ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ್ ಫ್ರೆಂಡ್ಸ್‌ನ ಪರಿಸರ ಕಾಳಜಿ

ಬೀಚ್‌, ಕೆರೆ, ಉದ್ಯಾನಗಳ ಸ್ವಚ್ಛತೆಗೆ ಶ್ರಮಿಸುತ್ತಿರುವ ಸಂಘಟನೆ
Last Updated 4 ಜೂನ್ 2019, 20:01 IST
ಅಕ್ಷರ ಗಾತ್ರ

ಉಡುಪಿ: ಶಿಕ್ಷಕರು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಒಂದಷ್ಟು ಮಂದಿ ಪರಿಸರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ವಾರಾಂತ್ಯ ಬಂದರೆ ಇವರೆಲ್ಲ ಒಟ್ಟಾಗಿ ನದಿಯ ಒಡಲು ಸೇರುವ ಪ್ಲಾಸ್ಟಿಕ್‌ ಹೆಕ್ಕುತ್ತಾರೆ. ಬೀಚ್‌ ಪರಿಸರದಲ್ಲಿ ಹರಡಿಕೊಂಡ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಉದ್ಯಾನಗಳನ್ನು ಶುಚಿಗೊಳಿಸುತ್ತಾರೆ.

ಸ್ವಚ್ಛ ಭಾರತದ ಕರೆಗೆ ಓಗೊಟ್ಟು 2014ರಲ್ಲಿ ಸಮಾನ ಮನಸ್ಕರು ಸೇರಿ ‘ಸ್ವಚ್ಛ ಭಾರತ್ ಫ್ರೆಂಡ್ಸ್‌’ ಎಂಬ ಸಂಘಟನೆ ಹುಟ್ಟುಹಾಕಿದರು. ‘ಕ್ಲೀನ್ ಉಡುಪಿ’ ಪ್ರಾಜೆಕ್ಟ್‌ ಹೆಸರಿನಲ್ಲಿ ಈ ಸಂಘಟನೆ ಐದು ವರ್ಷಗಳಿಂದ ಪರಿಸರ ಕಾಳಜಿ ಮೆರೆಯುತ್ತಿದೆ.

ಸಂಘಟನೆಯಲ್ಲಿ 25 ಸದಸ್ಯರಿದ್ದು ವಿದ್ಯಾರ್ಥಿಗಳು, ಗೃಹಿಣಿಯರು ಪರಿಸರ ಕಾಳಜಿಗೆ ಕೈಜೋಡಿಸಿರುವುದು ವಿಶೇಷ. ‘ಕ್ಲೀನ್ ಉಡುಪಿ ಪ್ರಾಜೆಕ್ಟ್‌’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿರುವ ಸದಸ್ಯರು ವಾರಾಂತ್ಯದ ಸ್ವಚ್ಛತಾ ಅಭಿಯಾನದ ಕುರಿತು ಚರ್ಚಿಸುತ್ತಾರೆ. ಒಮ್ಮತದ ನಿರ್ಧಾರದ ಬಳಿಕ ಪ್ರತಿ ಶನಿವಾರ, ಭಾನುವಾರ ಒಟ್ಟುಗೂಡಿ ಶ್ರಮದಾನ ಮಾಡುತ್ತಾರೆ.

ನಗರದ ಉದ್ಯಾನಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಪರಿಸರಕ್ಕೆ ಮಾರಕವಾದ ವಸ್ತುಗಳನ್ನು ಹೆಕ್ಕಿ ಅದನ್ನು ಸಮರ್ಪಕವಾಗಿ ವಿಲೇಮಾರಿ ಮಾಡುತ್ತಾರೆ. ಜತೆಗೆ, ಉದ್ಯಾನಕ್ಕೆ ಬರುವ ನಾಗರಿಕರನ್ನು ಒಗ್ಗೂಡಿಸಿ ಪರಿಸರ ಜಾಗೃತಿ ಮೂಡಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳನ್ನೂ ಶುಚಿಗೊಳಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ.

ಮಲ್ಪೆ ಬೀಚ್‌ನಲ್ಲಿ ಅಭಿಯಾನ: ಮಲ್ಪೆ ಬೀಚ್‌ ಪರಿಸರದಲ್ಲಿ ಹಲವು ಬಾರಿ ಪ್ಲಾಸ್ಟಿಕ್ ವಿರೋಧಿ ಅಭಿಯಾನ ಹಮ್ಮಿಕೊಂಡಿರುವ ‘ಸ್ವಚ್ಛ ಭಾರತ್ ಫ್ರೆಂಡ್ಸ್‌’ ಬೀಚ್‌ನಲ್ಲಿ ಪ್ರವಾಸಿಗರು ಬಿಸಾಡುವ ಪ್ಲಾಸ್ಟಿಕ್ ನೀರಿನ ಬಾಟಲಿ, ಮದ್ಯದ ಬಾಟಲಿಗಳನ್ನು ಸಂಗ್ರಹಿಸುತ್ತಾರೆ. ಜತೆಗೆ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠವನ್ನೂ ಹೇಳುತ್ತಾರೆ.

‘ಕೆಲವು ದಿನಗಳ ಹಿಂದಷ್ಟೇ ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಮಣಿಪುರದ ಕೆರೆಯ ಒಡಲು ಸೇರಿದ್ದ ಕಲ್ಮಶವನ್ನು ತೆಗೆಯಲಾಗಿದೆ. ಮುಂದಿನ ಮಳೆಗಾಲದಲ್ಲಿ 1,000 ಸಸಿಗಳನ್ನು ನೆಡುವ ಉದ್ದೇಶವಿದೆ. ಕಲ್ಯಾಣಿಗಳ ಹೂಳೆತ್ತುವುದು, ಕೆರೆಗಳಿಗೆ ಕಾಯಕಲ್ಪ ಸೇರಿದಂತೆ ಪರಿಸರಕ್ಕೆ ಪೂರಕವಾದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ನಾಗರಿಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಕಾರ್ಯಕ್ರಮದ ಸಂಯೋಜಕರಾದ ಗಣೇಶ್ ನಾಯಕ್ ಹಾಗೂ ರಾಘವೇಂದ್ರ ಪ್ರಭು ಕರ್ವಾಲು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT