ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ನಡೆಗೆ ‘ಮೈತ್ರಿ’ ಧರ್ಮ ಸೂತ್ರ

ವೇಣುಗೋಪಾಲ್– ಕುಮಾರಸ್ವಾಮಿ ಚರ್ಚೆ
Last Updated 22 ಮೇ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ದೋಸ್ತಿ’ (ಜೆಡಿಎಸ್‌– ಕಾಂಗ್ರೆಸ್‌) ಮಧ್ಯೆ ಉಂಟಾಗಿರುವ ಅಪನಂಬಿಕೆ, ನಾಯಕರ ನಡುವೆ ವಿರೋಧಾಭಾಸದ ಹೇಳಿಕೆಗಳು, ‘ಆಪರೇಷನ್‌ ಕಮಲ’ದ ಭೀತಿ– ಈ ಎಲ್ಲದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೈತ್ರಿ ಧರ್ಮ ಪಾಲಿಸುವ ಸೂತ್ರಕ್ಕೆ ಬದ್ಧವಾಗಿರಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಜೊತೆ ತೆರಳಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮಂಗಳವಾರ ರಾತ್ರಿ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.

‘ಮೈತ್ರಿ ಸರ್ಕಾರಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ. ಆದರೆ, ನಮ್ಮ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ನಿಮ್ಮ ನಾಯಕರು, ನಮ್ಮ ನಾಯಕರ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ವೇಣುಗೋಪಾಲ್‌ ಅವರು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

‘ಶಾಸಕರು ಅಧ್ಯಕ್ಷರಾಗಿರುವ ನಿಗಮ– ಮಂಡಳಿಗಳಲ್ಲಿ ಹಸ್ತಕ್ಷೇಪ ಮಾಡದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ನಮ್ಮ ನಾಯಕರು ನಿಮ್ಮ ನಾಯಕತ್ವದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಂತೆ ನಿಯಂತ್ರಿಸುತ್ತೇವೆ’ ಎಂದೂ ವೇಣುಗೋಪಾಲ್‌ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

‘ನಮ್ಮ ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲಿ ನಿಮ್ಮ ನಾಯಕರ ಅಬ್ಬರ ಹೆಚ್ಚಾಗಿದೆ. ಶಾಸಕರಿಗೆ ತೊಂದರೆ ಕೊಡುವುದರಿಂದ ಸಮಸ್ಯೆಯಾಗುತ್ತಿದೆ. ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಶಾಸಕರು ಬಿಜೆಪಿ ಕಡೆ ಯಾಕೆ ಹೋಗುತ್ತಾರೆ. ಅಲ್ಲದೆ, ‘ಆಪರೇಷನ್‌ ಕಮಲ’ಕ್ಕೂ ಆಸ್ಪದ ಸಿಗಲ್ಲ. ನಮ್ಮ ಯಾವುದೇ ಶಾಸಕರು ಚುನಾವಣೆಗೆ ಹೋಗಲು ಕೂಡಾ ಸಿದ್ಧರಿಲ್ಲ’ ಎಂದೂ ಹೇಳಿದ್ದಾರೆ.

ವೇಣುಗೋಪಾಲ್‌ ನೀಡಿರುವ ಸಲಹೆಗಳನ್ನು ಆಲಿಸಿರುವ ಕುಮಾರಸ್ವಾಮಿ, ನಮ್ಮ ಪಕ್ಷದ ಶಾಸಕರ ವಿರುದ್ಧ ಕಾಂಗ್ರೆಸ್ ಶಾಸಕರು ಮಾತನಾಡದಂತೆ ಸೂಚಿಸುವಂತೆ ಸಲಹೆ ಮಾಡಿದ್ದಾರೆ.ಆ ಮೂಲಕ, ಮೈತ್ರಿ ಸರ್ಕಾರದ ಸುಗಮ ನಡೆಗೆ ಪೂರಕ ವಾತಾವರಣ ಸೃಷ್ಟಿಸಲು ಎರಡೂ ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT