ಧರ್ಮಸ್ಥಳ ಸ್ನಾನಘಟ್ಟದಲ್ಲಿ ನೀರಿನ ತೀವ್ರ ಬವಣೆ

ಮಂಗಳವಾರ, ಜೂನ್ 18, 2019
26 °C
ಮಂಜುನಾಥನ ದರ್ಶನಕ್ಕಿಲ್ಲ ಭಕ್ತರ ಕೊರತೆ: ಕುಕ್ಕೆಗೆ ಕ್ಷೇತ್ರಕ್ಕೆ ವರುಣನ ಕೃಪೆ

ಧರ್ಮಸ್ಥಳ ಸ್ನಾನಘಟ್ಟದಲ್ಲಿ ನೀರಿನ ತೀವ್ರ ಬವಣೆ

Published:
Updated:
Prajavani

ಮಂಗಳೂರು: ‘ಹಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬರುತ್ತಿದ್ದೇವೆ. ಸ್ನಾನಘಟ್ಟದಲ್ಲಿ ನೀರು ತುಂಬಾ ಕಡಿಮೆ ಇದೆ. ದೇವಸ್ಥಾನಕ್ಕೆ ಬಂದ ಮೇಲೆ ತೀರ್ಥಸ್ನಾನ ಮಾಡಬೇಕು ಎನ್ನುವ ಏಕೈಕ ಉದ್ದೇಶದಿಂದ ಸ್ನಾನ ಮಾಡುತ್ತಿದ್ದೇವೆ. ನೀರಿನ ಹರಿವಿಲ್ಲ. ನಿಂತಿರುವ ನೀರಿನಲ್ಲೇ ಹೇಗೋ ಸ್ನಾನ ಮಾಡಿದೆವು. ಇಲ್ಲಿನ ನೀರಿನ ಸ್ಥಿತಿ ಹೇಳಲಾಗದು.’

ಶನಿವಾರ ಧರ್ಮಸ್ಥಳಕ್ಕೆ ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಕೃಷ್ಣಮೂರ್ತಿ ಅವರು, ಸ್ನಾನಘಟ್ಟದ ಸ್ಥಿತಿಯನ್ನು ವಿವರಿಸಿದ ಬಗೆ ಇದು.

ನೇತ್ರಾವತಿಯ ಒಡಲು ಸಂಪೂರ್ಣ ಬರಿದಾಗಿದೆ. ಎಲ್ಲಿ ನೋಡಿದರೂ ಕಲ್ಲು ಬಂಡೆಗಳೇ ಕಾಣುತ್ತಿವೆ. ಅಲ್ಲಲ್ಲಿ ಅಲ್ಪ– ಸ್ವಲ್ಪ ನೀರಿದೆ. ಅದರಲ್ಲಿಯೇ ಭಕ್ತರು ಸ್ನಾನ ಮಾಡಿ, ಧನ್ಯತೆ ಮೆರೆಯುತ್ತಿದ್ದಾರೆ. ಕೆಲ ಭಕ್ತರಂತೂ ಹಸಿರು ಬಣ್ಣದ ನೀರನ್ನು ನೋಡಿ, ಸ್ನಾನವೇ ಬೇಡ ಎಂದು ಹಿಂದಿರುಗುತ್ತಿದ್ದಾರೆ.

‘ಇದುವರೆಗೆ ಇಂತಹ ಸನ್ನಿವೇಶ ಎದುರಾಗಿರಲಿಲ್ಲ. ಇದೇ ಬಾರಿ ಇಷ್ಟೊಂದು ತೊಂದರೆ ಅನುಭವಿಸುವಂತಾಗಿದೆ. ಈ ಬಾರಿ ಬೇಸಿಗೆ ಮಳೆ ಬರದೇ ಇರುವುದೇ ಇದಕ್ಕೆ ಕಾರಣ’ ಎನ್ನುವುದು ಸ್ನಾನಘಟ್ಟದ ಮ್ಯಾನೇಜರ್ ಚಂದ್ರಶೇಖರ ಅವರ ಮಾತು.

‘ನಿತ್ಯ ಏನಿಲ್ಲವೆಂದರೂ 15-20 ಸಾವಿರ ಜನರು ಇಲ್ಲಿ ಸ್ನಾನ ಮಾಡುತ್ತಿದ್ದರು. ಅದರಲ್ಲೂ ರಜೆಯ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿತ್ತು. 2 ತಿಂಗಳಿಂದಲೇ ನೇತ್ರಾವತಿಯಲ್ಲಿ ನೀರು ಕಡಿಮೆಯಾಗಿದೆ. ಈಗಂತೂ ಸ್ನಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಇಳಿದಿದೆ’ ಎಂದು ಅವರು ಹೇಳುತ್ತಾರೆ.

ದೇವಾಲಯದ ಚಿತ್ರಣವೇ ಬೇರೆ: ಧರ್ಮಸ್ಥಳದ ಸ್ನಾನಘಟ್ಟದಿಂದ ಮಂಜುನಾಥನ ದೇವಸ್ಥಾನಕ್ಕೆ ಬರುವಾಗಿನ ಚಿತ್ರಣವೇ ಬೇರೆಯಾಗಿದೆ. ಸ್ನಾನಘಟ್ಟದಲ್ಲಿ ಬೆರಳೆಣಿಕೆಯಷ್ಟು ಭಕ್ತರು ಇದ್ದರೆ, ದೇವಸ್ಥಾನದ ಆವರಣದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ಭಕ್ತರ ಸಾಲು ಎಂದಿನಂತೆಯೇ ಇತ್ತು. ದೇವಸ್ಥಾನದ ಸುತ್ತ ಎಲ್ಲಿ ನೋಡಿದರೂ ಭಕ್ತರ ದಂಡೇ ಕಾಣುತ್ತಿತ್ತು.

‘ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ ದೇವಾಲಯಗಳ ದರ್ಶನ ಮಾಡಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದೇವೆ. ಸ್ನಾನಘಟ್ಟದಲ್ಲಿ ನೀರು ಕಡಿಮೆ ಇದೆ. ಆದರೆ, ದೇವಾಲಯದ ಆವರಣದಲ್ಲಿ ನೀರಿನ ಕೊರತೆ ಇಲ್ಲ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ’ ಎಂದು ದಾವಣಗೆರೆಯ ವಿಕಾಸ್ ಹೇಳಿದರು.

ಸುಬ್ರಹ್ಮಣ್ಯದಲ್ಲಿ ತೊಂದರೆ ಇಲ್ಲ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ವಾರದಲ್ಲಿ ಒಂದೆರಡು ಉತ್ತಮ ಮಳೆಯಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿದೆ. ಶುಕ್ರವಾರವೂ ಸುಬ್ರಹ್ಮಣ್ಯ ಸುತ್ತ ಮಳೆಯಾಗಿದ್ದು, ಭಕ್ತರಿಗೆ ನೀರಿನ ಸಮಸ್ಯೆ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

‘ನೀರಿನ ಸಮಸ್ಯೆ ಇಲ್ಲ’

‘ಮಳೆಯ ಅಭಾವದಿಂದ ನೇತ್ರಾವತಿಯಲ್ಲಿ ನೀರು ಇಲ್ಲದಾಗಿದೆ. ಭಕ್ತರಿಗೆ ಬರಬೇಡಿ ಎಂದು ಹೇಳಿಲ್ಲ. ಒಮ್ಮೆಲೆ ಲಕ್ಷದಷ್ಟು ಭಕ್ತರು ಬಂದರೆ ತೊಂದರೆ ಆಗಲಿದೆ. ಹೀಗಾಗಿ ಭಕ್ತರು ಪ್ರವಾಸ ಮುಂದೂಡುವಂತೆ ಧರ್ಮಾಧಿಕಾರಿಗಳು ಹೇಳಿದ್ದಾರೆ’ ಎಂದು ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದರು.

‘ಸದ್ಯಕ್ಕೆ ಕಿಂಡಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಲಾಗಿದೆ. ಎರಡು ತಿಂಗಳ ಹಿಂದೆಯೇ ಸಭೆ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ನೀರಿನ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉಳಿದ ದಿನಗಳಲ್ಲಿ ಸುಮಾರು 30-35 ಸಾವಿರ ಭಕ್ತರು ಬರುತ್ತಾರೆ. ಶನಿವಾರ, ಭಾನುವಾರ ರಜೆ ಇದ್ದಾಗ ಭಕ್ತರ ಸಂಖ್ಯೆ ಒಂದು ಲಕ್ಷ ದಾಟುತ್ತದೆ. ಆಗ 35 ಲಕ್ಷ ಲೀಟರ್ ನೀರು ಬೇಕು. ಒಮ್ಮೆಲೇ ಇಷ್ಟು ಜನರು ಬಂದರೆ ತೊಂದರೆ ಆಗುತ್ತದೆ. ಅದಕ್ಕಾಗಿ ಧರ್ಮಸ್ಥಳ ಪ್ರವಾಸ ಮುಂದೂಡಿ ಎಂದು ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

**

ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಾಗಿದೆ. ಹವಾಮಾನ ಇಲಾಖೆ ಇನ್ನೂ 10 ದಿನ ಮಳೆ ಬರುವುದಿಲ್ಲ ಎಂದು ಸೂಚನೆ ಕೊಟ್ಟಿದೆ. ಭಕ್ತರ ಹಿತದೃಷ್ಟಿಯಿಂದ ಕ್ಷೇತ್ರದ ದರ್ಶನ ಮುಂದೂಡಿ ಎಂದು ವಿನಂತಿ ಮಾಡಿದ್ದೇವೆ.
- ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !