ಭಾನುವಾರ, ಜೂಲೈ 5, 2020
22 °C

ಮಾನವ ಕಳ್ಳಸಾಗಾಣಿಕೆ ತಡೆಗೆ ಭಾರತದ ಪ್ರಯತ್ನ ಸಾಲದು: ಅಮೆರಿಕದ ವಿದೇಶಾಂಗ ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಮಾನವ ಕಳ್ಳಸಾಗಾಣಿಕೆಯನ್ನು ತಡೆಯಲು ಭಾರತವು 2019ರಲ್ಲಿ ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ಆದರೆ, ಕನಿಷ್ಠ ಮಾನದಂಡಗಳನ್ನು ಪಾಲಿಸುವಲ್ಲಿ ಪೂರ್ಣ ಪ್ರಮಾಣದ ಯಶಸ್ಸು ಪಡೆದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವರದಿ ಹೇಳಿದೆ.

ಭಾರತವನ್ನು ಮಾನವ ಕಳ್ಳಸಾಗಾಣಿಕೆ ಕುರಿತ ಎರಡನೇ ಶ್ರೇಣಿಯ ರಾಷ್ಟ್ರಗಳ ಸಾಲಿನಲ್ಲಿ ಉಳಿಸಿಕೊಳ್ಳಲಾಗಿದೆ. ಕಳ್ಳಸಾಗಾಣಿಕೆ ತಡೆಯುವಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸದಿರುವ ಪಾಕಿಸ್ತಾನವನ್ನು ಎರಡನೇ ಶ್ರೇಣಿಯ ‘ವೀಕ್ಷಣಾ ರಾಷ್ಟ್ರ’ಗಳ ಪಟ್ಟಿಗೆ ಸೇರಿಸಲಾಗಿದೆ. ಈ ದಿಕ್ಕಿನಲ್ಲಿ ಯಾವುದೇ ಪ್ರಯತ್ನವನ್ನು ಮಾಡದಿರುವ ಚೀನಾವನ್ನು ಮೂರನೇ ಶ್ರೇಣಿಯ ರಾಷ್ಟ್ರಗಳ ಸಾಲಿನಲ್ಲಿಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಕಳ್ಳಸಾಗಾಣಿಕೆದಾರರಿಗೆ ಶಿಕ್ಷೆ ವಿಧಿಸುವುದು, ಬಿಹಾರದಲ್ಲಿ ಕಳ್ಳಸಾಗಾಣಿಕೆಗೆ ನೆರವು ನೀಡಿದ ಅಧಿಕಾರಿಗಳ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಿರುವುದು, ಮಾಜಿ ಶಾಸಕ ಸೇರಿದಂತೆ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಮುಂತಾದ ಬೆಳವಣಿಗೆಗಳನ್ನು ಉಲ್ಲೇಖಿಸಿರುವ ವರದಿಯು, ‘ನಿಗದಿ ಮಾಡಿದ್ದ ಕನಿಷ್ಠ ಮಾನದಂಡಗಳನ್ನು ಪಾಲಿಸುವಲ್ಲಿ ಭಾರತವು ಪೂರ್ಣ ಯಶಸ್ಸು ಗಳಿಸಿಲ್ಲ. ಆದರೆ, ಹಿಂದಿನ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ಗಮನಾರ್ಹ ಪ್ರಯತ್ನಗಳು ನಡೆದಿವೆ. ಆದರೆ, ಸತತವಾಗಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಕಳ್ಳಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದು ವರದಿ ಹೇಳಿದೆ.

ಭಾರತದ ಕಳ್ಳಸಾಗಾಣಿಕೆದಾರರು ತಮ್ಮ ದೇಶ ಮಾತ್ರವಲ್ಲ, ನೇಪಾಳ ಮತ್ತು ಬಾಂಗ್ಲಾದೇಶದ ಮಹಿಳೆಯರು ಮತ್ತು ಹುಡುಗಿಯರನ್ನೂ ವೇಶ್ಯಾವೃತ್ತಿಗೆ ದೂಡುತ್ತಿದ್ದಾರೆ. ಭಾರತವು ಬಾಲ ಲೈಂಗಿಕ ಪ್ರವಾಸಿಗರ ಮೂಲ ಅಷ್ಟೇ ಅಲ್ಲ , ಬಾಲ ಲೈಂಗಿಕ ಪ್ರವಾಸಿಗರ ತಾಣವೂ ಆಗುತ್ತಿದೆ. ಆರ್ಕೆಸ್ಟ್ರಾ ನೃತ್ಯಗಾರ್ತಿಯರಾಗಿ ಕೆಲಸ ಮಾಡಲು ಭಾರತೀಯ ಮತ್ತು ನೇಪಾಳಿ ಹುಡುಗಿಯರನ್ನು ಕಳ್ಳಸಾಗಾಣಿಕೆದಾರರು ಒತ್ತಾಯಿಸುತ್ತಾರೆ. ವಿಶೇಷವಾಗಿ ಬಿಹಾರದಲ್ಲಿ ಇಂಥ ಹುಡುಗಿಯರು ‘ಕಲ್ಪಿತ ಸಾಲ’ ತೀರುವವರೆಗೂ ಡಾನ್ಸ್‌ ಗ್ರೂಪ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಧಾರ್ಮಿಕ ಪ್ರವಾಸಿ ತಾಣಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರನ್ನು ವೇಶ್ಯಾವಾಟಿಕೆಗೆ ಕಳ್ಳಸಾಗಾಣಿಕೆದಾರರು ಬಳಸುತ್ತಾರೆ’ ಎಂದು ವರದಿ ಉಲ್ಲೇಖಿಸಿದೆ.

ವಿದೇಶಗಳಲ್ಲಿ ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳು ಹಾಗೂ ಮಲೇಷ್ಯಾದಲ್ಲಿ ಕೆಲಸ ಕೊಡಿಸುವ ಆಮಿಷ ತೋರಿಸಿ, ದುಬಾರಿ ಶುಲ್ಕವನ್ನು ಪಡೆದು ವಂಚನೆ ನಡೆಸಲಾಗುತ್ತದೆ. ಮನೆಕೆಲಸಕ್ಕಾಗಿ ಕೊಲ್ಲಿ ರಾಷ್ಟ್ರಗಳಿಗೆ ವಿಶೇಷವಾಗಿ ಕುವೈತ್‌‌, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಿಗೆ ಹೋಗುವ ಭಾರತೀಯ ಮಹಿಳೆಯರು ಕೆಲವೊಮ್ಮೆ ವೇತನವೂ ಇಲ್ಲದೆ ದುಡಿಯಬೇಕಾಗುತ್ತಿದೆ. ವಿರೋಧ ವ್ಯಕ್ತಪಡಿಸಿದರೆ ಅಂಥವರ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು