ನೂತನ ಶಾಸಕರಿಗೆ ತರಬೇತಿ ಶಿಬಿರ: ಬೆರಳೆಣಿಕೆಯಷ್ಟು ಶಾಸಕರು ಭಾಗಿ

7

ನೂತನ ಶಾಸಕರಿಗೆ ತರಬೇತಿ ಶಿಬಿರ: ಬೆರಳೆಣಿಕೆಯಷ್ಟು ಶಾಸಕರು ಭಾಗಿ

Published:
Updated:

ಬೆಂಗಳೂರು: 'ಯಾವುದೇ ಕಾರಣಕ್ಕೂ ಸದನಕ್ಕೆ ಗೈರಾಗಬೇಡಿ. ಯಾರೂ ಕುಳಿತುಕೊಳ್ಳಲಾರದ ಜಾಗದಲ್ಲಿ ಕುಳಿತುಕೊಳ್ಳಲು ನಿಮಗೆ ಅವಕಾಶ ದೊರೆತಿದ್ದು, ಅದನ್ನು ಉಪಯೋಗಿಸಿಕೊಳ್ಳಿ' ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ನೂತನ ಶಾಸಕರಿಗೆ ಕಿವಿಮಾತು ಹೇಳಿದರು.

ವಿಕಾಸಸೌಧದಲ್ಲಿ ಉಭಯ ಸದನಗಳ ನೂತನ ಶಾಸಕರಿಗಾಗಿ ಏರ್ಪಡಿಸಿದ ಎರಡು ದಿನಗಳ ತರಬೇತಿ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, 'ನಿಮ್ಮ ಸಬ್ಜೆಕ್ಟ್ ಇಲ್ಲ ಅಂದರೂ ಸದನಕ್ಕೆ ಬನ್ನಿ. ಅಜೆಂಡಾ ನೋಡಿಕೊಳ್ಳಿ. ನಿಮ್ಮ ಡ್ರೆಸ್ ಸೆನ್ಸ್ ಚೆನ್ನಾಗಿರಲಿ. ಬಯಸಿದವರೆಲ್ಲಾ ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಬರುವುದಕ್ಕೆ ಆಗಲ್ಲ. 6 ಕೋಟಿ ಜನರ ಪೈಕಿ 224 ಶಾಸಕರು ಮತ್ತು 75 ವಿಧಾನ ಪರಿಷತ್ ಸದಸ್ಯರಿಗೆ ಮಾತ್ರ ಅವಕಾಶ. ನೀವು ಪುಣ್ಯವಂತರಾಗಿರಬಹುದು' ಎಂದರು.

'ಯಾವುದೋ ಅಗೋಚರ ಶಕ್ತಿ ನಿಮ್ಮ ಹಿಂದೆ ಇದ್ದರೆ ಮಾತ್ರ ನೀವು ಆ ಮೆಟ್ಟಿಲು ಹತ್ತಲು ಸಾಧ್ಯ. ರಾಜಕಾರಣದ ಬಗ್ಗೆ ಯಾರು ಎಷ್ಟೇ ಅಪಹಾಸ್ಯ ಮಾಡಿದರೂ ಟೀಕೆ ಮಾಡಿದರೂ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಷ್ಟೇ ಮಂದಿಗೆ ಮಾತ್ರ ಇಲ್ಲಿ ಪ್ರವೇಶಿಸಲು ಅವಕಾಶ ಇರುವುದು' ಎಂದು ವಿವರಿಸಿದರು.

'ನಾನು ಸ್ಪೀಕರ್ ಆದ ನಂತರ ಯಾವ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿಲ್ಲ. ಏಕೆಂದರೆ ಮಾಧ್ಯಮಗಳು ತುಂಬಾ ಚುರುಕಾಗಿವೆ. ನಾವು ಯಾವುದೋ ಹುರುಪಿನಲ್ಲಿ ಏನೋ ಮಾತನಾಡಿದರೆ ಅದೇ ದೊಡ್ಡದಾಗುತ್ತದೆ. ಸ್ಪೀಕರ್ ಸ್ಥಾನಕ್ಕೆ ಗೌರವ ತರುವ ಭಾರ ನನ್ನ ಮೇಲಿದೆ' ಎಂದರು.

'ಇತ್ತೀಚೆಗೆ ಶಾಸಕರಲ್ಲಿ ಕೇವಲ ಕಾಟಾಚಾರಕ್ಕೆ ಸಭೆಗೆ ಬರುವ, ಬಂದರೂ ಸಹಿ ಮಾಡಿ ಲಾಂಜ್ ನಲ್ಲಿ ಕೂರುವ ಪ್ರವೃತ್ತಿ ಹೆಚ್ಚಾಗಿದೆ' ಎಂದು ವಿಧಾನಪರಿಷತ್ತು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, 'ರಾತ್ರಿ 9 ಗಂಟೆ ನಂತರ ಶಾಸಕರ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದೇವೆ. ಶಾಸಕರ ವೈಯಕ್ತಿಕ ಜೀವನಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶ. ಆದರೆ, ಆರೇಳು ಜನ ಬೆಂಬಲಿಗರು ಬರುತ್ತಾರೆ, ಬಿಡಲಿಲ್ಲ ಎಂದರೆ ಗಲಾಟೆ ಮಾಡುತ್ತಾರೆ. ಶಾಸಕರು ಮತ್ತು ಬೆಂಬಲಿಗರ ಕಾರ್ಯವೈಖರಿಯೂ ಬದಲಾಗಿದೆ. ಸಮಿತಿಗಳ ಕಾರ್ಯವೈಖರಿಯೂ ಅಷ್ಟೇ ಟಿಎಡಿಎ ಸಮಿತಿಗಳು ಎಂಬಂತಾಗಿದೆ. ಸಮಿತಿ ಸಭೆಗಳಲ್ಲಿ ಸಿಗುವಷ್ಟು ಮಾಹಿತಿ ಬೇರೆಲ್ಲೂ ಸಿಗುವುದಿಲ್ಲ' ಎಂದು ತಿಳಿಸಿದರು.

ನೂತನ ಶಾಸಕರ ನಿರಾಸಕ್ತಿ: ತರಬೇತಿ ಶಿಬಿರದಲ್ಲಿ ಬೆರಳೆಣಿಕೆಯಷ್ಟು ನೂತನ ಶಾಸಕರು ಭಾಗವಹಿಸಿದರು. ವಿಧಾನಸಭೆಗೆ ಮೊದಲ ಬಾರಿಗೆ 61 ಶಾಸಕರು ಆಯ್ಕೆಯಾಗಿದ್ದು, 17 ಮಂದಿ ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 78 ಶಾಸಕರು ಚುನಾಯಿತರಾಗಿದ್ದಾರೆ. ಈ‌ ಪೈಕಿ ಬೆಳಗ್ಗಿನ ಸೆಷನ್ ವೇಳೆ ಸುಮಾರು 30 ನೂತನ ಶಾಸಕರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !