ಬುಧವಾರ, ಸೆಪ್ಟೆಂಬರ್ 18, 2019
25 °C

ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ₹ 30 ಲಕ್ಷ ದಂಡ ಸಂಗ್ರಹ

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ (ತಿದ್ದುಪಡಿ) ಅನ್ವಯ ನಗರದಾದ್ಯಂತ ಒಂದೇ ದಿನದಲ್ಲಿ ₹ 30 ಲಕ್ಷ ದಂಡ ವಿಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಕೇಂದ್ರದ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಸೆಪ್ಟೆಂಬರ್ 3ರಂದು ಕರ್ನಾಟಕ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ತಕ್ಷಣದಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಇದರ ಪ್ರಕಾರ, ಸೆಪ್ಟೆಂಬರ್‌ 4ರಿಂದ ದಂಡದ ಪರಿಷ್ಕೃದ ಮೊತ್ತಗಳನ್ನು ಪಿಡಿಎನಲ್ಲಿ ಅಳವಡಿಸಿಕೊಳ್ಳಲಾಗಿದೆ. ಬಳಿಕ ಸೆಪ್ಟೆಂಬರ್ 5ರ ಮಧ್ಯಾಹ್ನ 1 ಗಂಟೆಯವರೆಗೆ ನಗರದಾದ್ಯಂತ ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಒಟ್ಟು ₹ 30 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸದಿರುವುದಕ್ಕೇ ಹೆಚ್ಚು: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಪ್ರಕರಣಗಳೇ ಹೆಚ್ಚು ದಾಖಲಾಗಿವೆ. 1,518 ಪ್ರಕರಣ ದಾಖಲಾಗಿದ್ದು, ₹ 15,18,000 ದಂಡ ಸಂಗ್ರಹಿಸಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದ 1,121 ಪ್ರಕರಣ ದಾಖಲಾಗಿದ್ದು, ₹ 11,21,000 ದಂಡ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ: ನಗರದಲ್ಲಿ 2 ಸಾವಿರ ದಂಡ ವಸೂಲಿ

ಅಧಿಸೂಚನೆ ಹೊರಡಿಸಿದ ದಿನವಾದ ಸೆಪ್ಟೆಂಬರ್ 3ರಂದು ರಾತ್ರಿಯೇ ಹೊಸ ಕಾನೂನಿನ ಅನ್ವಯ ಸಂಚಾರ ಪೊಲೀಸರು ಅಧಿಕ ಮೊತ್ತದ ದಂಡ ವಿಧಿಸಿದ್ದರು. ಮದ್ಯ ಸೇವಿಸಿ ಬೈಕ್ ಚಲಾಯಿಸಿದ ವ್ಯಕ್ತಿಗೆ ₹ 10 ಸಾವಿರ, ಹೆಲ್ಮೆಟ್ ಧರಿಸದ ವ್ಯಕ್ತಿಗೆ ₹ 2 ಸಾವಿರ, ಮತ್ತೊಬ್ಬ ವ್ಯಕ್ತಿಗೆ ₹ 17 ಸಾವಿರ ದಂಡ ವಿಧಿಸಿದ್ದರು.

ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿನೆ: ಸವಾರನಿಗೆ ಬರೋಬ್ಬರಿ ₹ 17 ಸಾವಿರ ದಂಡ!

ಚಾಲನಾ ಪರವಾನಗಿ ಇಲ್ಲದೆ, ಹೆಲ್ಮೆಟ್‌ ಧರಿಸದೆ, ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಲಾಯಿಸಿದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೆಪ್ಟೆಂಬರ್ 4ರಂದು ₹ 17 ಸಾವಿರ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ ₹32,500 ದಂಡ

Post Comments (+)