ಭಾನುವಾರ, ಸೆಪ್ಟೆಂಬರ್ 22, 2019
25 °C

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ ₹32,500 ದಂಡ

Published:
Updated:

ಗುರುಗ್ರಾಮ: ಹೆಲ್ಮೆಟ್‌ ಇಲ್ಲದೆಯೇ ವಾಹನ ಚಲಾಯಿಸಿದ್ದು ಹಾಗೂ ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದ್ವಿಚಕ್ರ ಚಾಲಕರಿಗೆ ಟ್ರಾಫಿಕ್ ಪೊಲೀಸರು ₹23,000 ದಂಡ ವಿಧಿಸಿದ್ದು ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆಟೋ ಚಾಲಕರೊಬ್ಬರಿಗೆ ಪೊಲೀಸರು ₹32,500 ದಂಡ ವಿಧಿಸಿದ್ದು ವರದಿಯಾಗಿದೆ.

ಇದನ್ನೂ ಓದಿ:  ಸ್ಕೂಟಿ ಮೌಲ್ಯಕ್ಕಿಂತ ದಂಡವೇ ಹೆಚ್ಚು!

ಮಂಗಳವಾರ  ಸಿಕಂದರ್‌ಪುರ್, ಸೆಕ್ಟರ್  26ರಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ದೀಪ ಉರಿಯುತ್ತಿರುವಾಗ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಆಟೋ ಚಾಲಕ ಮೊಹಮ್ಮದ್  ಮುಸ್ತಾಕಿಲ್ ಎಂಬವರಿಗೆ  ದಂಡ ವಿಧಿಸಲಾಗಿದೆ.  ವಾಹನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತೋರಿಸಲು ಹೇಳಿದಾಗ ತಾನು ಡಿಎಲ್‌ಎಫ್  ಫೇಸ್-3ಯಲ್ಲಿರುವ ಮನೆಯಲ್ಲಿ ಮರೆತು ಬಂದಿರುವುದಾಗಿ ಆಟೋ ಚಾಲಕ ಹೇಳಿದ್ದಾರೆ.

10 ನಿಮಿಷ ಕೊಡಿ, ನಾನು ಮನೆಗೆ ಹೋಗಿ ಎಲ್ಲ ದಾಖಲೆ ಪತ್ರಗಳನ್ನು ತಂದುಕೊಡುತ್ತೇನೆ ಎಂದು ಅವರಲ್ಲಿ ಬೇಡಿಕೊಂಡರೂ ಅವರು ಒಪ್ಪಲಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ  ದಂಡ ಏರಿಕೆ ಮಾಡಿದ ವಿಷಯ ನನಗೆ ಗೊತ್ತಿರಲಿಲ್ಲ ಎಂದು ಪಶ್ಚಿಮ ಬಂಗಾಳದ ನಿವಾಸಿಯಾಗಿರುವ ಮುಸ್ತಾಕಿಲ್ ಹೇಳಿದ್ದಾರೆ. 

ಟ್ರಾಫಿಕ್ ನಿಯಮ ಉಲ್ಲಂಘಿಸಿದಕ್ಕಾಗಿ ಆಟೋವನ್ನು ಟ್ರಾಫಿಕ್ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆಟೋ ಚಾಲಕನಿಗೆ ನೀಡಿದ ಚಲನ್ ಪ್ರಕಾರ ಪರವಾನಗಿ ದಾಖಲೆ ಇಲ್ಲದೆ ವಾಹನ ಚಲಾವಣೆ (₹5,000),  ನೋಂದಣಿ ಪ್ರಮಾಣ ಪತ್ರ (₹5000), ಥರ್ಡ್ ಪಾರ್ಟಿ ವಿಮೆ (₹2000), ವಾಯು ಮಾಲಿನ್ಯಕ್ಕಾಗಿ  (₹10000), ನೋಂದಣಿ ಮಾಡಿದ ನಂಬರ್ ಪ್ಲೇಟ್  (₹500), ಅಪಾಯಕಾರಿ ಚಾಲನೆ  (₹5000) ಮತ್ತು ಟ್ರಾಫಿಕ್ ಸಿಗ್ನಲ್ ಜಂಪ್ (₹5000) ದಂಡ ವಿಧಿಸಲಾಗಿದೆ.

ಇದನ್ನೂ ಓದಿ:  ಸಂಚಾರ: ಭಾರಿ ದಂಡಕ್ಕೆ ಅವಕಾಶ

 ಮೂರು ದಿನಗಳ ಹಿಂದೆ ಈ ಘಟನೆ ನಡೆಯುತ್ತಿದ್ದರೆ ಇಷ್ಟೊಂದು ತಪ್ಪುಗಳಿಗಾಗಿ  ₹4,700- ₹6,700 ದಂಡ ವಿಧಿಸುತ್ತಿದ್ದರು ಟ್ರಾಫಿಕ್ ಪೊಲೀಸ್.

ಬುಧವಾರ ನಾನು ರಾಜೀವ್ ಚೌಕ್‌ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹೋಗುತ್ತೇನೆ. ನನ್ನ ಆಟೊ ವಾಪಸ್ ಪಡೆಯುವುದಕ್ಕಾಗಿ ಒಳ್ಳೆಯ ವಕೀಲರನ್ನು ಭೇಟಿ ಮಾಡಬೇಕು ಎಂದು  ಅಧಿಕಾರಿಗಳು ಹೇಳಿದ್ದಾರೆ. ನನ್ನಲ್ಲಿ ಎಲ್ಲ ದಾಖಲೆ ಪತ್ರಗಳು ಇವೆ. ಚಲಾನ್‌ನಲ್ಲಿ ಹೇಳಿರುವ ದಂಡ ಕಡಿಮೆಯಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಜುಲೈ ತಿಂಗಳಲ್ಲಿ  ಮೋಟರ್ ವಾಹನ  (ತಿದ್ದುಪಡಿ) ಕಾಯ್ದೆ 2019 ಅಂಗೀಕಾರಗೊಂಡಿತ್ತು.  ಟ್ರಾಫಿಕ್  ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈ ಕಾಯ್ದೆಯಲ್ಲಿ ನಿರ್ಧರಿಸಲಾಗಿತ್ತು. ಈ ಕಾಯ್ದೆ ಹರ್ಯಾಣದಲ್ಲಿ ಭಾನುವಾರ ಅನುಷ್ಠಾನಕ್ಕೆ ಬಂದಿದೆ. ಗುರುಗ್ರಾಮ ಟ್ರಾಫಿಕ್ ಪೊಲೀಸರ ಪ್ರಕಾರ ಮೊದಲ ದಿನ 818 ಚಲನ್  ಮತ್ತು ಸೋಮವಾರ 950 ಚಲನ್ ನೀಡಲಾಗಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು, ವಾಯು ಮಾಲಿನ್ಯ ಮೊದಲಾದ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಗುರುಗ್ರಾಮ ಟ್ರಾಫಿಕ್ ಪೊಲೀಸರು ಆಟೋ ಚಾಲಕರೊಬ್ಬರಿಗೆ   47,500 ದಂಡ ವಿಧಿಸಿದ್ದಾರೆ ಎಂದು ಸೌಮ್ಯಜಿತ್ ಪಟ್ನಾಯಿಕ್ ಎಂಬವರು ಟ್ವೀಟಿಸಿದ್ದಾರೆ.

ಇದನ್ನೂ ಓದಿ: ದುಬಾರಿ ದಂಡದ ಭೀತಿ ಉಲ್ಲಂಘನೆಗೆ ಅಂಕುಶ

Post Comments (+)