ಶನಿವಾರ, ಜೂನ್ 19, 2021
28 °C
‘ಪಂಚತಂತ್ರ’ ನಿರ್ದೇಶಕರಿಂದ ಚುನಾವಣಾ ರಣತಂತ್ರ

ಧಾರವಾಡ ಲೋಕಸಭಾ ಕ್ಷೇತ್ರದಿಂದ ಯೋಗರಾಜ್ ಭಟ್ ಸ್ಪ‍ರ್ಧೆ

ಸಂದರ್ಶನ: ಮಹತಿ Updated:

ಅಕ್ಷರ ಗಾತ್ರ : | |

ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರಿಗೆ ಈ ಬಾರಿ ಅಚ್ಚರಿಯ ಸ್ಪರ್ಧೆಯೊಂದು ಕಾದಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲೊಬ್ಬರಾದ ಯೋಗರಾಜ ಭಟ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ಗಾಳಿಪಟ–2’ ಚಿತ್ರದ ತಯಾರಿಯಲ್ಲಿ ಭಟ್ಟರು ತೊಡಗಿಕೊಂಡಿದ್ದಾರೆ ಎನ್ನುವ ವದಂತಿಗಳ ನಡುವೆಯೇ, ಅವರು ಸಿದ್ಧತೆ ನಡೆಸುತ್ತಿರುವುದು ಸಿನಿಮಾಕ್ಕಲ್ಲ, ಚುನಾವಣೆಗೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಟ್ಟರನ್ನು ಮಾತನಾಡಿಸಲು ಬೆಂಗಳೂರಿನ ಬನಶಂಕರಿಯ ಅವರ ಕಚೇರಿಗೆ ‘ಸುಧಾ’ ಬಳಗ ಹೋದಾಗ, ಅಲ್ಲಿ ಚುನಾವಣಾ ಸಿದ್ಧತೆಯ ತುರುಸೇನೂ ಕಾಣಿಸಲಿಲ್ಲ. ‘ಪಂಚತಂತ್ರ’ ಚಿತ್ರದ ನಾಯಕ–ನಾಯಕಿ ವಿಹಾನ್‌ ಹಾಗೂ ಸೋನಾಲ್‌ ಅಂಗಳದಲ್ಲಿ ನಿಂತು ಗಾಳಿಪಟ ಹಾರಿಸುವ ಪ್ರಯತ್ನದಲ್ಲಿದ್ದರು. ತಮ್ಮ ಕೋಣೆಯೊಳಗೆ ಕುಳಿತಿದ್ದ ಭಟ್ಟರು ಸೀಸದ ಕಡ್ಡಿಯಿಂದ ಬಿಳಿಹಾಳೆಯ ಮೇಲೆ ಗಾಳಿಪಟದ ಚಿತ್ರ ಬಿಡಿಸುತ್ತಿದ್ದರು. ಚಹಾ ಗುಟುಕರಿಸುತ್ತ ಸುತ್ತುಬಳಸಿನ ಮಾತುಗಳಿಲ್ಲದೆ ನೇರ ಪ್ರಶ್ನೆಯೊಂದಿಗೆ ಸಂದರ್ಶನ ಮೊದಲಾಯಿತು.

ನೀವು ಚುನಾವಣೆಗೆ ನಿಲ್ಲುತ್ತಿರುವುದು ಏಕೆ?

ನಾನು ಚುನಾವಣೆಗೆ ಯಾಕೆ ನಿಲ್ಲಬಾರದು ಹೇಳಿ. ನೀವು ಚುನಾವಣೆಗೆ ಯಾಕೆ ನಿಲ್ತಿದ್ದೀರಿ ಎನ್ನೋ ಪ್ರಶ್ನೆಯನ್ನು ನೀವು ಎಂದಾದರೂ ಯಡ್ಯೂರಪ್ಪನವರನ್ನೋ ಸಿದ್ಧರಾಮಯ್ಯನವರನ್ನೋ ಯಾಕೆ ಕೇಳಿಲ್ಲ? ಈ ಪ್ರಶ್ನೆಯನ್ನು ದೊಡ್ಡ ಗೌಡರಿಗೆ ಕೇಳುವ ಧೈರ್ಯ ನಿಮಗಿದೆಯಾ? ದೊಡ್ಡೋರ ಮಾತಿರಲಿ, ಮಂಡ್ಯದಲ್ಲಿ ಎಲೆಕ್ಷನ್‌ಗೆ ನಿಂತಿರುವ ಚಿಕ್ಕ ಗೌಡರನ್ನು ಕೇಳಲಿಕ್ಕೆ ಆಗುತ್ತಾ? ಅವರಿಗೆಲ್ಲ ಕೇಳದ ಪ್ರಶ್ನೇನ ನನಗೆ ಮಾತ್ರ ಯಾಕೆ ಕೇಳ್ತಿದ್ದೀರಿ? ನಿಮ್ಮ ಪ್ರಶ್ನೇಲಿ ಏನೋ ಐಬಿದೆ.

ನಮ್ಮ ಪ್ರಶ್ನೆಯನ್ನು ನೀವು ತಪ್ಪು ತಿಳಿದುಕೊಂಡಿರಿ. ಪ್ರಶ್ನೆ ಇಷ್ಟೇ – ಸಿನಿಮಾ ಮಾಡಿಕೊಂಡಿದ್ದ ನೀವು ಇದ್ದಕ್ಕಿದ್ದಂತೆ ಚುನಾವಣಾ ರಾಜಕಾರಣಕ್ಕೆ ಬರುತ್ತಿರುವುದು ಏಕೆ?

ಮತ್ತೆ ಅದೇ ತಪ್ಪು ಮಾಡ್ತಿದ್ದೀರಿ. ಸಿನಿಮಾದೋರು ರಾಜಕೀಯಕ್ಕೆ ಬಂದರೆ ನಿಮಗೆಲ್ಲ ಎಂಥದು ಗ್ಯಾಸ್‌ ಟ್ರಬಲ್‌ ಅನ್ನೋದೆ ನನಗೆ ಅರ್ಥ ಆಗ್ತಿಲ್ಲ.

ಸಿನಿಮಾಕ್ಕೂ ರಾಜಕೀಯಕ್ಕೂ ಎತ್ತಣ ಸಂಬಂಧ...

ಅದೇ ಅದೇ ತಪ್ಪು ಅಂತ. ಸಿನಿಮಾದೋರು ಯಾಕೆ ರಾಜಕಾರಣ ಮಾಡಬಾರದು? ಸಿನಿಮಾ ಅಂದ್ರೆ ನೀವೆಲ್ಲ ಏನಂದುಕೊಂಡಿದ್ದೀರಿ... ಅದೊಂದು ಪ್ರಬಲ ಮಾಧ್ಯಮ ಕಣ್ರೀ. ಜನರನ್ನು ಎಜುಕೇಟ್‌ ಮಾಡಲಿಕ್ಕೆ ಸಿನಿಮಾಗಿಂತಲೂ ಒಳ್ಳೇ ಮೀಡಿಯಮ್ಮು ಬೇರೆ ಯಾವುದಿದೆ ಹೇಳ್ರಿ... ಸಿನಿಮಾ ಮೂಲಕ ಜನರನ್ನು ಎಜುಕೇಟ್‌ ಮಾಡಲಿಕ್ಕೆ ಸಾಧ್ಯ ಇದೆ ಕಣ್ರೀ...

ಒಂದು ಉದಾಹರಣೆ ಹೇಳಿ ಸಾರ್‌...

ಮಲಯಾಳಂ ಸಿನಿಮಾಗಳು ತೀರಾ ಇತ್ತೀಚಿನವರೆಗೂ ನಮ್ಮ ಹುಡುಗ್ರನ್ನ ಸೆಕ್ಷುಯಲಿ ಎಜುಕೇಟ್ ಮಾಡ್ತಿದ್ದವಲ್ರೀ... ಹಾಂ... ಇದು ಆಫ್‌ ದಿ ರೆಕಾರ್ಡ್... ಬರ್ದು ಗಿರ್ದು ಬಿಟ್ಟೀರಿ ಮತ್ತೆ... ಬೇಕಾದ್ರೆ ‘ಯಜಮಾನ’ ಚಿತ್ರದ ಉದಾಹರಣೆ ಬರೀರಿ. ಆ ಸಿನಿಮಾ ನೋಡಿ ಯಾರೋ ಟೆಕ್ಕಿ ತಮ್ಮ ಹಳ್ಳಿ ನೆನಪಿಸಿಕೊಂಡು ಲಗೇಜ್‌ ಪ್ಯಾಕ್‌ ಮಾಡಿದ್ರಂತೆ...

ಈಗ ಹೇಳ್ತೇನೆ ಕೇಳಿ... ನಾನು ಎಲೆಕ್ಷನ್‌ಗೆ ನಿಲ್ಲೋಕೆ ಒಂದು ಮುಖ್ಯವಾದ ಕಾರಣ ಇದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾದೋರನ್ನ ಕಂಡ್ರೆ ಜನರಿಗೆ ಒಂದು ರೀತಿ ಅವರ್ಷನ್‌ ಕಣ್ರೀ... ನಮ್ಮ ಹೀರೊ ಹೀರೊಯಿನ್‌ಗಳ ಬಗ್ಗೆಯಂತೂ ನೂರೆಂಟು ಕಥೆ ಕಟ್ತಾರೆ. ಪಾಪ, ಅವರೂ ಮನುಷ್ಯರು ಅಲ್ವೇನ್ರಿ... ಇನ್ನು ಸಿನಿಮಾ ವಿಷಯಕ್ಕೆ ಬಂದ್ರೆ, ಈ ಸಿನಿಮಾಗಳಿಂದ ಸಂಸ್ಕೃತಿ ಎಲ್ಲ ಎಕ್ಕುಟ್ಟೋಯ್ತು ಅಂತಾರೆ... ಇವತ್ತಿನ ಸಿನಿಮಾಗಳಿಂದ ಸಾಮಾಜಿಕ ಪರಿಣಾಮ ಸಾಧ್ಯವಿಲ್ಲ ಅಂತಾರೆ... ಇಂಥ ಮಾತುಗಳನ್ನು ಕೇಳಿದಾಗಲೆಲ್ಲ ಬೀಪಿ ರೈಸ್‌ ಆಗುತ್ತೆ. ಇದಕ್ಕೆಲ್ಲ ಏನಾದ್ರೂ ಮಾಡಬೇಕು ಅಂತ ಯೋಚಿಸ್ತಿರುವಾಗಲೇ ಎಲೆಕ್ಷನ್‌ ಡಿಕ್ಲೇರ್‌ ಆಯ್ತು. ಜೈ ಭಜರಂಗಬಲಿ ಅಂತ ಎಲೆಕ್ಷನ್‌ಗೆ ನಿಲ್ಲೋದಿಕ್ಕೆ ಡಿಸೈಡ್‌ ಮಾಡ್ದೆ.

ನಿಮ್ಮ ಮಾತಿನಷ್ಟು ನಿಮ್ಮ ನಿರ್ಧಾರ ಸರಳವಾಗಿಲ್ಲ ಅನ್ಸುತ್ತೆ. ಬಹುಶಃ ನಿಮ್ಮ ರಾಜಕೀಯ ನಿರ್ಧಾರದ ಹಿಂದೆ ಬೇರೆ ಯಾವುದೋ ಪ್ರಬಲವಾದ ಕಾರಣ ಇರಬೇಕು...

ಥೋ... ನೀವು ಬಿಡಲ್ಲ ಕಣ್ರೀ... ನಕ್ಷತ್ರಿಕ ಇದ್ದಂಗೆ... ಹೌದು ಕಣ್ರೀ... ಒಂದು ಕಾರಣ ಇದೆ... ಇತ್ತೀಚೆಗೆ ಆ ಕೆ.ಆರ್‌. ಪೇಟೆಯೋ ಉಪ್ಪಾರಪೇಟೆಯೋ ಶಾಸಕ ಇದ್ದಾರಲ್ರೀ... ಏನ್ರೀ ಅವರ ಹೆಸರು... ಏನೋ ಒಂದು ಬಿಡಿ... ಆ ಶಾಸಕರ ಮಾತು ಕೇಳಿದ್ರಾ... ‘ಸಿನಿಮಾದೋರು ಸುಮ್ಮನೆ ಸಿನಿಮಾ ಮಾಡಿಕೊಂಡು ಇರಲಿ. ಅವರಿಗೆ ರಾಜಕೀಯ ಯಾಕೆ? ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರೋದು ಅನ್ನೋದು ಅವರಿಗೆ ನೆನಪಿರಲಿ. ಸಿನಿಮಾದೋರು ರಾಜಕೀಯ ಮಾಡಿದ್ರೆ ಅವರ ಆಸ್ತಿಪಾಸ್ತಿ ತನಿಖೆ ಮಾಡಿಸಬೇಕಾಗುತ್ತೆ...’ ಅಂತೆಲ್ಲ ಧಮ್ಕಿ ಹಾಕಿದ್ದಾರೆ. ಸ್ವಾಭಿಮಾನ ಇರೋ ಯಾರಿಗಾದ್ರೂ ಈ ಮಾತುಗಳನ್ನು ಕೇಳಿದ್ರೆ ರಕ್ತ ಕುದಿಯಲ್ಲವಾ? ಬೇಕಿದ್ರೆ ನಿಮ್ಮ ಕಿವಿಗೆ ದಾಸವಾಳ ಇಡ್ತೀದ್ದೀನಿ ಅಂದ್ಕೊಳ್ಳಿ... ಆ ಶಾಸಕರ ಮಾತು ಕೇಳಿ ನಂಗೆ ಮೈಯೆಲ್ಲ ಉರಿದದ್ದು ನಿಜ. ಆದರೆ ಸುಮ್ಮನೆ ಉರಿಸ್ಕಂಡ್ರೆ ಏನು ಪ್ರಯೋಜನ. ಇದಕ್ಕೆಲ್ಲ ಏನಾದ್ರೂ ಮಾಡಬೇಕು ಅಂತ ರಾತ್ರಿಯೆಲ್ಲ ಯೋಚನೆ ಮಾಡಿದೆ. ಬೆಳಗಿನ ಜಾವದಲ್ಲಿ ಜ್ಞಾನೋದಯ ಆಯ್ತು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತಾರಲ್ಲ... ಹಾಗೆ ಈ ರಾಜಕಾರಣವನ್ನು ರಾಜಕಾರಣದಿಂದಲೇ ಎದುರಿಸಬೇಕು ಅನ್ನಿಸ್ತು.

ಇದನ್ನೂ ಓದಿ: ಯೋಗರಾಜ ಭಟ್ಟರ ಎಲೆಕ್ಷನ್‌ ಮಂತ್ರ: ‘ಚಂದನವನ’ದಲ್ಲಿ ಹಗ್ಗ ಜಗ್ಗಾಟ!

ಅಂದ್ರೆ, ಈ ಚುನಾವಣೆಯ ಸ್ಪರ್ಧೆ ನಿಮ್ಮ ಪಾಲಿಗೆ ಸ್ವಾಭಿಮಾನದ ಪ್ರಶ್ನೆ...

ಹಾಗೇ ಅಂದ್ಕೊಳ್ಳಿ.

ಅಂದಹಾಗೆ, ಜನ ನಿಮಗೆ ಓಟು ಹಾಕ್ತಾರೆ ಅನ್ನೋ ನಂಬಿಕೆ ಇದೆಯಾ? ಜನ ನಿಮಗೆ ಏಕೆ ಓಟು ಹಾಕಬೇಕು ಅನ್ನೋದಕ್ಕೆ ಒಂದು ಕಾರಣ ಹೇಳಿ.

ಜನ ನನಗೆ ಯಾಕೆ ಓಟು ಹಾಕಲ್ಲ ಅನ್ನೋದಕ್ಕೆ ನೀವು ಒಂದು ಕಾರಣ ಹೇಳಿ ನೋಡಣ. ನೋಡ್ರಿ, ನೀವೊಂದು ವಿಷ್ಯ ತಿಳ್ಕೋಬೇಕು. ನಾನು ಚುನಾವಣೇಲಿ ಗೆಲ್ತೀನೋ ಸೋಲ್ತೀನೋ ಅದು ಜನರಿಗೆ ಬಿಟ್ಟಿದ್ದು. ಒಳ್ಳೆಯದು ಕೆಟ್ಟದ್ದರ ಆಯ್ಕೆ ಮತದಾರರಿಗೆ ಸಂಬಂಧಿಸಿದ್ದು. ನನ್ನ ಉದ್ದೇಶ ಇಷ್ಟೇ, ಜನರಿಗೆ ಒಳ್ಳೆಯ ಆಯ್ಕೆಯ ಅವಕಾಶಗಳೂ ಇರಬೇಕು. ನಮಗೊಬ್ಬ ಸಮರ್ಥ ಪ್ರತಿನಿಧಿ ಬೇಕು ಎಂದು ಬಯಸೋ ಮತದಾರಪ್ರಭುಗಳಿಗೆ ನಾನು ಒಳ್ಳೆಯ ಆಯ್ಕೆ ಅಂತಷ್ಟೇ ಹೇಳಬಲ್ಲೆ. ನಿಮಗೆ ಹಾಗೆ ಅನ್ನಿಸೊಲ್ಲವಾ? ಮಾತಾಡ್ರೀ... ಹೂಂ ಅನ್ನಿ...

ನಿಮ್ಮ ಹಾಗೆಯೇ ಶಿವರಾಮ ಕಾರಂತರು ಕಾರವಾರದಲ್ಲಿ ಎಲೆಕ್ಷನ್‌ಗೆ ನಿಂತಿದ್ದರು....

ಅವರು ಖಾರಂತರು... ನಾವು ಭಟ್ರು... ನಮ್ಮದು ಬೇರೆಯೇ ಲೆಕ್ಕ. ನಾವು ಇತಿಹಾಸದಿಂದ ಪಾಠ ಕಲಿತಿರುವ ಜನ.

ಯಾವ ಕ್ಷೇತ್ರದಿಂದ ಚುನಾವಣೆಗೆ ನಿಂತ್ಕೊಳ್ತಿದ್ದೀರಿ? ಯಾವ ಪಕ್ಷದಿಂದ ಟಿಕೆಟ್‌ ನಿರೀಕ್ಷಿಸ್ತಾ ಇದ್ದೀರಿ?

ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಗ್ಯಾರಂಟಿ. ಇನ್ನು ಪಕ್ಷದ ವಿಷಯ ಕೇಳಿದ್ರಿ... ನಿಮಗೆ ಇಷ್ಟೊತ್ತಿನವರೆಗೆ ನಾನು ಹೇಳಿದ್ದೇ ಅರ್ಥ ಆಗಿಲ್ಲ ಅನ್ಸುತ್ತೆ... ಯಾವುದಾದರೂ ಪಕ್ಷದಿಂದ ಸ್ಪರ್ಧಿಸೋದಾದರೆ ನಾನು ಚುನಾವಣೆಗೆ ಸ್ಪರ್ಧಿಸೋದರಲ್ಲಿ ಅರ್ಥ ಏನಿದೆ... ಪಕ್ಷದ ಟಿಕೇಟ್‌ ಏನಿದ್ರೂ ಕೆ.ಆರ್‌. ಪೇಟೆ ಅಂಥವರಿಗೆ... ನಾವೇನಿದ್ರೂ ಇಂಡಿಪೆಂಡೆಂಟ್‌.

ಧಾರವಾಡದಿಂದಲೇ ಏಕೆ ಸ್ಪರ್ಧೆ?

ಧಾರವಾಡ ನನ್ನ ಜಿಲ್ಲೆ ಕಣ್ರಿ. ನಾನು ಕಣ್ಣು ಬಿಟ್ಟ ಊರು, ಚಡ್ಡಿ ಸರಿಯಾಗಿ ಹಾಕ್ಕೋಳದನ್ನ ಕಲಿಸಿದ ಊರು, ಕನ್ನಡದ ಸೊಗಡನ್ನು ಮೊಗೆ ಮೊಗೆದು ಕೊಟ್ಟ ಊರು ಧಾರವಾಡ... ಅದೇ ಊರು ರಾಜಕೀಯದಲ್ಲೂ ಭವಿಷ್ಯ ಕಲ್ಪಿಸುತ್ತೆ, ನೋಡ್ತಿರಿ... ಧಾರವಾಡ ಪ್ರಜ್ಞಾವಂತರ ಊರು... ನನ್ನ ಕನಸಿನಲ್ಲಿ ಬರೋ ಬೇಂದ್ರೆಯಜ್ಜನ ಊರು... ಅಂಥ ಊರನ್ನು ಬಿಟ್ಟು ಬೇರೆಲ್ಲೂ ನಾನು ಎಲೆಕ್ಷನ್‌ಗೆ ನಿಲ್ಲೋದು ಸಾಧ್ಯವಿರಲಿಲ್ಲ. ಮಂಡ್ಯದಲ್ಲಿ ನಿಲ್ಲೋಣ ಅಂದ್ರೆ ಅಲ್ಲಿ ಅಣ್ತಮ್ಮನ ಜೊತೆ ಸುಮಲತಾಕ್ಕ ಇದ್ದಾರೆ. ಅವರೂ ಇಂಡಿಪೆಂಡೆಂಟೇ.

ನೀವು ಉಪ್ಪಿ ಅವರ ಪಕ್ಷದಿಂದ ಟಿಕೇಟ್‌ ನಿರೀಕ್ಷಿಸಿದ್ದಿರಿ, ಅವರು ಉಹುಂ ಅಂದ್ರು ಅನ್ನೋ ಮಾತಿದೆ...

ನಿಮ್ಮ ಪ್ರಶ್ನೆಗೆ ನಾನು ಉಊಹುಂ, ಅವರದು ಪ್ರಜಾಕೀಯ, ನಮ್ಮದು ರಾಜಕೀಯ... ಆಗ್ಬರಲ್ಲ ಕಣ್ರೀ...

ಒಗಟಿನ ರೀತಿ ಮಾತಾಡ್ತೀರಿ... ಒಟ್ಟಿನಲ್ಲಿ ನೀವು ಒಂದು ರೀತಿ ರೆಬೆಲ್‌ ಸ್ಟಾರ್‌.

ರೆಬೆಲ್‌ ಸ್ಟಾರ್‌ ಅಂತಾದ್ರೂ ಅಂದ್ಕೊಳ್ಳಿ, ಕಾಮಿಡಿ ಕಿಲಾಡಿ ಅಂತ ಬೇಕಾದ್ರೂ ಬರ್ಕೊಳ್ಳಿ.

ನಿಮ್ಮ ಚಿಹ್ನೆ ಏನು? ನಿಮ್ಮ ಪರವಾಗಿ ಪ್ರಚಾರಕ್ಕೆ ಯಾರೆಲ್ಲ ಬರ್ತಾರೆ?

ಗುರುತು ಏನಿರಬಹುದು ಗೆಸ್‌ ಮಾಡಿ. ದಾಸವಾಳ ಅಂತೂ ಖಂಡಿತಾ ಅಲ್ಲ. ಮೊಲದ ಮರಿಯೂ ಅಲ್ಲ. ಗಾಳಿಪಟ ಕಣ್ರೀ...

(ಭಟ್ಟರು ಬ್ಯಾಗ್ರೌಂಡ್‌ ಮ್ಯೂಸಿಕ್‌ ಸಮೇತವಾಗಿ ಸಣ್ಣಗೆ ಗುನುಗಿಕೊಳ್ಳತೊಡಗಿದರು... ‘ಆಕಾಶ ಇಷ್ಟೇ ಯಾಕಿದೆಯೋ, – ತನ್ನೈ ನನನೈ..– ಈ ಭೂಮಿ ಕಷ್ಟ ಆಗಿದೆಯೋ, –ತನ್ನೈ ನನನೈ..– ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ, ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ...’ ಎದುರಿಗಿದ್ದ ನಮ್ಮನ್ನು ನೋಡಿ ತುಟಿ ಕಚ್ಚಿಕೊಳ್ಳುತ್ತ ಮತ್ತೆ ಮಾತಿಗೆ ಹೊರಳಿದರು.)

ಇನ್ನು ಪ್ರಚಾರಕ್ಕೆ ನನ್ನ ಗೆಳೆಯರೆಲ್ಲ ಬರ್ತಾರೆ. ವಿಜಿ ಮತ್ತೆ ಗಣಿ ಅವರದು ಲೀಡ್‌ ರೋಲು. ಚುನಾವಣೆ ಮುಗಿಯೋವರೆಗೆ ಬೆಳಗಿನ ತಿಂಡಿಯಿಂದ ತೂಕಡಿಸುವಾಗಿನ ತೀರ್ಥದವರೆಗೆ ನನ್ನ ಜೊತೆಯೇ ಇರ್ತೀವಿ ಅಂತ ಪ್ರಾಮಿಸ್‌ ಮಾಡಿದ್ದಾರೆ. ಇನ್ನು ನಮ್ಮ ರಂಗಾಯಣ, ಸೂರಿ ಅವರದು ಪೋಷಕ ಪಾತ್ರಗಳು. ಗೆಸ್ಟ್‌ ಅಪಿಯರೆನ್ಸ್‌ ಆಗಿ ಬರ್ತೀವಿ ಅಂತ ಸುದೀಪು ಫೋನ್‌ ಮಾಡಿದ್ರು. ಅಪ್ಪು ಅವರ ವಿಷಸ್‌ ಕೂಡ ನಂಗಿದೆ. ನೋಡ್ತಾ ಇರಿ... ಧಾರವಾಡವನ್ನ ಗಾಂಧೀನಗರ ಮಾಡದೇ ಹೋದ್ರೆ ನನ್ನ ಹೆಸರು... ಥೋ... ಬ್ಯಾಡ ಬಿಡ್ರೀ... ರಾಜಕಾರಣಕ್ಕೆ ಬಂದೆ ಅಂತ ರಾಜಕಾರಣಿಗಳ ಭಾಷೆಯಲ್ಲೇ ಮಾತಾಡೋದು ತಪ್ಪು. ಇಷ್ಟನ್ನ ಹೇಳಲಿಕ್ಕೆ ಇಷ್ಟ ಪಡ್ತೀನಿ, ಏಪ್ರಿಲ್‌ 1ನೇ ತಾರೀಖು ನಾಮಪತ್ರ ಸಲ್ಲಿಸ್ತೀನಿ, ಆಗ ನನ್ನ ಜೊತೇಲಿ ಯಾರ‍್ಯಾರು ಇರ್ತಾರೆ ಅನ್ನೋದು ನಿಮಗೇ ಗೊತ್ತಾಗುತ್ತೆ.

ಜಯಂತ ಕಾಯ್ಕಿಣಿ ಅವರೂ ‍‍ಪ್ರಚಾರಕ್ಕೆ ಬರ್ತಾರಾ?

ನಿಮಗೊಂದು ವಿಷಯ ಹೇಳಲಾ... ರಾಜಕೀಯ ಪ್ರಜ್ಞೆ ಕುರಿತು ನನಗೆ ಒಂದು ಬೆಳಗ್ಗೆ ಜ್ಞಾನೋದಯ ಆಯ್ತಲ್ಲ... ಆಗ ನಾನು ಮೊದಲು ಫೋನ್‌ ಮಾಡಿದ್ದೇ ಜಯಂತಣ್ಣನಿಗೆ. ನನ್ನ ಮಾತು ಕೇಳಿ ಅವರಿಗೆ ಥ್ರಿಲ್‌ ಆಗೋಯ್ತು. ನನ್ನ ಫುಲ್‌ ಆಶೀರ್ವಾದ ನಿಮ್ಮ ಮೇಲಿದೆ, ವಿಜಯೀಭವ ಎಂದು ಆಶೀರ್ವದಿಸಿದರು. ‘ನಾವು ಮನುಷ್ಯನಾಗಿ ಹುಟ್ಟಿಲ್ಲ; ಮನುಷ್ಯರಾಗಲು ಹುಟ್ಟಿದ್ದೇವೆ’ ಅಂತ ಯಶವಂತ ಚಿತ್ತಾಲರು ಹೇಳಿದ್ದಾರೆ. ಅದನ್ನು ಸ್ವಲ್ಪ ಬದಲಾಯಿಸಿಕೊಂಡು ‘ನಾವು ರಾಜಕಾರಣಿಗಳಾಗಿ ಹುಟ್ಟಿಲ್ಲ; ರಾಜಕಾರಣಿಗಳಾಗಲು ಹುಟ್ಟಿದ್ದೇವೆ’ ಎಂದು ಮಾಡಿಕೊಳ್ಳೋಣ ಅಂತ ಐಡಿಯಾ ಕೂಡ ಕೊಟ್ಟಿದ್ದಾರೆ.

ಪ್ರಚಾರಕ್ಕೆ ಸಾಂಗ್ಸ್‌ ಏನಾದ್ರೂ ಬರೀತಾರಾ ಸಾರ್‌?

ನನ್ನ ಮುಖಮೂತಿ ಒಂದು ಗೊತ್ತಿಲ್ಲದ ಸಮಯದಲ್ಲಿ ‘ಮುಂಗಾರು ಮಳೆ’ಗೆ ಹಾಡು ಬರೆದುಕೊಟ್ಟೋರು ಈಗ ಬರೆದುಕೊಡಲ್ಲ ಅಂತೀರಾ... ನಾನು ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಅಂದರೂ ಅವರು ಸುಮ್ನಿರ್ತಾರಾ...

ಜಯಂತರ ವಿಷಯ ಬಿಡಿ ಸರ್‌... ಗಾಳಿಪಟದ ಬಗ್ಗೆ ಹೇಳಿ... ಗಾಳಿಪಟದ ಬಗ್ಗೆ ನಿಮಗೆ ಏಕೆ ಮೋಹ?

ನೋಡಿ, ಆಕಾಶ ಅನ್ನೋದಿದೆಯಲ್ಲ... ಅದು ನನಗೆ ಸಮುದ್ರದ ರೀತಿ ಕಾಣಿಸುತ್ತೆ. ತಲೆಕೆಳಗಾಗಿ ನಿಂತ ಸಮುದ್ರ ಅದು. ಗಾಳಿಪಟ ಅನ್ನೋದು ಗಾಳಿ ಇದ್ದಂತೆ. ಸಮುದ್ರಕ್ಕೆ ಗಾಳ ಹಾಕೋದು ನನಗೆ ತುಂಬಾ ಇಷ್ಟ. ಯಾರಿಗೆ ಗೊತ್ತು... ಗಾಳಕ್ಕೆ ಏನೇನು ಬೀಳುತ್ತೋ...

ಸದ್ಯಕ್ಕೆ ಜನರ ಓಟಿಗೆ ಗಾಳ ಹಾಕಿದ್ದೀರಿ...

ಮತ್ತೆ ತಪ್ಪು ಮಾತು... ನಾನು ಜನರ ಹೃದಯಕ್ಕೆ ಗಾಳ ಹಾಕಿದ್ದೇನೆ...

ಒಂದು ವೇಳೆ ಚುನಾವಣೇಲಿ ಗೆದ್ರೆ, ಆಮೇಲೂ ಸಿನಿಮಾ ಡೈರೆಕ್ಷನ್‌ ಮಾಡ್ತೀರಾ?

ಈ ದೇಶಾನೇ ಡೈರೆಕ್ಷನ್‌ ಮಾಡೋ ಅವಕಾಶ ನನಗೆ ಸಿಕ್ತು ಅಂದ್ಕೊಳ್ಳಿ. ಆಗಲೂ ನಾನು ಸಿನಿಮಾ ಡೈರೆಕ್ಷನ್ ಬಿಡೊಲ್ಲ. ಆ ಮಜಾನೇ ಬೇರೆ ಕಣ್ರೀ... ಇವತ್ತು ನಾನು ಎಲೆಕ್ಷನ್‌ಗೆ ನಿಲ್ಲೋ ಕಾನ್ಫಿಡೆನ್ಸ್‌ ಬಂದಿರೋದು ಯಾವುದರಿಂದ, ಸಿನಿಮಾದಿಂದ... ಹತ್ತಿದ ಏಣಿಯನ್ನು ಒದೆಯೋ ಮಗ ನಾನಲ್ಲ ಕಣ್ರಿ...

ತಮಾಷೆಗೆ ಹೇಳ್ತೀನಿ, ಬರೀಬಾರ್ದು ಮತ್ತೆ... ನಾನು ಸಿನಿಮಾ ಮಾಡಲ್ಲ ಅಂದ್ರೆ ಈ ಕನಕಪುರ, ಜಯಣ್ಣ ಭೋಗಣ್ಣ, ಕುಮಾರು, ಮತ್ತೆ ಆ ಬ್ರದರ್ರು... ಇವರೆಲ್ಲ ಸುಮ್ನಿರ್ತಾರೆ ಅಂದ್ಕೊಂಡ್ರಾ? ಹೊಸ ಸಿನಿಮಾಕ್ಕೆ ಅಡ್ವಾನ್ಸ್‌ ರೂಪದಲ್ಲಿ ಈಗ ಚುನಾವಣೆ ಖರ್ಚಿಗೆ ಫಂಡ್‌ ಕೊಟ್ಟಿರೋದೆ ಅವ್ರು. ಹೀಗಿರುವಾಗ ನಾನು ಸಿನಿಮಾ ಬಿಡ್ತೀನಿ ಅಂದ್ರೂ ಸಿನಿಮಾ ನನ್ನನ್ನ ಬಿಡುತ್ತಾ...

ಹಾಂ, ನಾಮಪತ್ರಾನೂ ‘ಪಂಚರಂಗಿ’ ಚಿತ್ರದ ‘ಗಳು.. ಗಳು..’ ಸ್ಟೈಲಿನಲ್ಲಿ ಬರೀಬೇಕು ಅಂತ ಪ್ಲ್ಯಾನ್‌ ಮಾಡಿದ್ದೀನಿ. ಹೆಚ್ಚು ಟೈಮಿಲ್ಲ, ಸಂದರ್ಶನ ಇಲ್ಲಿಗೆ ಮುಗಿಸೋಣ. ಅಂದಹಾಗೆ, ನಾನು ಬರೆದಿದ್ದ ‘ಚುನಾವಣಾ ಗೀತೆ’ ಕೇಳಿದ್ದೀರೇನ್ರಿ... ಕೇಳಿಸ್ತೀನಿ, ಕೇಳ್ಕೊಳ್ಳಿ...

(ಭಟ್ಟರು ತಮ್ಮ ಮೊಬೈಲ್‌ನಿಂದ ಹಾಡನ್ನು ಕೇಳಿಸತೊಡಗಿದರು.)

ಭ್ರಷ್ಟ ನಾಯಕರ ಹುಟ್ಟಿಗೆ ಕಾರಣ

ಮತ ನೀಡದ ಪ್ರಜೆಯು...

ಉತ್ತಮ ರಾಷ್ಟ್ರಕೆ ಕೆಚ್ಚಿನ ಪ್ರಜೆಯೇ

ಎಂದೆಂದಿಗು ಪ್ರಭುವು...

 

ಬನ್ನಿ ಮನಸು ಮಾಡೋಣ

ಹೊಸದೇ ಕನಸು ಕಾಣೋಣ

ಇದು ಕರ್ತವ್ಯ ಇದು ಕರ್ತವ್ಯ

ರಾಷ್ಟ್ರ ರಚಿಸೋಣ....

ಮಾಡಿ ಮಾಡಿ ಮಾಡಿ ಮತದಾನ

ಇರಲಿ ದೇಶದ ಮೇಲೆ ಅಭಿಮಾನ

ನಮ್ಮ ವೋಟು ನಮಗೇ ಬಹುಮಾನ

ತಿರುಗಿ ನೋಡಲಿ ನಮ್ಮನು ಶತಮಾನ...


ಸೂರಿ, ನಿರ್ದೇಶಕ

****************

ಆ ಭಟ್ಟರಿಗೆ ಬುದ್ಧಿ ಇಲ್ಲ. ಅವರೇ ಬರಕೊಂಡಿದ್ದಾರಲ್ಲ... ತಲೆ ಕೆಟ್ಟ ಭಟ್ಟ ಎಬಡ ತಬಡ... ಅಂತ. ಅದೆಲ್ಲ ಈಗ ನಿಜ ಅನ್ನಿಸ್ತಿದೆ. ‘ಪಂಚತಂತ್ರ’ ಸಿನಿಮಾ ರಿಲೀಸ್‌ ಆಗೋ ಸಮಯಕ್ಕೆ ಎಲೆಕ್ಷನ್‌ ಅಂತಿದ್ದಾರೆ. ನಿರ್ಮಾಪಕರ ಬಗ್ಗೆ ಕಾಳಜಿ ಬೇಡ್ವೆ? ಗಾಳಿಪಟ ಆದ್ರೂ ಹಾರಿಸಲಿ, ರೈಲಾದರೂ ಬಿಡಲಿ. ಯಾರು ಬೇಕಾದ್ರೂ ಪ್ರಚಾರಕ್ಕೆ ಹೋಗಲಿ, ನಾನಂತೂ ಹೋಗಲ್ಲ. ಐ ಆ್ಯಮ್ ಸಾರಿ... ನಂನಮ್ಮ ಬಿರಿಯಾನಿ ನಾವೇ ಮಾಡ್ಕೋಬೇಕು.

******

ಇಲ್ಲ.. ಇಲ್ಲ.. ಇಲ್ಲ.. ನಾನ್ ಸಪೋಲ್ಟ್ ಮಾಡಲ್ಲ. ಈ ಭಟ್ರು ಇನ್ನೊಂದು ನಾಲ್ಕು ಪಿಚ್ಚರ್ ಮಾಡ್ಲಿ ಬೇಕಾದ್ರೆ... ನಾನೇ ಸಪೋಲ್ಟ್ ಮಾಡ್ತೀನಿ. ಆದ್ರೆ ಎಲೆಕ್ಷನ್ ಎಲ್ಲ ಇವ್ರಿಗೆ ಹೇಳಿದ್ದಲ್ಲ. ಚುನಾವಣೆ ಅಂದ್ರೆ ಹೀರೊಯಿನ್‌ಗಳಿಗೆ ಚಿಕ್ ಚಡ್ಡಿ ಹಾಕಿ ಶೂಟಿಂಗ್ ಮಾಡ್ದಂಗೆ ಅಂದ್ಕಬುಟ್ಟವ್ರೆ... ಇದೆಲ್ಲ ಪೊಲಿಟಿಕ್ಸ್‌ನಲ್ಲಿ ನಡ್ಯಲ್ಲ... ನಾನ್ ಸಪೋಲ್ಟ್ ಮಾಡಲ್ಲ....

 –ಕೆ.ಮಂಜು, (ಗೌರವ ಡಾಕ್ಟರೇಟ್ ವಿಜೇತ ನಿರ್ಮಾಪಕರು)

 

* ಸೂಚನೆ: ಈ ಬರಹ ಏಪ್ರಿಲ್‌ 1ರ ’ನಗೆ ದಿನ‘ದ ಹಿನ್ನೆಲೆಯಲ್ಲಿ ರೂಪಗೊಂಡ ಕಾಲ್ಪನಿಕ ರಚನೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು