ಭಾನುವಾರ, ಸೆಪ್ಟೆಂಬರ್ 26, 2021
21 °C
ವೀರಶೈವ – ಲಿಂಗಾಯತ ಶಾಸಕ, ಸಚಿವರು ಸಂಸದರಿಗೆ ಅಭಿನಂದನೆ

ಸಮಾಜ ಒಡೆಯುವ ಪಿತೂರಿಯಿಂದ ನಮ್ಮವರಿಗೆ ಸೋಲು: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ಏರ್ಪಡಿಸಿದ್ದ ವೀರಶೈವ–ಲಿಂಗಾಯತ ಸಮಾಜದ ಸಚಿವ, ಸಂಸತ್‌ ಸದಸ್ಯರು ಮತ್ತು ಶಾಸಕರ ಅಭಿನಂದನಾ ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಶಾಸಕ ಶಾಮನೂರು ಶಿವಶಂಕರಪ್ಪ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಯಿತು. ಮಹಾಸಭಾದ ಹಿರಿಯ ಉಪ ಅಧ್ಯಕ್ಷ ಎನ್‌.ತಿಪ್ಪಣ್ಣ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ, ಡಾ.ಬೀಮಣ್ಣ ಖಂಡ್ರೆ, ವೀರಣ್ಣ ಮತ್ತಿಕಟ್ಟೆ, ಬಸವರಾಜ ಬೊಮ್ಮಯಿ ಇದ್ದರು–ಪ್ರಜಾವಾಣಿ ಚಿತ್ರ

ಬೆಂಗಳೂರು: ನಮ್ಮ ಸಮಾಜವನ್ನು ಕೆಲವರು ಒಡೆದು ಆಳುವ ಪಿತೂರಿ ನಡೆಸದೇ ಹೋಗಿದ್ದರೆ ಇನ್ನಷ್ಟು ಹೆಚ್ಚು ಸಂಖ್ಯೆಯ ವೀರಶೈವ – ಲಿಂಗಾಯತ ಶಾಸಕರು ಆಯ್ಕೆಯಾಗುತ್ತಿದ್ದರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಆಶ್ರಯದಲ್ಲಿ ವೀರಶೈವ – ಲಿಂಗಾಯತ ಸಚಿವರು ಸಂಸದರು ಮತ್ತು ಶಾಸಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಕೆಲವರು ಸಮಾಜವನ್ನು ಒಡೆಯಲು ಪ್ರಯತ್ನಿಸಿದರು. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಲುವು ಏನು ಎಂಬುದರ ನಿರೀಕ್ಷೆಯಲ್ಲಿದ್ದೆವು. ಕೊನೆಗೆ ಶಿವಶಂಕರಪ್ಪ ಅವರು ವೀರಶೈವ– ಲಿಂಗಾಯತ ಎಂದು ಒಡೆಯುವುದರ ವಿರುದ್ಧ ಗಟ್ಟಿಯಾಗಿ ನಿಂತರು. ಇಲ್ಲವಾದರೆ ನಮ್ಮ ಸಮುದಾಯದ ಶಾಸಕರ ಸ್ಥಾನ 45ಕ್ಕಿಂತಲೂ ಕೆಳಗಿರುತ್ತಿತ್ತು ಎಂದು ಹೇಳಿದರು. 

ನಾವು ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕು. ನಾವು  ಬೇರೆ ಬೇರೆ ಒಳಪಂಗಡದವರು ಎಂದು ಭಾವಿಸಿಕೊಂಡು ವಿಭಜಿಸುವ ಬದಲು ಎಲ್ಲರೂ ಒಂದಾಗಿದ್ದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಮಾತನಾಡಿ, ಬಸವಣ್ಣ 12ನೇ ಶತಮಾನದಲ್ಲಿಯೇ ಸ್ತ್ರೀಯರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಆದರೆ, ಇಂದು ಯಾವುದೇ ಕ್ಷೇತ್ರದಲ್ಲಿ ಮಹಿಳೆಯರನ್ನು ಮುಂದುವರಿಯಲು ಬಿಡುತ್ತಿಲ್ಲ. ರಾಜಕಾರಣದಲ್ಲಿ ಹೆಣ್ಣುಮಕ್ಕಳಿಗೆ ಮಡಿವಂತಿಕೆ ಜಾಸ್ತಿ. ಈ ಹಿಂದೆ ಬೆಳಗಾವಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ವಿರುದ್ಧ ಲಿಂಗಾಯತ ಸಮುದಾಯದವರನ್ನೇ ಬಂಡಾಯ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ನಾನು ಕೇವಲ 700 ಮತಗಳಿಂದ ಸೋಲುವಂತೆ ಮಾಡಲಾಯಿತು. ನಮ್ಮ ಪಕ್ಷದವರ ಅಸಹಕಾರದ ನಡುವೆ ಹೋರಾಡಿ 52 ಸಾವಿರ ಮತಗಳ ಅಂತರದಿಂದ ಗೆದ್ದೆ. ನಾವು ವೀರಶೈವರು. ಯಾರಿಗೂ ತೊಂದರೆ ಕೊಡುವವರಲ್ಲ. ನಮಗೆ ತೊಂದರೆ ಕೊಡುವವರನ್ನು ಸುಮ್ಮನೆ ಬಿಡುವುದೂ ಇಲ್ಲ. ಚೆನ್ನಮ್ಮನ ವಂಶಸ್ಥಳಾದ, ಆ ಕ್ಷೇತ್ರದ ನಾನು ಸಮಾಜಕ್ಕೆ ಹೂವನ್ನೇ ತರುತ್ತೇನೆ, ಹುಲ್ಲನ್ನಲ್ಲ ಎಂದರು.

ಸುಮಾರು 15 ಶಾಸಕರನ್ನು ಸನ್ಮಾನಿಸಲಾಯಿತು. ಶಾಸಕ, ಮಹಾಸಭಾದ ಕಾರ್ಯದರ್ಶಿ ಈಶ್ವರ ಖಂಡ್ರೆ ಸ್ವಾಗತಿಸಿದರು. ಮಹಾಸಭಾದ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಭೀಮಣ್ಣ ಖಂಡ್ರೆ, ಹಿರಿಯ ಉಪಾಧ್ಯಕ್ಷ ಎನ್‌.ತಿಪ್ಪಣ್ಣ ಇದ್ದರು. 

**

ಬೇರೆ ಸಮಾಜಗಳು ಹೆಚ್ಚು ಒಗ್ಗಟ್ಟು ಪ್ರದರ್ಶಿಸುವ ಸಂದರ್ಭದಲ್ಲಿ ನಾವು ಸದೃಢರಾಗಬೇಕು.

– ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು