ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವೊಲಿಕೆಗೆ ಬಗ್ಗಿದ ಮುದ್ದಹನುಮೇಗೌಡ, ರಾಜಣ್ಣ?

Last Updated 2 ಮೇ 2019, 10:41 IST
ಅಕ್ಷರ ಗಾತ್ರ

ಬೆಂಗಳೂರು:‌ ತುಮಕೂರಿನಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಸಂಸದ ಮುದ್ದಹನುಮೇಗೌಡ ಮತ್ತು ಮುಖಂಡ ಕೆ.ಎನ್. ರಾಜಣ್ಣ ಅವರನ್ನು ಮನವೊಲಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ತಮ್ಮ ನಿವಾಸ ‘ಕಾವೇರಿ’ಗೆ ರಾಜಣ್ಣ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ ಸಿದ್ದರಾಮಯ್ಯ, ನಾಮಪತ್ರ ವಾಪಾಸು ಪಡೆಯುವಂತೆ ಮನವಿ ಮಾಡಿದರು. ಸಿದ್ದರಾಮಯ್ಯ ಮಾತಿಗೆ ರಾಜಣ್ಣ ಸಹಮತ ಸೂಚಿಸಿದ್ದಾರೆ.

ಮುದ್ದಹನುಮೇಗೌಡ ಅವರಿಗೂ ದೂರವಾಣಿ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ತಕ್ಷಣಕ್ಕೆ ಮುದ್ದಹನುಮೇಗೌಡ ಯಾವುದೇ ಭರವಸೆ ನೀಡಿಲ್ಲ ಎನ್ನಲಾಗಿದೆ. ಆದರೆ, ಅವರೂ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ನಾಮಪತ್ರ ಹಿಂತೆಗೆದುಕೊಳ್ಳಲು ಶುಕ್ರವಾರ ( ಮಾರ್ಚ್‌ 29) ಕೊನೆಯ ದಿನ.

‘ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಮುನ್ನ ಪಕ್ಷದ ನಾಯಕರು ಸೌಜನ್ಯಕ್ಕೂ ಒಂದು ಮಾತು ಕೇಳಿಲ್ಲ ಎಂಬುದು ಮುದ್ದಹನುಮೇಗೌಡರ ಅಸಮಾಧಾನಕ್ಕೆ ಕಾರಣ. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು ಎರಡು ಗಂಟೆ ಸಂಧಾನ ನಡೆಸಿದ ವೇಳೆಯೂ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಪಟ್ಟು ಹಿಡಿದರು. ಉಳಿದಂತೆ ಅವರಿಗೆ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ಅವರು ಕಣದಿಂದ ಹಿಂದಕ್ಕೆ ಸರಿಯಲಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

‘ಕಾರ್ಯಕರ್ತರ ಜತೆ ಚರ್ಚಿಸಿ ನಿರ್ಧಾರ’

ತುಮಕೂರು: ‘ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಮುಖಂಡರ ಸಭೆ ಕರೆದಿದ್ದೇನೆ. ಅಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ನಾನು ನಡೆದುಕೊಳ್ಳುತ್ತೇನೆ’ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ತಿಳಿಸಿದರು.

ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯಬೇಕೆ ಬೇಡವೇ ಎಂಬ ಬಗ್ಗೆ ಬೆಳಿಗ್ಗೆ ನಡೆಯುವ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ನನ್ನೊಂದಿಗೆ ಮಾತನಾಡಿ ನಾಮಪತ್ರ ವಾಪಸ್‌ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಅವರು ಹೇಳಿದರು.

‘ನಾನು ನನ್ನ ಕ್ಷೇತ್ರ ವ್ಯಾಪ್ತಿಯ ಮುಖಂಡರು ಮತ್ತು ಹಿತೈಷಿಗಳ ಆದೇಶದ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಈಗ ಅವರನ್ನು ಕೇಳಿಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ಥೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT