ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರ ತಾಣವಾದ ಯಡಿಯೂರಪ್ಪ ರಸ್ತೆ

ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು– ಪ್ರಯಾಣಿಕರಿಗೆ ಮುಜುಗರ
Last Updated 5 ಮೇ 2019, 19:49 IST
ಅಕ್ಷರ ಗಾತ್ರ

ಬೆಳಗಾವಿ:ನಗರದ ಹೊರವಲಯದ ಹೆದ್ದಾರಿಗೆ ಹೊಂದಿ ಕೊಂಡಂತಿರುವ ಬಿ.ಎಸ್.ಯಡಿಯೂರಪ್ಪ ರಸ್ತೆಯಲ್ಲಿ ಸಂಜೆಯಾಗುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ.

ಯಡಿಯೂರಪ್ಪ ರಸ್ತೆ ಬೆಳಗಾವಿ–ಧಾರವಾಡ ರಾಷ್ಟ್ರೀಯ ಹೆದ್ದಾರಿಯಿಂದ (ಎನ್‌ಎಚ್‌–4) ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಯೂ ನಗರದ ಹೊರವಲಯ ದಲ್ಲಿ ಇರುವುದರಿಂದ ಬೆಳಗಿನ ಜಾವ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಇಲ್ಲಿ ಸಂಚರಿಸಿದರೆ ಮನಸ್ಸಿಗೆ ಉಲ್ಲಾಸ ಸಿಗುವಂತಿತ್ತು. ಸುತ್ತಲಿನ ಬಡಾವಣೆಗಳ ನಿವಾಸಿಗಳು ಪ್ರತಿದಿನ ಇಲ್ಲಿ ವಾಯುವಿಹಾರ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಸುಂದರ ರಸ್ತೆಯೂ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ.

ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು:ಕತ್ತಲು ಆವರಿಸುತ್ತಿದ್ದಂತೆ ರಸ್ತೆಯಲ್ಲಿ ಪೋಕರಿಗಳು ಹಾಜರಾಗುತ್ತಿದ್ದು, 1.5 ಕಿ.ಮೀ ಉದ್ದದ ರಸ್ತೆಯ ಪಕ್ಕದ ಪುಟ್‌ಪಾತ್‌ ಅನ್ನು ಅಡ್ಡೆಯನ್ನಾಗಿ ಮಾಡಿಕೊಂಡು, ಮದ್ಯ ಸೇವೆನೆಗೆ ಕೂರುತ್ತಿದ್ದಾರೆ. ಕೆಲವರು ತಮ್ಮ ಬೈಕ್‌ಗಳನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ವಾಹನ ಸವಾರರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ಖಾಲಿ ಬಾಟಲಿಗಳನ್ನು ಪುಟ್‌ಪಾತ್ ಹಾಗೂ ರಸ್ತೆಯಲ್ಲಿ ಎಸೆಯುವುದರಿಂದ ವಾಯುವಿಹಾರಕ್ಕೆ ಬರುವವರಿಗೆ ಹಾಗೂ ದಾರಿಹೋಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಇತ್ತೀಚೆಗೆ ಮಹಿಳೆಯರು ವಾಯುವಿಹಾರಕ್ಕೆ ತೆರಳಲು ಹಿಂದೇಟುಹಾಕುವಂತಾಗಿದೆ. ಕುಡಿದ ಮತ್ತಿನಲ್ಲಿ ಕೆಲವರು ಸಂಜೆ ಹಾಗೂ ರಾತ್ರಿ ಹೊತ್ತು ವಾಹನ ಸವಾರರನ್ನು ಸುಖಾಸುಮ್ಮನೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಘಟನೆಗಳು ಇಲ್ಲಿ ನಡೆಯುತ್ತಿವೆ.

ವಿದ್ಯುತ್ ದೀಪಗಳ ದುರಸ್ತಿಗೆ ಆಗ್ರಹ:ಮಾರ್ಗದುದ್ದಕ್ಕೂ ಸೋಲಾರ್‌ವಿದ್ಯುತ್ ದೀಪಗಳನ್ನು ಅಳವಡಿಸ ಲಾಗಿತ್ತು, ಇದರಿಂದ ರಸ್ತೆ ರಾತ್ರಿ ಹೊತ್ತು ಬೆಳಕಿನಿಂದ ಕಂಗೊಳಿಸುತ್ತಿತ್ತು. ಆದರೆ, ಸದ್ಯ ಬಹುತೇಕ ವಿದ್ಯುತ್‌ ದೀಪಗಳು ದುರಸ್ತಿಯಲ್ಲಿವೆ.

ಕೆಲವು ಹಾಳಾಗಿದ್ದರೇ, ಇನ್ನು ಕೆಲವು ದೀಪಗಳನ್ನು ಕುಡುಕರು ಕುಡಿದ ಮತ್ತಿನಲ್ಲಿ ಒಡೆದು ಹಾಕಿದ್ದಾರೆ.ತಾಲ್ಲೂಕಿನ ಹಲಗಾ, ತಾರೀಹಾಳ, ಮಾಸ್ತಮರಡಿ ಸೇರಿ ಅನೇಕ ಗ್ರಾಮಗಳಿಗೆ ಬಸ್‌ ಹಾಗೂ ಖಾಸಗಿ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.

ವಿದ್ಯುತ್‌ ದೀಪಗಳು ಹಾಳಾಗಿ ರುವುದರಿಂದ ಸವಾರರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.‘ಇಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಸಂತೋಷ ಪಾಟೀಲ ಆಗ್ರಹಿಸಿದರು.

ಯುವಕರ ಮನವಿ:ಯಡಿಯೂರಪ್ಪರಸ್ತೆಯಲ್ಲಿನ ಚಟುವಟಿಕೆಗಳ ಕುರಿತು ‘ವಿ–ಬೆಳಗಾವಿ’ ಹೆಸರಿನ ಫೇಸ್‌ಬುಕ್‌ ಪೇಜ್‌ ಗೆಳೆಯರು ಚಿತ್ರ ಸಹಿತ ಸಮಸ್ಯೆಯನ್ನು ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಆದರೆ, ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.

**
ಕಿಡಿಗೇಡಿಗಳು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಪ್ರಯಾಣಿಕರು ಹಾಗೂ ದಾರಿಹೋಕರಿಗೆ ತೊಂದರೆಯಾಗದಂತೆ ರಾತ್ರಿ ಹೊತ್ತು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು
–ಸೀಮಾ ಲಾಟ್ಕರ್‌, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT