ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಮತ್ತೆ ಸಿ.ಎಂ ಆಗ್ತಾರೆ: ಜಮೀರ ಅಹ್ಮದ್

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ
Last Updated 11 ಫೆಬ್ರುವರಿ 2019, 5:27 IST
ಅಕ್ಷರ ಗಾತ್ರ

ಕೆರೂರ: ‘ತಾನೇ ಸಿ.ಎಂ ಆಗುತ್ತೇನೆ ಎಂದು ಯಡಿಯೂರಪ್ಪ ಏಳು ತಿಂಗಳಿಂದ ಚಡಪಡಿಸುತ್ತಿದ್ದಾರೆ. ಆದರೆ ನಮ್ಮ ನಾಯಕ ಸಿದ್ದರಾಮಯ್ಯ ಸಿ.ಎಂ ಆಗುತ್ತಾರೆ ವಿನಃ ಯಡಿಯೂರಪ್ಪ ಕನಸಿನಲ್ಲೂ ಆಗಲು ಸಾಧ್ಯವಿಲ್ಲ’ ಎಂದು ಸಚಿವ ಜಮೀರ ಅಹ್ಮದ್ ಹೇಳಿದರು.

ಪಟ್ಟಣದ ಕಿಲ್ಲಾಗಲ್ಲಿಯಲ್ಲಿ ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಸಿದ್ದರಾಮಯ್ಯನವರ ಆಡಳಿತದಲ್ಲಿ ಮುಸ್ಲಿಮರಿಗೆ ಸಾಕಷ್ಟು ಒಳಿತಾಗಿದೆ. ಬಿಜೆಪಿಯನ್ನು ದೂರವಿಡುವ ಉದ್ದೇಶದಿಂದ ನಾವು ನನ್ನ ಹಿಂದಿನ ಪಕ್ಷ ಜೆಡಿಎಸ್‌ನೊಂದಿಗೆ ರಾಜಿ ಮಾಡಿಕೊಂಡಿದ್ದು, ಸುಭದ್ರವಾಗಿ ಐದು ವರ್ಷ ಆಡಳಿತ ಮುನ್ನಡೆಸುತ್ತೇವೆ’ ಎಂದರು.

‘ರೋಶನ್‌ಬೇಗ್, ತನ್ವೀರ್ ಸೇಠರಂತ ಹಿರಿಯರನ್ನು ಬಿಟ್ಟು ನನಗೆ ಸಚಿವ ಸ್ಥಾನ ನೀಡಿದ್ದಾರೆ. ಸಮಿಶ್ರ ಸರ್ಕಾರದಲ್ಲಿ ನಾಲ್ವರು ಮುಸ್ಲಿಂ ಮಂತ್ರಿಗಳಿದ್ದಾರೆ. ಎಲ್ಲರೂ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದರು.

ಇದೇ ವೇಳೆ ಅವರು ಹುಡೇದ ಲಕ್ಷ್ಮಿದೇವಿಗೆ ಸಹಸ್ರಾರು ರೂಪಾಯಿ ನಗದು ದೇಣಿಗೆ ನೀಡುವ ಮೂಲಕ ಸೌಹಾರ್ದ, ಸಾಮರಸ್ಯ ಮೆರೆದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಭೀಮಸೇನ ಚಿಮ್ಮಕಟ್ಟಿ, ಅಂಜುಮನ ಕಮೀಟಿ ಅಧ್ಯಕ್ಷ ಶಂಶೀರ್ ಸುಳಿಕೇರಿ, ಉಸ್ಮಾನಸಾಬ್ ಅತ್ತಾರ, ಅಬೂಬಕರ ಕಳ್ಳಿಮನಿ, ಆರ್.ಎಫ್.ಭಾಗವಾನ, ಪಟ್ಟಣ ಪಂಚಾಯ್ತಿ ಸದಸ್ಯ ಮೋದಿನಸಾಬ್ ಚಿಕ್ಕೂರ, ಮಹ್ಮದ ಯಾಸೀನ್ ಖಾಜಿ, ಜಿನತ್ ಜಾಕೀರ ಟಂಕಸಾಲಿ, ಹಾಸಿಂ ಮುಲ್ಲಾ, ಮಮ್ಮದ್ ಮುಲ್ಲಾ, ಹುಸೇನ್ ನಧಾಫ, ಉಸ್ಮಾನ ಅತ್ತಾರ, ಕುತು ಬುದ್ದೀನ್ ಖಾಜಿ, ದಾದಾಪೀರ ಅತ್ತಾರ ಉಪಸ್ಥಿತರಿದ್ದರು.

ಧರಣಿ ಸ್ಥಳಕ್ಕೆ ಭೇಟಿ:ಏತ ನೀರಾವರಿ ಸೌಲಭ್ಯ ಮತ್ತು ಕೆರೂರ ತಾಲ್ಲೂಕಾಗಿ ಘೋಷಿಸುವ ಜೊತೆಗೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಜಮೀರ ಅಹ್ಮದ್ ಭೇಟಿ ನೀಡಿ, ಧರಣಿ ಹಿಂಪಡೆಯುವಂತೆ ವಿನಂತಿಸಿದರು. ಅದಕ್ಕೆ ರೈತ ಸಂಘದ ಮುಖಂಡರು ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದರು.

ಉದ್ದೇಶಿತ ನೀರಾವರಿ ಕಾಮಗಾರಿಯ ಭೂಮಿ ಪೂಜೆ ಮಾಡಿದ ಬಳಿಕವೇ ನಾವು ನಮ್ಮ ಈ ಧರಣಿಯಿಂದ ಹಿಂದಕ್ಕೆ ಸರಿಯುತ್ತೇವೆ ಎಂದು ರೈತ ಮುಖಂಡ ಗೋವಿಂದಪ್ಪ ಬೆಳಗಂಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT