ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಯಕರ ಮೌನದಿಂದ ಅವಮಾನವಾಗಿದೆ’- ತೇಜಸ್ವಿನಿ ಅನಂತಕುಮಾರ್‌

ಒಡಲ ನೋವು ಹಂಚಿಕೊಂಡ ಟಿಕೆಟ್‌ ಆಕಾಂಕ್ಷಿ
Last Updated 30 ಏಪ್ರಿಲ್ 2019, 13:23 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವರ್ತನೆಯಿಂದ ಅವಮಾನವಾಗಿದೆ. ನನಗೆ ಟಿಕೆಟ್‌ ತಪ್ಪಿಸಿದ್ದು ಏಕೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು’.

ಇದು ತೇಜಸ್ವಿನಿ ಅನಂತಕುಮಾರ್‌ ಸ್ಪಷ್ಟ ನುಡಿ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅವರ ಹೆಸರನ್ನು ಬಿಜೆಪಿ ರಾಜ್ಯ ಘಟಕ ಶಿಫಾರಸು ಮಾಡಿತ್ತು. ಚುನಾವಣಾ ಕಚೇರಿಯನ್ನು ತೆರೆದಿದ್ದ ತೇಜಸ್ವಿನಿ, ಪ್ರಚಾರದಲ್ಲೂ ತೊಡಗಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಯುವ ಮುಂದಾಳು ತೇಜಸ್ವಿ ಸೂರ್ಯ ಅವರಿಗೆ ಪಕ್ಷ ಟಿಕೆಟ್‌ ನೀಡಿತ್ತು. ಟಿಕೆಟ್‌ ಕೈತಪ್ಪಿದ ಎರಡು ದಿನಗಳ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತೇಜಸ್ವಿನಿ ಅವರು ಒಡಲ ನೋವು ಬಿಚ್ಚಿಟ್ಟಿದ್ದಾರೆ.

ಮಾತಿನ ಸಾರ ಇಲ್ಲಿದೆ

*ಕೊನೆಯ ಕ್ಷಣದಲ್ಲಿ ನನ್ನ ಹೆಸರು ಕೈಬಿಟ್ಟಿದ್ದು ಏಕೆ ಎಂಬುದು ಇಲ್ಲಿಯವರೆಗೂ ಗೊತ್ತಾಗಿಲ್ಲ. ಟಿಕೆಟ್‌ ನೀಡದ ಬಗ್ಗೆ ನನಗೆ ಬೇಸರ ಇಲ್ಲ. ಅವರು ನಡೆದುಕೊಂಡ ರೀತಿಯ ಬಗ್ಗೆ ನೋವಿದೆ ಹಾಗೂ ಆಘಾತವಾಗಿದೆ. ಅಭ್ಯರ್ಥಿಯ ಹೆಸರನ್ನು ನಡುರಾತ್ರಿ ಘೋಷಣೆ ಮಾಡಿದರು. ಮರುದಿನ ಬೆಳಿಗ್ಗೆಯಾದರೂ ಕರೆಮಾಡಿ ಏನಾಯಿತು ಎಂದು ತಿಳಿಸಬಹುದಿತ್ತು. ಆದರೆ, ನಾಯಕರು ಈ ಕೆಲಸ ಮಾಡಲಿಲ್ಲ.

*ನನ್ನ ಅತ್ತೆ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಪತಿ ಕೇಂದ್ರ ಸಚಿವರಾಗಿದ್ದರು. ಇದು ಸಾಮಾನ್ಯರ ಮನೆಯೇನೂ ಅಲ್ಲ. ಹಾಗೆಂದು, ನಾನು ಆ ಆಧಾರದಲ್ಲಿ ಟಿಕೆಟ್‌ ಕೇಳಿಲ್ಲ. ಆ ಆಧಾರದಲ್ಲಿ ಟಿಕೆಟ್‌ ಕೊಡುವುದೂ ಬೇಡ. ಪಕ್ಷಕ್ಕಾಗಿ 20 ವರ್ಷಗಳಿಂದ ದುಡಿದಿದ್ದೇನೆ. ನಾನು ಅನ್ಯ ಪಕ್ಷದಿಂದ ವಲಸೆ ಬಂದವಳೂ ಅಲ್ಲ.

*ಪತಿಯ ಸಾವಿನ ಅಪಾರ ನೋವಿನಲ್ಲಿದ್ದೆ. ಅದರಿಂದ ಹೊರಬರಲು ಯತ್ನಿಸುತ್ತಿದ್ದೆ. ಆ ಸಮಯದಲ್ಲಿ ಪಕ್ಷದ ನಾಯಕರು ಬಂದು ಸ್ಪರ್ಧೆ ಮಾಡುವಂತೆ ಕೋರಿಕೊಂಡರು. ಪಕ್ಷದ ಚುನಾವಣಾ ಕಾರ್ಯಾಲಯ ತೆರೆಯುವಂತೆ ಪಕ್ಷದ ನಾಯಕರೇ ಸೂಚಿಸಿದರು. ‍ಪ್ರಚಾರದ ಕರಪತ್ರಗಳನ್ನು ಸಿದ್ಧಪಡಿಸಿಕೊಟ್ಟವರೂ ಅವರೇ. ಒಂದುವೇಳೆ, ಮುಂಚಿತವಾಗಿ ತಿಳಿಸಿದ್ದರೆ ಈ ಎಲ್ಲ ಸಿದ್ಧತೆಗಳನ್ನು ಮಾಡುತ್ತಿರಲಿಲ್ಲ.

*ನಮ್ಮ ನಿಷ್ಠೆ ಯಾವಾಗಲೂ ಬಿಜೆಪಿಯ ಮೇಲೆಯೇ. ದೇಶ ಮೊದಲು. ನಮ್ಮ ಕಾರಣದಿಂದ ಬಿಜೆಪಿಯ ಸೀಟು ಕಡಿಮೆ ಆಗಬಾರದು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಮತದಾನಕ್ಕೆ ಇನ್ನು ಹೆಚ್ಚು ದಿನಗಳು ಇಲ್ಲ. ಹೀಗಾಗಿ, ಎಲ್ಲ ಬೇಸರಗಳನ್ನು ಬದಿಗೆ ಇಟ್ಟು ಪಕ್ಷದ ಪರ ಪ್ರಚಾರಕ್ಕೆ ಹೋಗುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದೇನೆ.

*ಈ ಘಟನೆಯ ಬಗ್ಗೆ ವಿವರಣೆ ಕೇಳಲು ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನು ಭೇಟಿ ಮಾಡಬೇಕು ಎಂದು ಆಲೋಚಿಸಿದ್ದೆ. ಆದರೆ, ದೆಹಲಿಗೆ ಹೋಗುವುದಿಲ್ಲ. ಈ ಬಗ್ಗೆ ಕೇಂದ್ರ ನಾಯಕರು ಬೆಳಕು ಚೆಲ್ಲಿ ಕಾರ್ಯಕರ್ತರ ದುಗುಡವನ್ನು ಕಡಿಮೆ ಮಾಡಲಿ.

ಉಸ್ತುವಾರಿಗೆ ಪ್ರತಿಭಟನೆಯ ಬಿಸಿ

ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರು ತೇಜಸ್ವಿನಿ ಅನಂತಕುಮಾರ್ ಅವರ ಮನೆಗೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದರು. ಈ ವೇಳೆ, ಕೇಂದ್ರ ನಾಯಕರ ಧೋರಣೆ ಖಂಡಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಿಂದಿನ‌ ಕಹಿ ಘಟನೆ ಮರೆತು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮುರಳೀಧರ ರಾವ್‌ ಮನವಿ ಮಾಡಿದರು. ಈ ವೇಳೆ, ತೇಜಸ್ವಿನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಟಿಕೆಟ್‌ ತಪ್ಪಿಸಿದ್ದು ಏಕೆ ಎಂದು ಮೊದಲು ಸ್ಪಷ್ಟಪಡಿಸಿ ಎಂದು ಖಾರವಾಗಿ ನುಡಿದರು.

ಮಾತುಕತೆ ಮುಗಿಸಿ ಮುರಳೀಧರ ರಾವ್‌ ಹೊರಬಂದಾಗ ಕಾರ್ಯಕರ್ತರು ಅಡ್ಡಗಟ್ಟಿ ಘೋಷಣೆ ಕೂಗಿದರು. ಕಾರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಅನಂತಕುಮಾರ್ ಸಹೋದರ ನಂದಕುಮಾರ್‌ ಕಾರ್ಯಕರ್ತರನ್ನು ಸಮಾಧಾನಪಡಿಸಿ ಮುರಳೀಧರ ರಾವ್‌ ಅವರು ತೆರಳಲು ಅನುವು ಮಾಡಿಕೊಟ್ಟರು.

* ಬೆಂಗಳೂರು ದಕ್ಷಿಣ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಾಯಕರ ಮನವೊಲಿಸಲಾಗುತ್ತದೆ. ಎಲ್ಲರೂ ಪ್ರಚಾರದಲ್ಲಿ ಭಾಗಿಯಾಗುತ್ತಾರೆ

–ಮುರಳೀಧರ ರಾವ್‌, ಪಕ್ಷದ ರಾಜ್ಯ ಉಸ್ತುವಾರಿ

–––

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT