ಭಾನುವಾರ, ಏಪ್ರಿಲ್ 18, 2021
24 °C

ಸಾ.ರಾ.ಮಹೇಶ್ ಮತ್ತು ಈಶ್ವರಪ್ಪ ನಡುವೆ ಏನೆಲ್ಲಾ ಮಾತುಕತೆ ನಡೆಯಿತು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಮಾರಕೃಪ ಅತಿಥಿ ಗೃಹದಲ್ಲಿ ಜೆಡಿಎಸ್‌ನ ಸಚಿವ ಸಾ.ರಾ.ಮಹೇಶ್ ಅವರು ಬಿಜೆಪಿಯ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಮತ್ತು ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಈಚೆಗೆ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದು ರಾಜ್ಯ ರಾಜಕಾರಣದಲ್ಲಿ ಸಂಚನಲ ಸೃಷ್ಟಿಸಿತು. 

ಮಾತುಕತೆಯ ವೇಳೆ ಯಾವೆಲ್ಲಾ ಅಂಶಗಳು ಪ್ರಸ್ತಾಪವಾದವು ಎಂಬುದನ್ನು ಯಾರೂ ಈವರೆಗೆ ಹಂಚಿಕೊಂಡಿರಲಿಲ್ಲ. ಇದೀಗ ಈಶ್ವರಪ್ಪ ಅವರು ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎನ್ನಲಾದ ವಿವರಗಳು ರಾಜಕಾರಿಣಿಗಳ ನಡುವೆ ಓಡಾಡುತ್ತಿದೆ. ಈ ಮಾಹಿತಿಯನ್ನು ಬಿಜೆಪಿ ನಾಯಕ ಈಶ್ವರಪ್ಪ ಆಗಲಿ, ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಆಗಲಿ ಈವರೆಗೆ ‘ಪ್ರಜಾವಾಣಿ’ಗೆ ದೃಢಪಡಿಸಿಲ್ಲ. 

ಈಶ್ವರಪ್ಪ ಅವರು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾದ, ಶಾಸಕರ ನಡುವೆ ಹರಿದಾಡುತ್ತಿರುವ ಸಂವಾದದ ವಿವರಗಳು ಇವು...

‘ಸಾ.ರಾ.ಮಹೇಶ್ ಅವರು ಕಳೆದ ಎರಡು ದಿನಗಳಿಂದ ನಿರಂತರವಾಗಿ ಪೋನ್ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ಭೇಟಿಯಾಗಿ ಕೆಲ ವಿಷಯಗಳನ್ನು ಚರ್ಚಿಸಲು ತಿಳಿಸಿದ್ದಾರೆ. ನಾನು ತಮ್ಮನ್ನು ಮತ್ತು ಮುರುಳಿಧರ್ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು’ ಎಂದು ಒತ್ತಡ ಹೇರಿದರು.

‘ಸಾ.ರಾ.ಮಹೇಶ್ ಅವರು ಪೋನ್ ಮಾಡುತ್ತಿರುವ ವಿಷಯವನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೆ. ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಅವರೊಂದಿಗೆ ಸಭೆ ನಡೆಸಬೇಡಿ. ಸಾ.ರಾ. ಮಹೇಶ್ ತೀವ್ರವಾಗಿ ಒತ್ತಡ ಹಾಕಿದ್ದರಿಂದ ಕೆ.ಕೆ.ಗೆಸ್ಟ್ ಹೌಸ್‌ನಲ್ಲಿ ಅವರನ್ನು ಭೇಟಿಯಾದೆವು.

‘ಸರ್ಕಾರ ರಚನೆಯಾದ ದಿನದಿಂದಲ್ಲೂ ನಮಗೆ ಸರ್ಕಾರ ನಡೆಸಲು ಸಿದ್ದರಾಮಯ್ಯ ಬಿಡ್ತಿಲ್ಲ, ಈಗ ಕಾಂಗ್ರೆಸ್ ಶಾಸಕರ ರಾಜೀನಾಮೆಯ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ. ಇದರಿಂದ ಸಾಕಾಗಿರುವ ಕುಮಾರಸ್ವಾಮಿ ಬಿಜೆಪಿಗೆ ಬೇಷರತ್ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಆದರೆ ಕೆಲ ಷರತ್ತುಗಳಿದ್ದು, ಈ ಷರತ್ತುಗಳ ಬಗ್ಗೆ ತಾವು (ಬಿಜೆಪಿ) ತಮ್ಮ ಹೈಕಮಾಂಡ್‌ನೊಂದಿಗೆ ಮಾತನಾಡಿ ಒಪ್ಪುವುದಾದರೆ ಕುಮಾರಸ್ವಾಮಿ ಅವರೆ ತಮ್ಮೊಂದಿಗೆ ನೇರವಾಗಿ ಮಾತನಾಡುತ್ತಾರೆ ಎಂದು ತಿಳಿಸಿದರು.

‘ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಇತರೆ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಬೇಕು, ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಅವರ ಬೆಂಬಲವಿಲ್ಲ. ರಾಜೀನಾಮೆ ನೀಡಿರುವ ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣ ಗೌಡ ಮತ್ತು ಗೋಪಾಲಯ್ಯ ಅವರನ್ನು ಯಾವುದೇ ಕಾರಣಕ್ಕೂ ಸಚಿವರನ್ನಾಗಿ ಮಾಡುವಂತಿಲ್ಲ. ಮೈಸೂರು ಭಾಗದ ಅಧಿಕಾರಿಗಳ ವರ್ಗಾವಣೆ ಮತ್ತು ಪ್ರಮುಖ ರಾಜಕೀಯ ನಿರ್ಧಾರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕು ಎಂದು ಸಿದ್ದರಾಮಯ್ಯ ಅವರ ಷರತ್ತುಗಳನ್ನು ಸಾ.ರಾ.ಮಹೇಶ್ ವಿವರಿಸಿದರು.

‘ಇನ್ನೂ ಮಾತುಕತೆ ಮುಂದುವರೆದಿತ್ತು, ಅಷ್ಟರಲ್ಲಿ ಅಮಿತ್ ಶಾ ಅವರು ಮುರುಳಿಧರ್ ರಾವ್ ಅವರಿಗೆ ಪೋನ್ ಮಾಡಿ ಜೆಡಿಎಸ್ ಸಚಿವರೊಂದಿಗೆ ನಡೆಸುತ್ತಿರುವ ರಹಸ್ಯ ಸಭೆಯನ್ನು ತಕ್ಷಣ ಮೊಟಕುಗೊಳಿಸಿ, ಕುಮಾರಕೃಪ ಅತಿಥಿ ಗೃಹ ಬಿಟ್ಟು ಹೊರಡುವಂತೆ ಖಡಕ್ ವಾರ್ನಿಂಗ್ ನೀಡಿದರಂತೆ. ಇದರಿಂದ ಮಾತುಕತೆ ಮೊಟಕುಗೊಳಿಸಲಾಯಿತು’ ಎಂದು ಈಶ್ವರಪ್ಪ ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು