ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕತೆ ಪ್ರಶ್ನಿಸುವ ನೈತಿಕತೆ ಯಾರಿಗಿದೆ?: ಸಚಿವ ಸಿ.ಟಿ.ರವಿ ವಾಗ್ದಾಳಿ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿ
Last Updated 15 ನವೆಂಬರ್ 2019, 22:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜಕಾರಣದಲ್ಲಿ ನೈತಿಕತೆಯ ಪ್ರಶ್ನೆಯನ್ನು ನೈತಿಕವಾಗಿದ್ದವರು ಮಾತ್ರ ಕೇಳಬೇಕು. ಯಾರಿಗೆ ಆ ನೈತಿಕತೆ ಇದೆ? ಜೆಡಿಎಸ್‌ನವರನ್ನೆಲ್ಲ ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದು ನೈತಿಕತೆಯಾ? ಅವರು ಮಾಡಿದ್ದನ್ನೇ ಇವತ್ತು ನಾವು ಮಾಡುತ್ತಿದ್ದೇವೆ. ಇಂದು ಸಮಾಜವಾದಿಗಳಿಗೆ ಕುಡಿಯೋ ಸ್ಕಾಚ್‌ನಿಂದ ಹಿಡಿದು ಎಲ್ಲ ಬ್ರ್ಯಾಂಡೆಡೇ ಬೇಕು. ಯಾವುದು ನೈತಿಕತೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಉಪ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕೃಷ್ಣ ಬೈರೇಗೌಡ, ಸಿದ್ದರಾಮಯ್ಯ ಅವರು ಹಿಂದೆ ಯಾವ ಪಕ್ಷದಲ್ಲಿದ್ದರು, ಈಗ ಯಾವ ಪಕ್ಷದಲ್ಲಿದ್ದಾರೆ? ಜಮೀರ್ ಅಹಮ್ಮದ್ ಖಾನ್, ಚೆಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ ಇವರೆಲ್ಲ ಯಾವ ಪಕ್ಷದಲ್ಲಿ ಇದ್ದರು? ಅವರನ್ನೆಲ್ಲ ಯಾರು ಕಾಂಗ್ರೆಸ್‌ಗೆ ಸೇರಿಸಿಕೊಂಡರು?’ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

‘ಮಹಾಭಾರತ ಯುದ್ಧದಲ್ಲಿ ಸೋಲಿನ ಸುಳಿಗೆ ಸಿಲುಕುವವರೆಗೂ ಕೌರವವರಿಗೆ ನೈತಿಕತೆ ನೆನಪಾಗಿರಲಿಲ್ಲ. ಅದೇ ರೀತಿ ಜೆಡಿಎಸ್‌, ಕಾಂಗ್ರೆಸ್‌ನವರು ಸೋಲಿನ ಸುಳಿಯಲ್ಲಿ ಸಿಲುಕಿ ಈಗ ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದವನು ಎಂದು ಹೇಳುವವರಿಗೆ ಸೆಗಣಿ ವಾಸನೆ ಆಗುವುದಿಲ್ಲ. ಸೆಂಟ್‌ ಕೂಡ ಫಾರಿನ್‌ನಿಂದ ಬರಬೇಕು’ ಎಂದು ಲೇವಡಿ ಮಾಡಿದರು.

‘ಅರ್ಕಾವತಿ ಡಿ ನೋಟಿಫಿಕೇಷನ್ ಮಾಡುವುದು ಪ್ರಾಮಾಣಿಕ ರಾಜಕಾರಣಿ ಮಾಡುವ ಕೆಲಸವೆ? ತುರ್ತು ಪರಿಸ್ಥಿತಿ ಹೇರಿ, ಪ್ರಜಾಪ್ರಭುತ್ವ ಬದಿಗೊತ್ತಿ, ಹಕ್ಕುಗಳನ್ನು ಕಿತ್ತುಕೊಂಡವರು ಇವತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ಹೊದ್ದು ಮಲಗಿದ್ದವರು ಪ್ರಾಮಾಣಿಕತೆಯ ಪಾಠ ಹೇಳುತ್ತಿದ್ದಾರೆ’ ಎಂದು ಹೇಳಿದರು.

‘ಸಮಾಜವಾದಿಗಳು ಎಂದು ಹಣೆಪಟ್ಟಿ ಅಂಟಿಸಿಕೊಂಡರವರಲ್ಲಿ ಶಾಂತವೇರಿ ಗೋಪಾಲಗೌಡರು, ರಾಮಮನೋಹರ್ ಲೋಹಿಯಾ ಅವರ ಕಾಲಘಟ್ಟದವರು ಆ ತತ್ವಕ್ಕೆ ತಕ್ಕಂತೆ ಬದುಕಿದವರು. ಅವರ ನಂತರದಲ್ಲಿ ಜಾರ್ಜ್ ಫರ್ನಾಂಡಿಸ್‌ ಅವರಂತಹವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಮಜಾವಾದಿಗಳು, ಕುಟುಂಬ ವ್ಯಾಮೋಹಿಗಳಾದರು’ ಎಂದು ಟೀಕಿಸಿದರು.

‘ಸಮಾಜವಾದಿಗಳು ಎಂದು ಹೇಳಿಕೊಂಡ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್ ಅವರು ಭ್ರಷ್ಟರು, ಕುಟುಂಬ ವ್ಯಾಮೋಹಿಗಳಾದರು. ರಾಜ್ಯದಲ್ಲಿಯೂ ತುಂಬಾ ಜನ ಇದ್ದಾರೆ. ಹೆಸರು ಹೇಳಿದರೆ ಅವರ ವಾರಸುದಾರರಿಗೆ ಬೇಸರವಾಗುತ್ತದೆ. ಹ್ಯೂಬ್ಲೆಟ್ ವಾಚ್‌, ದುಬಾರಿ ಕನ್ನಡಕ, ಸಿದ್ದರಾಮಯ್ಯ ಅವರ ವೈಯಕ್ತಿಕ ವಿಷಯವನ್ನು ನಾನು ಮಾತನಾಡುವುದಿಲ್ಲ’ ಎಂದು ತಿಳಿಸಿದರು.

‘ರಾಹು, ಕೇತುಗಳಂತೆ 14 ತಿಂಗಳು ಕಾಲ ರಾಜ್ಯಕ್ಕೆ ಹಿಡಿದ ಗ್ರಹಣ ಈಗ ಬಿಟ್ಟಿದೆ. ಗುರು ಬಲ, ಶುಕ್ರದೆಸೆ ಎರಡೂ ಈಗ ಬಿಜೆಪಿ ಜತೆಗಿವೆ. ಆದ್ದರಿಂದ ಯಾರು ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಕುಮಾರಸ್ವಾಮಿ ಅವರು ಗೆಲ್ಲುವ ರಾಜಕಾರಣ ಮಾಡಬೇಕೆ ವಿನಾ ಸೋಲಿಸುವ ರಾಜಕಾರಣವನ್ನಲ್ಲ. ಸೋಲಿಸಲು ಸ್ಪರ್ಧೆ ಮಾಡುವುದು ಒಳ್ಳೆಯ ರಾಜಕಾರಣವಲ್ಲ. ದೇವೇಗೌಡ ಅವರಿಂದ ಕುಮಾರಸ್ವಾಮಿ ಅವರು ಒಳ್ಳೆಯ ರಾಜಕಾರಣ ಕಲಿತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT