ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕೆ ಬಿಡೆನ್‌ ನೆರವು: ರಿಚರ್ಡ್ ವರ್ಮಾ

Last Updated 19 ಜುಲೈ 2020, 8:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ‌ ಅಭ್ಯರ್ಥಿ ಜೊ ಬಿಡೆನ್‌ ಅವರು ಆಯ್ಕೆಯಾದರೆ, ವಿಶ್ವಸಂಸ್ಥೆಯಂಥ ಜಾಗತಿಕಮಟ್ಟದ ಸಂಘಟನೆಯನ್ನು ಪುನರ್‌ ರೂಪಿಸಲು ಶ್ರಮಿಸುವುದಲ್ಲದೆ, ಅದರ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ನೆರವಾಗುವರು ಎಂದು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿದ್ದ ರಿಚರ್ಡ್‌ ವರ್ಮಾ ಹೇಳಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ಸರಿಯಾದ ಪ್ರಾತಿನಿಧ್ಯ ಇಲ್ಲದಿರುವುದರಿಂದ ಅದನ್ನು ಮರುರೂಪಿಸುವ ಅಗತ್ಯವಿದೆ ಮತ್ತು ಅದರ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಪಡೆಯಲು ಭಾರತ ಅರ್ಹವಾಗಿದೆ ಎಂದು ಭಾರತವು ಹಲವು ವರ್ಷಗಳಿಂದ ವಾದಿಸುತ್ತಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸಕ್ತ 15 ಸದಸ್ಯರಾಷ್ಟ್ರಗಳಿದ್ದು, ಅಮೆರಿಕ, ಬ್ರಿಟನ್‌, ಫ್ರಾನ್ಸ್, ರಷ್ಯಾ ಹಾಗೂ ಚೀನಾ ಶಾಶ್ವತ ಸದಸ್ಯತ್ವ ಹೊಂದಿವೆ. ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡುವುದನ್ನು ಎಲ್ಲಾ ರಾಷ್ಟ್ರಗಳು ಬೆಂಬಲಿಸಿದ್ದರೂ, ಚೀನಾ ವಿರೋಧಿಸುತ್ತಾ ಬಂದಿದೆ.

‘ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ಬಿಡೆನ್‌ ಅವರು ನೆರವಾಗಲಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ನಮ್ಮ ನಾಗರಿಕರನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಅವರು ಭಾರತದ ಜತೆಗೆ ಕೈಜೋಡಿಸಿ ಕೆಲಸ ಮಾಡುವರು. ಗಡಿಯಾಚೆಗಿನ ಭಯೋತ್ಪಾದನೆ, ಗಡಿಯ ಯಥಾಸ್ಥಿತಿಯನ್ನು ಕದಡುವ ಭಾರತದ ನೆರೆರಾಷ್ಟ್ರಗಳ ಪ್ರಯತ್ನಗಳನ್ನು ತಡೆಯಲು ಅವರು ನೆರವಾಗುವರು’ ಎಂದು ಮಾಜಿ ರಾಯಭಾರಿ ವರ್ಮಾ ಹೇಳಿದ್ದಾರೆ.

ವರ್ಮಾ ಅವರು 2014ರಿಂದ 2017ರ ಅವಧಿಯಲ್ಲಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT