ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನವನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುವೆ: ಯಡಿಯೂರಪ್ಪ

ವಿರೋಧ ಪಕ್ಷಗಳನ್ನು ಜೀತದಾಳುವಿನಂತೆ ಸಿ.ಎಂ ನೋಡುತ್ತಿದ್ದಾರೆ; ಬಿಎಸ್‌ವೈ ಟೀಕೆ
Last Updated 10 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ಬೆಳಗಾವಿ: ‘ರೈತರು, ಮಹಿಳೆಯರು ಹಾಗೂ ವಿರೋಧ ಪಕ್ಷಗಳ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಗುರವಾಗಿ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷಗಳು ತಮ್ಮ ಜೀತದಾಳುವಿನಂತೆ ಇರಬೇಕೆಂದು ಬಯಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಇಲ್ಲಿ ಕಿಡಿಕಾರಿದರು.

ಪಕ್ಷದ ರೈತ ಮೋರ್ಚಾ ವತಿಯಿಂದ, ಇಲ್ಲಿನ ಸುವರ್ಣ ವಿಧಾನಸೌಧದ ಬಳಿಯ ಅಲಾರವಾಡ ಕ್ರಾಸ್‌ ಹತ್ತಿರ ಹಮ್ಮಿಕೊಂಡಿದ್ದ ರೈತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರ ಬಯಕೆ ಎಂದಿಗೂ ಈಡೇರುವುದಿಲ್ಲ. ಸಮ್ಮಿಶ್ರ ಸರ್ಕಾರ ತೊಲಗುವವರೆಗೆ ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಸುತ್ತೇವೆ. ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುತ್ತೇನೆ. ಅಧಿವೇಶನವನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುತ್ತೇನೆ’ ಎಂದರು.

‘ಸೊಕ್ಕಿನಿಂದ ಉತ್ತರ ನೀಡುವುದನ್ನು ಕುಮಾರಸ್ವಾಮಿ ಬಿಡಬೇಕು. ನಾನು ಇನ್ನೂ 15 ವರ್ಷಗಳ ಕಾಲ ರಾಜಕೀಯದಲ್ಲಿ ಇರುತ್ತೇನೆ. ಜೆಡಿಎಸ್‌ ಪಕ್ಷವನ್ನು ಮನೆಗೆ ಕಳುಹಿಸುತ್ತೇನೆ’ ಎಂದು ಎಚ್ಚರಿಸಿದರು.

ಪ್ರತಿಕ್ರಿಯೆ ಇಲ್ಲ: ‘ಬಿ.ಎಸ್. ಯಡಿಯೂರಪ್ಪ ನೀಡುವ ಬಾಲಿಶ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಮುಖ್ಯಮಂತ್ರಿ ಶೋಕಿಲಾಲ, ಭತ್ತ ಕೊಯ್ಯಲು ಅವರನ್ನು ಮುಖ್ಯಮಂತ್ರಿ ಮಾಡಿಲ್ಲ’ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರ ಪ್ರಮಾಣಪತ್ರ ನನಗೆ ಬೇಕಿಲ್ಲ. ಯಾರು ಏನು ಎನ್ನುವುದನ್ನು ಜನ ನಿರ್ಧರಿಸುತ್ತಾರೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಕಬ್ಬು ಸುಲಿಯಲು ಸಿ.ಎಂಗೆ ಸವಾಲು ಹಾಕಿದ ರೈತ ಮಹಿಳೆ!

‘ಮಂಡ್ಯದಲ್ಲಿ ಭತ್ತ ಕಟಾವು ಮಾಡಿದಂತೆ ಇಲ್ಲಿ ಬಂದು ಕಬ್ಬು ಸುಲಿಯಿರಿ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಸವಾಲು ಹಾಕಿದ್ದಾರೆ.

ಕಬ್ಬು ಬೆಳೆಗಾರರ ಬಾಕಿ ಬಿಲ್‌ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸ್ಥಳ ನಿಗದಿ ನೀವೇ ಮಾಡಿ, ಇಲ್ಲದಿದ್ದರೆ ನಾವು ನಿಗದಿ ಮಾಡಿದ ಸ್ಥಳಕ್ಕೆ ಬಂದು ಕಬ್ಬು ಸುಲಿಯಿರಿ. ಆಗ ಕಬ್ಬು ಬೆಳೆಗಾರರ ಸಂಕಷ್ಟ ನಿಮ್ಮ ಅರಿವಿಗೆ ಬರುತ್ತದೆ’ ಎಂದು ಹೇಳಿದರು.

‘ನಾನು ರೈತ ಮಹಿಳೆ ಅಲ್ಲ ಎಂದು ಮುಖ್ಯಮಂತ್ರಿಯವರು ಪದೇ ಪದೇ ಹೇಳುತ್ತಿದ್ದಾರೆ. ಇಲ್ಲಿ ಹೋರಾಟ ಮಾಡುವವರು ರೈತರಲ್ಲ ಎಂದು ಚುಚ್ಚಿ ಮಾತನಾಡುತ್ತಿದ್ದಾರೆ. ನಮಗೆ ಅವಮಾನ ಎನಿಸುತ್ತಿದೆ. ನಾವು ರೈತರು ಎನ್ನುವುದನ್ನು ಸಾಬೀತು ಪಡಿಸಲು ಅವರು ಹೀಗೆ ಮಾತನಾಡುತ್ತಿರಬಹುದೆಂದು ಅಂದುಕೊಂಡಿದ್ದೇವೆ. ಹಾಗಿದ್ದರೆ ಬನ್ನಿ ನಮ್ಮ ಜೊತೆ ಕಬ್ಬಿನ ಗದ್ದೆಗೆ ಇಳಿಯಿರಿ, ಯಾರು ರೈತರು ಎನ್ನುವುದು ಸಾಬೀತಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT