ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ತಾಯಿಗೆ ಬೈದಿದ್ದಕ್ಕೆ ಸ್ನೇಹಿತನ ಕೊಲೆ

ಕೀಟನಾಶಕ ವ್ಯಾಪಾರಿ ಹತ್ಯೆ ಪ್ರಕರಣ; ಸ್ನೇಹಿತ ಬಂಧನ
Last Updated 9 ಜುಲೈ 2020, 12:33 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯನಗರ ಠಾಣೆ ವ್ಯಾಪ್ತಿಯ ಹಂಪಿನಗರದಲ್ಲಿ ನಡೆದಿದ್ದ ಕೀಟನಾಶಕ ವ್ಯಾಪಾರಿ ಹನುಮೇಶ್ ಗೌಡ (30) ಹತ್ಯೆ ಸಂಬಂಧ, ಅವರ ಸ್ನೇಹಿತ ಅರುಣ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಇದೇ 7ರಂದು ಮಧ್ಯಾಹ್ನ ಕೊಲೆ ನಡೆದಿತ್ತು. 24 ಗಂಟೆಯೊಳಗೆ ಆರೋಪಿ ಅರುಣ್‌ನನ್ನು ಬಂಧಿಸಲಾಗಿದೆ. ಆತನಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ನೆಗಟಿವ್ ಫಲಿತಾಂಶ ಬಂದಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಲೆಯಾಗಿರುವ ಮದ್ದೂರಿನ ಕೆ.ಎಂ.ದೊಡ್ಡಿಯ ಹನುಮೇಶ್ ಹಾಗೂ ಆರೋಪಿ ರಾಮನಗರದ ಅರುಣ್ ಇಬ್ಬರೂ ಸ್ನೇಹಿತರು. ಕಾರು ಖರೀದಿಸಲು ಮುಂದಾಗಿದ್ದ ಅರುಣ್, ಆ ಬಗ್ಗೆ ಹನುಮೇಶ್‌ ಬಳಿ ಹೇಳಿಕೊಂಡಿದ್ದ. ಕಾರು ಕೊಡಿಸುವ ಭರವಸೆ ನೀಡಿದ್ದ ಹನುಮೇಶ್, ಮುಂಗಡವಾಗಿ ಅರುಣ್‌ ಕಡೆಯಿಂದ ₹4.20 ಲಕ್ಷ ಪಡೆದಿದ್ದ. ಇಬ್ಬರೂ ಮುಂಬೈಗೆ ಹೋಗಿ ಕಾರು ಸಹ ನೋಡಿಕೊಂಡು ಬಂದಿದ್ದರು. ಆದರೆ, ಖರೀದಿ ವ್ಯವಹಾರ ಮಾಡಿರಲಿಲ್ಲ’

‘₹4.20 ಲಕ್ಷವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಹನುಮೇಶ್, ಅದನ್ನೇ ಸ್ನೇಹಿತನೊಬ್ಬನಿಗೆ ಸಾಲ ಕೊಟ್ಟಿದ್ದರು. ಅದು ಅರುಣ್‌ಗೆ ಗೊತ್ತಿರಲಿಲ್ಲ. ಕಾರು ಬೇಡವೆಂದು ಇತ್ತೀಚೆಗಷ್ಟೇ ಹೇಳಿದ್ದ ಅರುಣ್, ಹಣವನ್ನು ವಾಪಸು ನೀಡುವಂತೆ ಒತ್ತಾಯಿಸಿದ್ದ. ಹಣವಿಲ್ಲವೆಂದು ಹನುಮೇಶ್ ಹೇಳಿದ್ದರು. ಅದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು’ ಎಂದೂ ಹೇಳಿದರು.

‘ಇದೇ 7ರಂದು ಬೆಳಿಗ್ಗೆ ಅರುಣ್, ವಾಟ್ಸ್‌ಆ್ಯಪ್‌ನಲ್ಲಿ ಹನುಮೇಶ್ ಅವರಿಗೆ ಸಂದೇಶ ಕಳುಹಿಸಿದ್ದ. ಹಣ ನೀಡುವಂತೆ ಪುನಃ ಒತ್ತಾಯಿಸಿದ್ದ. ಹಣ ನೀಡಲು ನಿರಾಕರಿಸಿದ್ದ ಹನುಮೇಶ್, ಆರೋಪಿ ಅರುಣ್ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದರು. ಕೋಪಗೊಂಡ ಅರುಣ್, ಚಾಕು ಸಮೇತವೇ ಹಂಪಿನಗರದಲ್ಲಿರುವ ಕಚೇರಿಗೆ ಬಂದು ಹನುಮೇಶ್‌ ಅವರನ್ನು ಕೊಂದು ಪರಾರಿಯಾಗಿದ್ದ’ ಎಂದೂ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT