ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‍ ವಿರುದ್ಧದ ಹೋರಾಟಕ್ಕೆ ಜನರದೇ ನೇತೃತ್ವ: ಪ್ರಧಾನಿ ಮೋದಿ

ಮೊದಲೇ ಲಾಕ್‍ಡೌನ್‍ ಜಾರಿಯಿಂದ ಉತ್ತಮ ಪರಿಣಾಮ, ಭಾರತದ ಸ್ಥಿತಿ ಉತ್ತಮ -ಪ್ರಧಾನಿ ಪ್ರತಿಪಾದನೆ
Last Updated 28 ಜೂನ್ 2020, 6:54 IST
ಅಕ್ಷರ ಗಾತ್ರ

ವಾಷಿಂಗ್ಟನ್‍: ‘ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ಜನರದೇ ನೇತೃತ್ವವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶದಾದ್ಯಂತ ಲಾಕ್‍ಡೌನ್‍ ಜಾರಿಗೆ ಜನರ ಸಹಕಾರವನ್ನು ಅವರು ಉದಾಹರಿಸಿದರು.

ಅಮೆರಿಕನ್‌ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್ (ಎಎಪಿಐ) ಸದಸ್ಯರ ಜೊತೆಗೆ ವರ್ಚುಯೆಲ್‍ ಸಭೆಯಲ್ಲಿ ಮಾತನಾಡಿದ ಅವರು, 'ದೇಶವನ್ನು ಸ್ವಾವಲಂಬಿಯಾಗಿಸಲು ಕೋವಿಡ್ ಪರಿಸ್ಥಿತಿ ಒಂದು ಸದವಕಾಶ’ ಎಂದರು.

ಅಮೆರಿಕದ ಸುಮಾರು 80 ಸಾವಿರ ಸದಸ್ಯರನ್ನು ಒಳಗೊಂಡ ಪ್ರಾತಿನಿಧಿಕ ಸಂಸ್ಥೆಯ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಮಾತನಾಡಿದರು. ಎಎಪಿಐ ಅನ್ನು ಉದ್ದೇಶಿಸಿ ಅವರು ಮಾತನಾಡಿದ್ದು ಇದೇ ಮೊದಲು.

ಕೊರೊನಾ ಪಿಡುಗಿನ ಪರಿಣಾಮ ಕುರಿತಂತೆ ವಿವಿಧ ದೇಶಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಇತರೆ ದೇಶಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರತಿಪಾದಿಸಿದರು.

ಅಮೆರಿಕದಲ್ಲಿ ಪ್ರತಿ ದಶಲಕ್ಷಕ್ಕೆ ಸಾವಿನ ಸಂಖ್ಯೆ 350 ಹಾಗೂ ಐರೋಪ್ಯ ದೇಶಗಳಾದ ಬ್ರಿಟನ್‍, ಇಟಲಿ, ಸ್ಪೈನ್‍ನಲ್ಲಿ 600ಕ್ಕೂ ಅಧಿಕವಾಗಿದೆ. ಆದರೆ, ಭಾರತದಲ್ಲಿ ಈ ಸಂಖ್ಯೆ 12ಕ್ಕೂ ಕಡಿಮೆ ಎಂದು ಹೇಳಿದರು.

ಕೊರೊನಾ ಸೋಂಕು ವಿರುದ್ಧದ ಹೋರಾಟದ‍ಲ್ಲಿ ಉತ್ತರ ಪ್ರದೇಶ ಗಣನೀಯ ಸಾಧನೆ ಮಾಡಿದೆ. ಅಂತೆಯೇ ಇತರೆ ರಾಜ್ಯಗಳು ಅತ್ಯುತ್ತಮ ಸಾಧನೆಯನ್ನೇ ತೋರುತ್ತಿವೆ ಎಂದು ಪ್ರಧಾನಿ ತಿಳಿಸಿದರು.

ವಿಶ್ವದ ಎರಡನೇ ಅತ್ಯಧಿಕ ಜನಸಂಖ್ಯೆ ಹೊಂದಿರುವ, ಧಾರ್ಮಿಕ ಮತ್ತು ರಾಜಕೀಯ ಸಮಾವೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಭಾರತದಲ್ಲಿ ಜನರ ಸಹಕಾರ ಇಲ್ಲದಿದ್ದರೆಈ ಸಾಧನೆ ಸಾಧ್ಯ ಆಗುತ್ತಿರಲಿಲ್ಲ. ಸಕಾಲದಲ್ಲಿ ಜಾರಿಗೊಳಿಸಿದ ಲಾಕ್‍ಡೌನ್‍ ಕ್ರಮದಿಂದಾಗಿ ಭಾರತದಲ್ಲಿ ಲಕ್ಷಾಂತರ ಜನರ ಜೀವರಕ್ಷಣೆಯಾಗಿದೆ ಎಂದು ಪ್ರತಿಪಾದಿಸಿದರು.

ಕೊರೊನಾ ಅನ್ನು ದೇಶದಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯ ಉತ್ತಮ ಪಡಿಸಲು ಒಂದ ಅವಕಾಶವಾಗಿ ಬಳಸಿಕೊಳ್ಳಲಾಗಿದೆ. ಉದಾಹರಣೆಗೆ ಕೋವಿಡ್‍ ಸ್ಥಿತಿಯ ಆರಂಭದಲ್ಲಿ 1 ಪ್ರಯೋಗಾಲಯವಿತ್ತು. ಈಗ ಸಾವಿರ ಪ್ರಯೋಗಾಲಯಗಳಿವೆ ಎಂದರು.

ಪಿಡುಗು ಕಾಣಿಸಿಕೊಂಡ ಆರಂಭದಲ್ಲಿ ವೈಯಕ್ತಿಕ ಸುರಕ್ಷಾ ಪರಿಕರಗಳು (ಪಿಪಿಇ) ಹೆಚ್ಚು ಮುಖ್ಯವಾಗಿತ್ತು. ಈಗ ಈ ವಿಷಯದಲ್ಲಿ ನಾವು ಸ್ವಾವಲಂಬಿ ಆಗಿದ್ದೇವೆ. ಪ್ರತಿವಾರ ದೇಶದಲ್ಲಿ 30 ಲಕ್ಷ ಎನ್‍95 ದರ್ಜೆಯ ಮಾಸ್ಕ್, 50 ಸಾವಿರಕ್ಕೂ ಅಧಿಕ ವೆಂಟಿಲೇಟರ್ ಗಳು ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆರಂಭಿಕವಾಗಿಯೇ ಲಾಕ್‍ಡೌನ್‍ ಜಾರಿಗೊಳಿಸಿದ್ದು, ಪರಿಸ್ಥಿತಿ ಎದುರಿಸಲು ಸಹಕಾರಿಯಾಯಿತು ಎನ್ನುವ ಮೂಲಕ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್‍ಜಿತ್‍ ಸಿಂಗ್‍ ಸಂಧು ಅವರು ಪ್ರಧಾನಿ ಮಾತನ್ನು ಸಮರ್ಥಿಸಿದರು.

ಯೋಗ ಜೀವನಶೈಲಿಯ ಭಾಗ: ಭಾರತ ಜಾಗತಿಕವಾಗಿ ಆರೋಗ್ಯ ಮತ್ತು ದೈಹಿಕ ದೃಢತೆಗೆ ಎಂದಿಗೂ ಉತ್ತಮ ಕೊಡುಗೆ ನೀಡಿದೆ ಎಂದ ಪ್ರಧಾನಿ, ಯೋಗ ಇಂದು ಜೀವನಶೈಲಿಯ ಆಂತರಿಕ ಭಾಗವೇ ಆಗಿದೆ ಎಂದು ಪ್ರತಿಪಾದಿಸಿದರು.

ಈಗ ವಿಶ್ವದಾದ್ಯಂತ ಆಯುರ್ವೇದವನ್ನು ತ್ವರಿತಗತಿಯಲ್ಲಿ ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.ಭಾರತದ ಆಯುರ್ವೇದ ಮತ್ತು ಇತರೆ ಪರ್ಯಾಯ ಚಿಕಿತ್ಸಾ ಕ್ರಮಗಳು ದೇಹದ ನಿರೋಧಕ ಶಕ್ತಿಯನ್ನು ಉತ್ತಮಪಡಿಸಲಿವೆ ಎಂಬುದು ಅನೇಕ ವಿಜ್ಞಾನ ಸಂಶೋಧಕರ ಅಭಿಮತವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT