ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನ; ಇನ್ನೂ ಇಬ್ಬರ ಬಂಧನ

7
ರಾಜ್ಯದಾದ್ಯಂತ ಮುಂದುವರಿದ ಸಿಸಿಬಿ ಕಾರ್ಯಾಚರಣೆ

ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನ; ಇನ್ನೂ ಇಬ್ಬರ ಬಂಧನ

Published:
Updated:

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ್ದ ಜಾಲದ ಪತ್ತೆಗಾಗಿ ರಾಜ್ಯದಾದ್ಯಂತ ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಮಂಗಳವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಲದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮಲ್ಲಪ್ಪ ಅಲಿಯಾಸ್ ಮಲ್ಲೇಶ್ (45) ಹಾಗೂ ಪಿಎಸ್‌ಐ ಹುದ್ದೆ ಆಕಾಂಕ್ಷಿ ಬೆಳಗಾವಿಯ ಶ್ರೀಶೈಲ ಪೂಜಾರ (26) ಬಂಧಿತರು ಎಂದು ಗೊತ್ತಾಗಿದೆ. 

ಬಾಗಲಕೋಟೆ, ಕೊಪ್ಪಳ, ವಿಜಯಪುರ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಈಗಾಗಲೇ 16 ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈಗ ತುಮಕೂರು, ಮಡಿಕೇರಿ, ಬಳ್ಳಾರಿ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ
ಓದಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಹೀಗಾಗಿಯೇ ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿದ ಜಾಲವನ್ನು ಬುಡಸಮೇತ ಕಿತ್ತೆಸೆಯಲು ಕಾರ್ಯಾಚರಣೆ ಮುಂದುವರಿಸಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಸಿಬಿ ತಂಡಗಳು ಮೊಕ್ಕಾಂ ಹೂಡಿವೆ. ಜಾಲದ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿವೆ. ಕಾರ್ಯಾಚರಣೆ ಮುಗಿದ ಬಳಿಕ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು’ ಎಂದು ಹೇಳಿದರು.

ಪರಾರಿಯಾದವರಿಗಾಗಿ ಹುಡುಕಾಟ: ‘ಪಿಎಸ್‌ಐ ನೇಮಕಾತಿ ಪರೀಕ್ಷೆ ಭಾನುವಾರ ಸುಗಮವಾಗಿ ನಡೆದಿದೆ. ಪರೀಕ್ಷೆಗೂ ಮುನ್ನದಿನವಾದ ಶನಿವಾರ ಗೋಕಾಕ ತಾಲ್ಲೂಕಿನ ಕೌಜಲಗಿ ಸಮೀಪದ ಕಳ್ಳಿಗುದ್ದಿ ಗ್ರಾಮದ ನಿರ್ಮಾಣ ಹಂತದ ಕಟ್ಟಡದ ಮೇಲೆ ದಾಳಿ ಮಾಡಲಾಗಿತ್ತು. ಕಟ್ಟಡದಲ್ಲಿದ್ದ 26 ಅಭ್ಯರ್ಥಿಗಳ ಪೈಕಿ ಎಂಟು ಮಂದಿಯನ್ನಷ್ಟೇ ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಬೆಂಗಳೂರಿನಲ್ಲೂ ಅಭ್ಯರ್ಥಿಗಳು: ‘ಪ್ರಕರಣ ಸಂಬಂಧ ಈಗಾಗಲೇ ಬಂಧಿಸಲಾಗಿರುವ ಹೊಸಕೋಟೆಯ ಅಭ್ಯರ್ಥಿ ಸಂತೋಷ್, ‘ಬೆಂಗಳೂರಿನಲ್ಲಿರುವ ಕೆಲವು ಅಭ್ಯರ್ಥಿಗಳು ಸಹ ಪ್ರಶ್ನೆಪತ್ರಿಕೆಗಾಗಿ ಜಾಲದ ಸದಸ್ಯರಿಗೆ ಹಣ ಕೊಟ್ಟಿದ್ದರು’ ಎಂಬ ಮಾಹಿತಿ ನೀಡಿದ್ದಾರೆ. ಅದನ್ನು ಆಧರಿಸಿ ಅಭ್ಯರ್ಥಿಗಳನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !