ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೇಗುದಿ | ಸಂಪುಟದಲ್ಲಿ ಸ್ಥಾನಕ್ಕೆ ಕೊನೇ ಕ್ಷಣದ ಕಸರತ್ತು, ಮೂಲ ಶಾಸಕರ ಸಭೆ

ಯೋಗೇಶ್ವರ ಸಚಿವ ಸ್ಥಾನದ ಪ್ರಸ್ತಾವಕ್ಕೆ ವಿರೋಧ | ಮೂಲ ಬಿಜೆಪಿ ಶಾಸಕರ ಪ್ರತ್ಯೇಕ ಸಭೆ
Last Updated 3 ಫೆಬ್ರುವರಿ 2020, 11:10 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಎರಡೇ ದಿನ ಬಾಕಿ ಉಳಿದಿರುವ ಬೆನ್ನಲ್ಲೇ, ಆಂತರಿಕ ಬೇಗುದಿ ತಾರಕಕ್ಕೇರಿದೆ. ಮೂಲ ಬಿಜೆಪಿಯ 10 ಕ್ಕೂ ಹೆಚ್ಚು ಶಾಸಕರು ಸೋಮವಾರ ಮಧ್ಯಾಹ್ನ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಚುನಾವಣೆಯಲ್ಲಿ ಸೋತಿರುವ ಸಿ.ಪಿ.ಯೋಗೇಶ್ವರ ಅವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು, ಒಂದು ವೇಳೆ ನೀಡುವುದರಿದ್ದರೆ, ಎಂ.ಟಿ.ಬಿ. ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಮುರುಗೇಶ ನಿರಾಣಿ, ಪರಣ್ಣ ಮುನವಳ್ಳಿ, ಡಾ.ಶಿವರಾಜ್‌ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ ಮುಂತಾದವರು ಭಾಗವಹಿಸಿದ್ದರು.

ಚಟುವಟಿಕೆ ಕೇಂದ್ರವಾದ ಬಿಎಸ್‌ವೈ ನಿವಾಸ

ಸೋಮವಾರ ಬೆಳಿಗ್ಗೆಯಿಂದಲೇ ಸಚಿವಾ ಸ್ಥಾನದ ಆಕಾಂಕ್ಷಿ ಶಾಸಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿರುವ ನೆಹರೂ ಓಲೆಕಾರ್‌ ಅವರೂ ಇಂದು ಬೆಳಿಗ್ಗೆ ಮತ್ತೊಮ್ಮೆ ಭೇಟಿ ಮಾಡಿ, ತಾವು ಹಿರಿಯ ಶಾಸಕರಾಗಿದ್ದು, ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೆ, ಕೆ.ಆರ್‌.ಪೇಟೆ ಶಾಸಕ ನಾರಾಯಣ ಗೌಡ ಮತ್ತು ಉಪ ಚುನಾವಣೆಯಲ್ಲಿ ಸೋತ ಎಚ್‌.ವಿಶ್ವನಾಥ್‌ ಅವರೂ ಧವಳಗಿರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಈ ಹಿಂದೆ ಮಾತುಕೊಟ್ಟಂತೆ ಎಚ್‌.ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.

ಕಲ್ಯಾಣ ಕರ್ನಾಟಕಕ್ಕೆ ಸೂಕ್ತ ಪ್ರಾತನಿಧ್ಯ ನೀಡಲು ಒತ್ತಾಯ

ಈ ಮಧ್ಯೆ ಶಾಸಕ ರಾಜುಗೌಡ ಅವರು ಯೋಗೇಶ್ವರ ಅವರ ಸೇರ್ಪಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋತಿರುವವರಿಗೆ ಸಚಿವ ಸ್ಥಾನ ನೀಡುವುದಾದರೆ, ನಾವು ಶಾಸಕರಾಗಿ ಏಕೆ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ (ಹೈದರಾಬಾದ್‌ ಕರ್ನಾಟಕ) ಭಾಗ ತುಂಬಾ ಹಿಂದುಳಿದಿದೆ. ಸಂಪುಟ ವಿಸ್ತರಣೆಯಲ್ಲಿ ಈ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲೂ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿತ್ತು. ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಇಲ್ಲವಾದರೆ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ರಾಜುಗೌಡ ಹೇಳಿದರು.

ನಮ್ಮ ಭಾಗಕ್ಕೆ ಪ್ರಾತಿನಿಧ್ಯ ನೀಡದೇ ಇದ್ದರೆ ಜನತೆ ಪ್ರಶ್ನಿಸುತ್ತಾರೆ. ಅವರಿಗೆ ಉತ್ತರ ನೀಡುವುದು ಕಷ್ಟವಾಗುತ್ತದೆ. ಈ ಬಗ್ಗೆ ಚರ್ಚಿಸಲು 10 ಜನ ಸೇರಿ ಸಭೆ ಮಾಡಿದ್ದೇವೆ. ನಮ್ಮ ಭಾಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಸಚಿವ ಸ್ಥಾನ ನೀಡದಿದ್ದರೆ, ಪಕ್ಷ ಬಿಡುತ್ತೇವೆ ಎಂಬ ಬೆದರಿಕೆ ಹಾಕುವುದಿಲ್ಲ. ಹಿಂದಿನಿಂದಲೂ ಬಿಜೆಪಿಯಲ್ಲಿ ಇದ್ದೇನೆ. ಮುಂದೆಯೂ ಇರುತ್ತೇನೆ ಎಂದು ಅವರು ಹೇಳಿದರು.

ನಮ್ಮ ಭಾಗದ ಶಾಸಕರು ಒಟ್ಟಿಗೆ ಸೇರಿ ಸಭೆ ಮಾಡಿದ್ದೇವೆ ಎಂದರೆ, ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಬೇಕಾಗಿಲ್ಲ. ನಾವೇನು ರೆಸಾರ್ಟ್‌ ರಾಜಕಾರಣ ಮಾಡುತ್ತಿಲ್ಲ. ಪಕ್ಷದ ಚೌಕಟ್ಟಿನಲ್ಲೇ ಸಭೆ ಮಾಡುತ್ತಿದ್ದೇವೆ. ಸಭೆಯ ಬಳಿಕ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸುತ್ತೇವೆ ಎಂದು ರಾಜುಗೌಡ ತಿಳಿಸಿದರು.

ನಾವು ನಮ್ಮ ಹಕ್ಕನ್ನು ಮುಖ್ಯಮಂತ್ರಿ ಬಳಿ ಕೇಳುತ್ತಿದ್ದೇವೆ. ಸಿದ್ದರಾಮಯ್ಯ ಅಥವಾ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ಹೋಗಿ ಕೇಳಿದರೆ ತಪ್ಪಾಗುತ್ತದೆ. ನಮ್ಮ ಸಭೆ ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಿ ಕ್ರಮ ತೆಗೆದುಕೊಂಡರೆ ಸ್ವೀಕರಿಸುತ್ತೇವೆ. ಆದರೆ, ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಅವರು ಹೇಳಿದರು.

ಒಂದೇ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿಸಚಿವ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ಭಾಗದಲ್ಲಿ ಸುಮಾರು 16 ಶಾಸಕರಿದ್ದಾರೆ. ಬೇಕಿದ್ದರೆ ಲಾಟರಿ ಎತ್ತಿ ಯಾರ ಹೆಸರು ಬರುತ್ತದೆಯೋ ಅವರಿಗೆ ಕೊಡಲಿ. ನನಗೇಕೊಡಬೇಕುಎಂದು ಹೇಳುತ್ತಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಹೈಕಮಾಂಡ್‌ ನಿರ್ಧಾರದ ಪ್ರಕಾರ ಲಕ್ಷ್ಮಣ ಸವದಿ ಅವರಿಗೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಆ ಬಗ್ಗೆ ಮಾತನಾಡುವುದಿಲ್ಲ. ಈಗ ಇರುವ ಮೂರು ಸಚಿವ ಸ್ಥಾನಗಳ ಪೈಕಿ ಮತ್ತೆ ಸೋತವರಿಗೆ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ. ಹಾಗಿದ್ದರೆ ಕಷ್ಟಪಟ್ಟು ಗೆದ್ದಿರುವುದಕ್ಕೆ ಬೆಲೆ ಇಲ್ಲವೇ ಎಂದು ರಾಜುಗೌಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT