ಮಂಗಳವಾರ, ಆಗಸ್ಟ್ 20, 2019
22 °C

ಪಕ್ಷದ ನಾಯಕರ ವಿಪ್‌ ನೀಡುವ ಜವಾಬ್ದಾರಿ ಮೊಟಕು ಮಾಡುವುದಿಲ್ಲ: ಸ್ಪೀಕರ್‌ ರೂಲಿಂಗ್

Published:
Updated:

ಬೆಂಗಳೂರು: ‘ಪಕ್ಷದ ನಾಯಕರ ವಿಪ್‌ ನೀಡುವ ಜವಾಬ್ದಾರಿ ಮೊಟಕು ಮಾಡುವುದಿಲ್ಲ’ ಎಂದು ಸ್ಪೀಕರ್ ರಮೇಶ್‌ ಕುಮಾರ್ ಸ್ಪಷ್ಟವಾಗಿ ರೂಲಿಂಗ್ ನೀಡಿದರು.

'10ನೇ ಶೆಡ್ಯೂಲ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಿರುವ ಜವಾಬ್ದಾರಿಯನ್ನು ಮೊಟಕು ಮಾಡುವ ಕೆಲಸ ನಾವು ಮಾಡುವುದಿಲ್ಲ’ ಎಂದು ವಿಪ್‌ ವಿಷಯವಾಗಿ ಸಿದ್ದರಾಮಯ್ಯ ಅವರು ಎತ್ತಿದ್ದ ಕ್ರಿಯಾಲೋಪ ಕುರಿತು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ರೂಲಿಂಗ್‌ ನೀಡಿದರು.

‘ಸ್ಪೀಕರ್‌ ಅವರ ಅಧಿಕಾರ ವ್ಯಾಪ್ತಿಯಲ್ಲಿ ಪ್ರವೇಶಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಯಾವುದೇ ಗೊಂದಲ ಇಲ್ಲದೆ ಹೇಳಿದೆ. ಸಭಾಧ್ಯಕ್ಷರ ಸ್ವಾತಂತ್ರ್ಯಕ್ಕೆ ಯಾವುದೇ ತೊಂದರೆ ಹಾಗೂ ಉಲ್ಲಂಘನೆಯಾಗಿಲ್ಲ ಎಂದು ಸ್ಪೀಕರ್‌ ಸ್ಪಷ್ಟಪಡಿಸಿದರು.

ಇಂದು ವಿಶ್ವಾಸಮತ ಚರ್ಚೆ ಪೂರ್ಣಗೊಳಿಸಿ ಮತಕ್ಕೆ ಹಾಕಬೇಕು ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಸ್ಪೀಕರ್‌ಗೆ ಮನವಿ ಮಾಡಿದರು.

ಶಾಸಕರು ಸದನದಿಂದ ಹೊರಗೆ ಇದ್ದು ವಿಪ್‌ ಉಲ್ಲಂಘನೆ ಆಗುವುದಿಲ್ಲ ಎಂದು ಭಾವಿಸಿದ್ದಾರೆ. ಅವರಿಗೆ ಸದನದ ಮೂಲಕ ಸ್ಪಷ್ಟ ಸಂದೇಶ ನೀಡಬೇಕು ಎಂದು ಶಾಸಕ ಶಿವಲಿಂಗೇಗೌಡ ಸ್ಪೀಕರ್‌ಗೆ ಮನವಿ ಮಾಡಿದರು.

‘ವಿಪ್ ಉಲ್ಲಂಘಿಸಿದ ಮೇಲೆ ಶಾಸಕರು ನನ್ನ ಮುಂದೆ ಬಂದಾಗ ನಾನು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇನೆ.
ಸದ್ಯಕ್ಕೆ ನಾನು ಉತ್ತರ ನೀಡುವ ಅಗತ್ಯವಿಲ್ಲ. ಎಲ್ಲೋ ಕೂತಿರುವವರಿಗೆ ಸದನದ ಮೂಲಕ ಸಂದೇಶ ನೀಡುವುದಿಲ್ಲ. ವಿಪ್‌, ನೋಟಿಸ್‌ ನೀಡುವುದು ನಿಮಗೆ ಬಿಟ್ಟಿದ್ದು. ನನ್ನ ಬಳಿ ದೂರು ಬಂದರೆ ಕಾನುನಾತ್ಮಕವಾಗಿ ನಾನು ಕ್ರಮ ಕೈಗೊಳ್ಳುವೆ’ ಎಂದು ಸ್ಪಷ್ಟಪಡಿಸಿದರು.

ಚರ್ಚೆ ಬೆಳಿಗ್ಗೆ 12.01ಕ್ಕೆ ಆರಂಭವಾಯಿತು. 11 ಗಂಟೆಗೆ ಕಲಾಪ ಆರಂಭವಾಗಬೇಕಿತ್ತು. ರಾಜಭವನದ ವಿಶೇಷಾಧಿಕಾರಿ ರಮೇಶ್‌ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡಿದ್ದು, ರಾಜ್ಯಪಾಲರಿಗೆ ವರದಿ ಮಾಡುತ್ತಿದ್ದಾರೆ.

Post Comments (+)