ಶನಿವಾರ, ಸೆಪ್ಟೆಂಬರ್ 18, 2021
27 °C
ಅಮೆರಿಕದ ಸಂಸತ್ತು ನೇಮಿಸಿದ್ದ ಆಯೋಗದ ವರದಿ

ಭಾರತದ ವಿರುದ್ಧ ಆಕ್ರಮಣಕಾರಿ ವಿದೇಶಾಂಗ ನೀತಿ ಅನುಸರಿಸಿದೆ ಚೀನಾ: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಭಾರತದ ವಿರುದ್ಧ ‘ಆಕ್ರಮಣಕಾರಿ’ ವಿದೇಶಾಂಗ ನೀತಿಯನ್ನು ಜಾರಿ ಮಾಡುವ ಮೂಲಕ, ವಾಸ್ತವ ಗಡಿರೇಖೆಯನ್ನು ಸ್ಪಷ್ಟಗೊಳಿಸುವ ಮತ್ತು ಗಡಿಯಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಪ್ರಯತ್ನವನ್ನು ಚೀನಾ ಭಂಗಗೊಳಿಸುತ್ತಿದೆ’ ಎಂದು ಅಮೆರಿಕದ ಸಂಸತ್ತು ನೇಮಕ ಮಾಡಿದ್ದ ಆಯೋಗದ ವರದಿ ಹೇಳಿದೆ.

‘ಚೀನಾ ಕಮ್ಯುನಿಸ್ಟ್‌ ಪಾರ್ಟಿಯ (ಸಿಸಿಪಿ) ಮಹಾ ಕಾರ್ಯದರ್ಶಿ ಷಿ. ಜಿನ್‌ಪಿಂಗ್‌ ಅಧ್ಯಕ್ಷತೆಯಲ್ಲಿ ಭಾರತದ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಚೀನಾ ಇನ್ನಷ್ಟು ಬಿಗಿಗೊಳಿಸಿದೆ. 2013ರ ನಂತರ ವಾಸ್ತವ ಗಡಿರೇಖೆಯುದ್ದಕ್ಕೂ ಐದು ಬಾರಿ ಭಾರತದ ಜತೆ ಸಂಘರ್ಷ ನಡೆಸಿದೆ’ ಎಂದು ಅಮೆರಿಕ– ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ ಬಿಡುಗಡೆ ಮಾಡಿದ ಸಂಕ್ಷಿಪ್ತ ವರದಿಯಲ್ಲಿ ತಿಳಿಸಲಾಗಿದೆ.

‘ಗಡಿಯಲ್ಲಿ ಸ್ಥಿರತೆ ಕಾಪಾಡುವ ಮತ್ತು ವಿಶ್ವಾಸ ವೃದ್ಧಿಗೆ ಸಹಕಾರಿಯಾಗುವಂಥ ಹಲವು ಒಪ್ಪಂದಗಳಿಗೆ ಭಾರತ–ಚೀನಾ ಸಹಿ ಮಾಡಿವೆ. ಆದರೆ ವಾಸ್ತವ ಗಡಿರೇಖೆಯನ್ನು ಸ್ಪಷ್ಟಪಡಿಸುವ ಪ್ರಯತ್ನಗಳಿಗೆಲ್ಲಾ ಚೀನಾ ಅಡ್ಡಿಪಡಿಸಿದೆ. ಇದರಿಂದಾಗಿ ಗಡಿಯಲ್ಲಿ ಶಾಶ್ವತ ಶಾಂತಿ ನೆಲೆಸಲು ಸಾಧ್ಯವಾಗಿಲ್ಲ. ಅಮೆರಿಕ ಹಾಗೂ ಅದರ ಸಹಯೋಗಿಗಳ ಜತೆಗೆ ಭಾರತದ ಸಂಬಂಧಗಳು ವೃದ್ಧಿಸುತ್ತಿರುವುದು ಚೀನಾದ ಚಿಂತೆಯನ್ನು ಹೆಚ್ಚಿಸುತ್ತಿದೆ. ಗಡಿಯಲ್ಲಿ ಈಚೆಗೆ ನಡೆದ ಘರ್ಷಣೆಯು ಅಮೆರಿಕದ ಜತೆಗೆ ಸಂಬಂಧ ವೃದ್ಧಿಸುತ್ತಿರುವ ಭಾರತಕ್ಕೆ ಚೀನಾ ನೀಡಿದ ಎಚ್ಚರಿಕೆಯಾಗಿದೆ’ ಎಂದು ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ತಂಡದ ನೀತಿ ವಿಶ್ಲೇಷಕ ವಿಲ್‌ಗ್ರೀನ್‌ ಅವರು ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಲಾಗಿದೆ.

‘2012ರಲ್ಲಿ ಷಿ ಜಿನ್‌ಪಿಂಗ್‌ ಅವರು ಅಧಿಕಾರ ವಹಿಸಿಕೊಂಡ ನಂತರ ಹಲವು ಬಾರಿ ಮೋದಿಯನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಮತ್ತು ಪರಸ್ಪರ ವಿಶ್ವಾಸ ವೃದ್ಧಿಸುವಂಥ ಹಲವು ಕ್ರಮಗಳನ್ನು ಎರಡೂ ದೇಶಗಳು ಕೈಗೊಂಡಿವೆ. ಆದರೂ, ಸಂಘರ್ಷಗಳು ಹೆಚ್ಚಾಗಿವೆ. 2013ಕ್ಕೂ ಹಿಂದೆ 1987, 1960 ಹಾಗೂ 1950ರಲ್ಲಿ, ಗಡಿಯಲ್ಲಿ ಸಂಘರ್ಷಗಳು ನಡೆದಿದ್ದವು. 1962ರ ಯುದ್ಧದಲ್ಲಿ ಎರಡೂ ಕಡೆಯ ಸಾವಿರಾರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು’.

‘ಇಂಡೊ-ಪೆಸಿಫಿಕ್ ಪ್ರದೇಶದ ತೈವಾನ್ ಹಾಗೂ ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ತನ್ನ ಸಾರ್ವಭೌಮತ್ವದ ಹಕ್ಕುಗಳನ್ನು ಚೀನಾ ಆಕ್ರಮಣಕಾರಿಯಾಗಿ ಪ್ರತಿಪಾದಿಸುತ್ತಿದೆ. ಭಾರತದ ಜತೆಗಿನ ಇತ್ತೀಚಿನ ಸಂಘರ್ಷವು ಚೀನಾದ ಈ ವಿಸ್ತರಣಾ ವಾದಕ್ಕೆ ಪೂರಕವಾಗಿದೆ. ದಕ್ಷಿಣ ಹಾಗೂ ಪೂರ್ವ ಚೀನಾ ಸಮುದ್ರದಲ್ಲಿ ಹಲವು ದ್ವೀಪಗಳನ್ನು ಚೀನಾ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಕೆಲವನ್ನು ತಾನೇ ನಿರ್ಮಿಸಿದೆ. ಈ ಪ್ರದೇಶಗಳು ಖನಿಜ, ತೈಲ ಹಾಗೂ ಇತರ ಸಂಪನ್ಮೂಲಗಳಿಂದ ಸಮೃದ್ಧವಾದವುಗಳಾಗಿದ್ದು ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ್ದಾಗಿವೆ’ ಎಂದು ವರದಿ ಹೇಳಿದೆ.

ದಕ್ಷಿಣ ಚೀನಾ ಸಮುದ್ರ ಬಹುತೇಕ  ತನ್ನದೇ ಎಂದು ಚೀನಾ ವಾದಿಸಿದೆ. ಆದರೆ ಈ ವಾದವನ್ನು ವಿಯೆಟ್ನಾಂ, ಫಿಲಿಪ್ಪೀನ್ಸ್‌, ಮಲೇಷ್ಯಾ, ಬ್ರೂನಿ, ತೈವಾನ್‌ ಮುಂತಾದ ರಾಷ್ಟ್ರಗಳು ವಿರೋಧಿಸಿವೆ. ಇದರ ಮೇಲೆ ನಮ್ಮ ಅಧಿಕಾರವೂ ಇದೆ ಎಂದು ಈ ದೇಶಗಳು ವಾದಿಸಿವೆ.

ಗಾಲ್ವನ್‌ ಸಂಘರ್ಷಕ್ಕೂ ಕೆಲವೇ ವಾರಗಳ ಹಿಂದೆ ಚೀನಾದ ರಕ್ಷಣಾ ಸಚಿವ ವೀ ಫೆಂಗ್‌ ಅವರು, ‘ದೇಶಕ್ಕೆ ಹೊರಗಿನಿಂದ ಭದ್ರತಾ ಸವಾಲು ಎದುರಾಗಿದೆ, ಸ್ಥಿರತೆ ಕಾಯ್ದುಕೊಳ್ಳಲು ಹೋರಾಟದ ಹಾದಿಯನ್ನು ಹಿಡಿಯಬೇಕಾಗಿದೆ’ ಎಂಬ ಹೇಳಿಕೆ ನೀಡಿದ್ದರು. ನೆರೆರಾಷ್ಟ್ರಗಳೊಂದಿಗೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಲಿದ್ದೇವೆ ಎಂಬುದರ ಸಂಭಾವ್ಯ ಸೂಚನೆ ಇದಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು