ಭಾನುವಾರ, ಸೆಪ್ಟೆಂಬರ್ 20, 2020
21 °C
ನನ್ನಲ್ಲಿ ಐಡಿಯಾಗಳಿವೆ ಎಂದ ಅನಾಮ‌ಧೇಯ

ಕಸದ ಸಮಸ್ಯೆ ಬಗೆಹರಿಸಲು ರಿಜಿಸ್ಟ್ರಾರ್‌ ಜನರಲ್‌ಗೆ ಅನಾಮಧೇಯನ ಇ–ಮೇಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅನಧಿಕೃತ ಫ್ಲೆಕ್ಸ್ ಹಾವಳಿ ಕುರಿತಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಇ–ಮೇಲ್ ಕಳುಹಿಸಿರುವ ಅನಾಮಧೇಯ ವ್ಯಕ್ತಿಯ ಬಗ್ಗೆ ಸೈಬರ್ ಪೊಲೀಸರಿಂದ ತನಿಖೆ ನಡೆಸಲು ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್ ಹಾವಳಿ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಈ ವಿಷಯ ಪ್ರಸ್ತಾಪಿಸಿದ ನ್ಯಾಯಪೀಠ, ‘ಒಂದು ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಇ-ಮೇಲ್ ಕಳುಹಿಸುವುದು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ಯಾರು ಬೇಕಾದರೂ ಕೋರ್ಟ್‌ಗೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಮುಕ್ತ ಅವಕಾಶವಿದೆ. ಆದರೆ, ಇ-ಮೇಲ್ ಕಳುಹಿಸುವುದು ಸೂಕ್ತ ಮಾರ್ಗವಲ್ಲ. ಈ ರೀತಿ ಮಾಡಿದರೆ ಕೋರ್ಟ್‌ಗೆ ತನ್ನ ಕೆಲಸ ನಿರ್ವಹಿಸಲು ಕಷ್ಟವಾಗುತ್ತದೆ’ ಎಂದು ಹೇಳಿತು.

‘ಈ ಕುರಿತು ಸೈಬರ್ ಪೊಲೀಸರಿಂದ ಕೂಡಲೇ ತನಿಖೆ ನಡೆಸಿ, ವಿವರಗಳನ್ನು ಪಡೆದು ಕೋರ್ಟ್‌ಗೆ ತಿಳಿಸಿ’ ಎಂದು ಅಡ್ವೋಕೇಟ್ ಜನರಲ್‌ ಅವರಿಗೆ ಸೂಚಿಸಿತು.

‘ಫ್ಲೆಕ್ಸ್ ಸಮಸ್ಯೆ ಬಗೆಹರಿಸಲು ನನ್ನ ಬಳಿ ಕೆಲವು ಐಡಿಯಾಗಳಿವೆ. ಬೇಕಿದ್ದರೆ ಅವುಗಳನ್ನು ನೀವೂ ಬಳಸಿ ಸಮಸ್ಯೆ ಬಗೆಹರಿಸಬಹುದು. ಸೇವೆ ಕಲ್ಪಿಸಲು ನಾನು ಸಿದ್ದನಿದ್ದೇನೆ’ ಎಂಬ ಒಕ್ಕಣಿಕೆಯ ಪತ್ರವನ್ನು ಅನಾಮಧೇಯ ವ್ಯಕ್ತಿಯು ಮುಖ್ಯ ನ್ಯಾಯಮೂರ್ತಿಗಳನ್ನು ಹೆಸರಿಸಿ ರಿಜಿಸ್ಟ್ರಾರ್ ಜನರಲ್‌ಗೆ ಇ-ಮೇಲ್ ಕಳುಹಿಸಿದ್ದರು.

ನಿಲ್ಲದ ಫ್ಲೆಕ್ಸ್‌ ಹಾವಳಿ:  ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, ‘ಕೆ.ಆರ್.ಪುರದಲ್ಲಿ ಶಾಸಕ ಭೈರತಿ ಬಸವರಾಜು ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಶ್ರೀಕಾಂತ್ ಅವರ ಫ್ಲೆಕ್ಸ್‌ಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾಗಿದೆ. ಅಂತೆಯೇ, ಇತ್ತೀಚೆಗೆ ನಿಧನರಾದ ಖ್ಯಾತ ನಟರೊಬ್ಬರ ಫ್ಲೆಕ್ಸ್‌ಗಳನ್ನೂ ಹಾಕಲಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ‘ನಗರದಲ್ಲಿ ಫ್ಲೆಕ್ಸ್‌ಗಳ ಉತ್ಪಾದನೆ ಹಾಗೂ ಮುದ್ರಣವನ್ನೇ ನಿಷೇಧಿಸಲಾಗಿದೆ. ಆದರೂ, ಹೊರಗಡೆಯಿಂದ ತಂದು ಹಾಕಲಾಗುತ್ತಿದೆ. ಆದಾಗ್ಯೂ, ಇವುಗಳನ್ನು ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಫ್ಲೆಕ್ಸ್ ಹಾಕದಂತೆ ಏಕೆ ತಡೆಯುವುದಿಲ್ಲ. ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರು ಏನು ಮಾಡುತ್ತಾರೆ. ಫ್ಲೆಕ್ಸ್ ಹಾಕಿರುವ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕ್ರಮ ಜರುಗಿಸಿ’ ಎಂದು ಬಿಬಿಎಂಪಿ ಪರ ವಕೀಲರಿಗೆ ತಾಕೀತು ಮಾಡಿತು.

ಸ್ಥಳ ತೋರಿಸಿಲ್ಲ

ಮತ್ತೊಬ್ಬ ಅರ್ಜಿದಾರರ ಪರ ವಕೀಲ ರಮೇಶ್‌ಚಂದ್ರ ಅವರು, ‘ಅನಧಿಕೃತ ಫೆಕ್ಸ್ ಅಳವಡಿಕೆ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಬ್ಯಾಟರಾಯನಪುರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಕಾರ್ಯನಿರ್ವಹಣೆಗೆ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ’ ಎಂದು ದೂರಿದರು.

ಇದಕ್ಕೆ ಹೊಳ್ಳ ಅವರು, ‘ಇದೊಂದು ಸಾಮಾನ್ಯ ವರ್ಗಾವಣೆ’ ಎಂದರು. ‘ಈ ಕುರಿತು ಪ್ರಮಾಣಪತ್ರ ಸಲ್ಲಿಸಿ’ ಎಂದು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು