಿವೇಶನಗಳ ಮಾಲೀಕರಿಗೆ ಪರ್ಯಾಯವಾಗಿ ಅಭಿವೃದ್ಧಿ ಹಕ್ಕು ವರ್ಗಾಯಿಸುವ ವ್ಯವಸ್ಥೆ ಇದೆ. ಆಸ್ತಿ ಮಾಲೀಕರು ವರ್ಗಾವಣೆ ಹಕ್ಕು ಪತ್ರ ಪಡೆದು ಬೇರೆ ಕಟ್ಟಡಗಳ ನಿರ್ಮಾಣಕ್ಕೆ ಬಳಸಬಹುದು ಇಲ್ಲವೆ ಬೇರೆಯವರಿಗೆ ಮಾರಬಹುದು. ಇದರಲ್ಲೂ ಭಾರಿ ಅಕ್ರಮಗಳು ನಡೆದಿರುವುದನ್ನು ಎಸಿಬಿ ತನಿಖೆ ಬಯಲಿಗೆ ಎಳೆದಿದೆ.

**

9 ಅಧಿಕಾರಿಗಳ ತಂಡದಿಂದ ದಾಳಿ

ರಾಜೇಶ್‌ ಮನೆಯಲ್ಲಿ ಪತ್ತೆಯಾದ ಡೈರಿ

ಡೈರಿಯಲ್ಲಿ ಬಿಬಿಎಂಪಿ ಅಧಿಕಾರಿಗಳು, ರಾಜಕಾರಣಿಗಳ ಹೆಸರು?

ಚೆಕ್‌ ಡಿಸ್ಕೌಂಟ್‌ ವ್ಯವಹಾರ ನಡೆಸುವ ರಾಜೇಶ್‌

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !