ಶನಿವಾರ, ಮಾರ್ಚ್ 28, 2020
19 °C

ಸಿಎಂ ಬಾಹ್ಯ ಒತ್ತಡಕ್ಕೆ ಮಣಿದಿದ್ದಾರೆ :ವೀರಪ್ಪ ಮೊಯಿಲಿ, ಯು.ಟಿ.ಖಾದರ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಾಹ್ಯ ಒತ್ತಡಕ್ಕೆ ಮಣಿದು ಗೋಲಿಬಾರ್‌ನಲ್ಲಿ ಮೃತಪಟ್ಟಿರುವ ಇಬ್ಬರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಮತ್ತು ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್‌ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಒಮ್ಮೆ ಪರಿಹಾರ ಘೋಷಿಸಿದ ಮೇಲೆ ಅದನ್ನು ವಾಪಸು ಪಡೆಯುವುದು ಸರಿಯಾದ ಕ್ರಮವಲ್ಲ. ಈ ನಿರ್ಧಾರದ ಮೂಲಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯ ಘನತೆಗೆ ಚ್ಯುತಿ ತರುತ್ತಿದ್ದಾರೆ’ ಎಂದರು.

‘ಯಡಿಯೂರಪ್ಪ ಇಡೀ ರಾಜ್ಯದ ಜನರಿಗೂ ಮುಖ್ಯಮಂತ್ರಿ. ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮಾತ್ರ ಮುಖ್ಯಮಂತ್ರಿಯಲ್ಲ. ಪರಿಹಾರ ಘೋಷಣೆಯಂತಹ ನಿರ್ಧಾರವನ್ನು ಬಾಹ್ಯ ಒತ್ತಡಕ್ಕೆ ಮಣಿದು ಬದಲಿಸುವುದಾದರೆ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ’ ಎಂದು ಮೊಯಿಲಿ ಟೀಕಿಸಿದರು.

ಮೂಲ್ಕಿಯಲ್ಲಿ ಪರಿಹಾರ ನೀಡಿದ್ದರು: ‘ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಲ್ಕಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ ಆರೋಪದ ಮೇಲೆ ಗೋಲಿಬಾರ್‌ ನಡೆದಿತ್ತು. ಆಗ ಮೃತಪಟ್ಟಿದ್ದ ಇಬ್ಬರಿಗೆ ಬಿಜೆಪಿ ಸರ್ಕಾರವೇ ಪರಿಹಾರ ನೀಡಿತ್ತು. ಈಗ ಏಕೆ ಪರಿಹಾರ ನಿರಾಕರಿಸಲಾಗುತ್ತಿದೆ’ ಎಂದು ಖಾದರ್‌ ಪ್ರಶ್ನಿಸಿದರು.

ಈ ಬೆಳವಣಿಗೆಗಳನ್ನು ಗಮನಿಸಿದರೆ ಯಡಿಯೂರಪ್ಪ ಅವರ ಕೈಯಲ್ಲಿ ಸರ್ಕಾರ ಇಲ್ಲ ಎಂಬ ಭಾವನೆ ಬರುತ್ತಿದೆ. ಬೇರೆಯವರ ತಾಳಕ್ಕೆ ತಕ್ಕಂತೆ ಮುಖ್ಯಮಂತ್ರಿ ಕುಣಿಯುತ್ತಿದ್ದಾರೆ. ಸಂವಿಧಾನದ ಆಧಾರದಲ್ಲಿ ಸರ್ಕಾರ ನಡೆಸುತ್ತಿದ್ದಾರೋ? ಪಕ್ಷದ ಮಾತು ಕೇಳಿ ಸರ್ಕಾರ ನಡೆಸುತ್ತಿದ್ದಾರೋ? ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು