ಭಾನುವಾರ, ಆಗಸ್ಟ್ 18, 2019
26 °C
ಎಚ್‌ಡಿಕೆ ವಿರುದ್ಧ ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ: ಉನ್ನತ ಮಟ್ಟದ ತನಿಖೆ ಸಾಧ್ಯತೆ?

ಫೋನ್‌ ಕದ್ದಾಲಿಕೆ ‘ಸದ್ದು’

Published:
Updated:

ಬೆಂಗಳೂರು: ಪೊಲೀಸ್ ಅಧಿಕಾರಿಗಳ ದೂರವಾಣಿ ಕದ್ದಾಲಿಕೆಯ ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೇ, ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರು, ವಿರೋಧ ಪಕ್ಷ ಹಾಗೂ ಬಂಡಾಯ ಎದ್ದಿದ್ದ ಶಾಸಕರ ಕರೆಗಳ ಮೇಲೂ ಕಳ್ಳಗಿವಿ ಇಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ‘ಕದ್ದಾಲಿಕೆ’ ನಡೆದಿದೆ ಎಂದು ಬಿಜೆಪಿ ಶಾಸಕರು ಹಾಗೂ ಅನರ್ಹಗೊಂಡಿರುವ ಶಾಸಕರು ಆಪಾದಿಸಿದ್ದು, ಕದ್ದಾಲಿಕೆ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದೆ. 

‘ನನ್ನ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ದೂರವಾಣಿ ಕದ್ದಾಲಿಸಲಾಗುತ್ತಿದೆ’ ಎಂದು 2018ರ ಆಗಸ್ಟ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದರು. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಸಂದೀಪ್‌ ಪಾಟೀಲ ನೀಡಿರುವ ವರದಿ ಅದನ್ನು ಪುಷ್ಟೀಕರಿಸಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಮುಖ್ಯ ಕಾರ್ಯದರ್ಶಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಕದ್ದಾಲಿಕೆ ಕುರಿತ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದೋ ಅಥವಾ ತನಿಖೆಗಾಗಿ ಪ್ರತ್ಯೇಕ ಎಸ್‌ಐಟಿ ರಚಿಸುವುದೋ ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿದೆ’ ಎಂದು ಮೂಲಗಳು ಹೇಳಿವೆ.

‘ಎಚ್‌ಡಿಕೆ ಸೂಚನೆಯಂತೆ ಕದ್ದಾಲಿಕೆ’

ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಮಂದಿಯ ಫೋನ್ ಕರೆಗಳ ಕದ್ದಾಲಿಕೆ ನಡೆದಿದೆ. ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕಚೇರಿಯಿಂದಲೇ ಇದಕ್ಕೆ ಸೂಚನೆ ಹೋಗಿದೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಆರೋಪಿಸಿದರು.

ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇದೊಂದು ಅಸಹ್ಯಕರ ಘಟನೆ. ಇದರಿಂದ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳಿದರು.

‘ನಿಮ್ಮ ಸಂಭಾಷಣೆಯ ಆಡಿಯೊ ಸಿಕ್ಕಿದೆ. ರಾಜೀನಾಮೆ ಹಿಂಪಡೆದು, ವಾಪಸ್ ಬನ್ನಿ’ ಎಂದು ಕರೆ ಮಾಡಿ, ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ತನಿಖೆಗೆ ಆದೇಶಿಸಬೇಕು. ಕದ್ದಾಲಿಸಿದವರಿಗೆ ಶಿಕ್ಷೆ ಆಗಬೇಕು. ಕೇಂದ್ರ ಸರ್ಕಾರ ಕೂಡ ಮಧ್ಯ ಪ್ರವೇಶಿಸಬೇಕು’ ಎಂದು ಅವರು ಒತ್ತಾಯಿಸಿದರು.

ಫೋನ್ ಕದ್ದಾಲಿಕೆ ಪ್ರವರ

l1984– ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ವಿರುದ್ಧ ಫೋನ್ ಕದ್ದಾಲಿಕೆ ಹಗರಣ ಕೇಳಿಬಂದಿತ್ತು.

l2011– ‘ಪ್ರಭಾವಿಗಳ ಮನೆಯಿಂದಲೇ ನನ್ನ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ’ ಎಂದು ಅಂದು ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದರು.

l2017– ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್, ಕಮಲ ಪಕ್ಷದ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ದೂರಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಕೇಂದ್ರದ ಬಿಜೆಪಿ ಸರ್ಕಾರವೇ ರಾಜ್ಯದ 35ಕ್ಕೂ ಹೆಚ್ಚು ಸಚಿವರು, ಶಾಸಕರ ಫೋನ್ ಕದ್ದಾಲಿಸುತ್ತಿದೆ’ ಎಂದಿದ್ದರು.

***

ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. -ಎಚ್.ಡಿ.ಕುಮಾರಸ್ವಾಮಿ

***

 ರಕ್ಷಣೆ ಮಾಡುವವರೇ ದೂರವಾಣಿ ಕದ್ದಾಲಿಕೆ ಮಾಡಿಸಿದರೆ ಏನು ಮಾಡುವುದು. ಈ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು. -ಡಿ.ವಿ.ಸದಾನಂದಗೌಡ, ಕೇಂದ್ರ ರಸಗೊಬ್ಬರ ಸಚಿವ

Post Comments (+)