ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಭೂಪಟ: ಸಾಂವಿಧಾನಿಕ ತಿದ್ದುಪಡಿ ಚರ್ಚೆಗೆ ನೇಪಾಳದ ಮೇಲ್ಮನೆ ಅನುಮೋದನೆ

Last Updated 9 ಜುಲೈ 2020, 2:47 IST
ಅಕ್ಷರ ಗಾತ್ರ

ಕಠ್ಮಂಡು: ಭಾರತದ ಭೂಪ್ರದೇಶಗಳನ್ನು ಹೊಂದಿರುವ ರಾಜಕೀಯ ಭೂಪಟದ ಪರಿಷ್ಕರಣೆಗೆ ಅಗತ್ಯವಾಗಿರುವ ಸಾಂವಿಧಾನಿಕ ತಿದ್ದುಪಡಿ ಕುರಿತು ಚರ್ಚೆಗೆ ನೇಪಾಳದ ಸಂಸತ್ತಿನ ಮೇಲ್ಮನೆ ಭಾನುವಾರ ಅನುಮೋದನೆ ನೀಡಿದೆ.

ಶನಿವಾರವಷ್ಟೇ ಸಂಸತ್ತಿನ ಕೆಳಮನೆ ದೇಶದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಪರಿಷ್ಕರಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಮಸೂದೆ ಪರವಾಗಿ 258 ಸದಸ್ಯರು ಮತ ಚಲಾಯಿಸಿದ್ದರು. ಭಾರತದ ಉತ್ತರಾಖಂಡ ರಾಜ್ಯದ ಭಾಗವಾದ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳು ಪರಿಷ್ಕೃತ ಭೂಪಟದಲ್ಲಿ ಇದ್ದವು. ನೇಪಾಳದ ಈ ನಡೆಯನ್ನು ‘ಸಮರ್ಥನೀಯವಲ್ಲ’ ಎಂದು ಭಾರತ ವಿರೋಧಿಸಿತ್ತು.

ಈ ಮಸೂದೆ ಇದೀಗ ಮೇಲ್ಮನೆಗೆ ಬಂದಿದ್ದು, ನೇಪಾಳ ಕಮ್ಯುನಿಸ್ಟ್‌ ಪಕ್ಷ ಇಲ್ಲಿ ಬಹುಮತದಲ್ಲಿದೆ. ಭಾನುವಾರ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಕಾನೂನು ಸಚಿವ ಶಿವ ಮಾಯಾ ತುಂಬಾಹಂಗ್ಪೆ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಪ್ರಸ್ತಾವವನ್ನು ಮುಂದಿಟ್ಟರು. ಚರ್ಚೆಯ ನಂತರ ಮಸೂದೆಯನ್ನು ಪರಿಗಣಿಸುವ ಪ್ರಸ್ತಾವನೆಗೆ ಸರ್ವಾನುಮತದ ಒಪ್ಪಿಗೆ ದೊರೆಯಿತು ಎಂದು ‘ದಿ ಕಠ್ಮಂಡು ಪೋಸ್ಟ್‌’ ವರದಿ ಮಾಡಿದೆ.

72 ಗಂಟೆ ಅವಕಾಶ: ‘ಮಸೂದೆಗೆ ತಿದ್ದುಪಡಿಗಳು ಅಗತ್ಯವಿದ್ದಲ್ಲಿ ಅವುಗಳನ್ನು ಮಂಡಿಸಲು 72 ಗಂಟೆಗಳ ಕಾಲಾವಕಾಶವನ್ನು ಸದಸ್ಯರಿಗೆ ಮೇಲ್ಮನೆ ನೀಡಿದೆ. ‘ಮುಂದಿನ ನಾಲ್ಕು ದಿನಗಳ ಒಳಗಾಗಿ ಈ ಮಸೂದೆಯನ್ನು ಅನುಮೋದಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಮೇಲ್ಮನೆ ಕಾರ್ಯದರ್ಶಿ ರಾಜೇಂದ್ರ ಫುಯಲ್ ತಿಳಿಸಿದ್ದಾರೆ’ ಎಂದು ಪತ್ರಿಕೆ ವರದಿ ಮಾಡಿದೆ. ‌

ಭಾರತದ ಗಡಿಯಲ್ಲಿರುವ ಹಳ್ಳಿಗೆ ಸೇರಿದ್ದು(ಪಿಥೋರ್‌ಗಡ್‌, ಉತ್ತರಾಖಂಡ): ಪರಿಷ್ಕೃತ ಭೂಪಟಕ್ಕೆ ನೇಪಾಳವು ಸೇರ್ಪಡೆ ಮಾಡಿಕೊಂಡಿರುವಕಾಲಾಪಾನಿ ಮತ್ತು ಲಿಪುಲೇಖ್ ಪ್ರದೇಶದಲ್ಲಿರುವ ಭೂಮಿಯು ಭಾರತದಲ್ಲಿರುವ ಎರಡು ಹಳ್ಳಿಯ ಜನರಿಗೆ ಸೇರಿದ್ದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರತ–ನೇಪಾಳ ಗಡಿಯಲ್ಲಿ ಇರುವ ಲಿಪುಲೇಖ್‌, ಕಾಲಾಪಾನಿ ಮತ್ತು ನಭೀಧಂಗ್‌ನಲ್ಲಿರುವ ಎಲ್ಲ ಭೂಮಿ ಪಿಥೋರ್‌ಗಡ್‌ ಜಿಲ್ಲೆಯ ಧಾರ್ಚುಲ ಉಪವಿಭಾಗದಲ್ಲಿರುವ ಗರ್ಬಿಯಾಂಗ್‌ ಮತ್ತು ಗುಂಜಿ ಹಳ್ಳಿಯಲ್ಲಿರುವ ನಿವಾಸಿಗಳಿಗೆ ಸೇರಿದ್ದು. ಇದಕ್ಕೆ ಭೂದಾಖಲೆಗಳಿವೆ’ ಎಂದು ಧಾರ್ಚುಲ ಉಪವಿಭಾಗದ ಮ್ಯಾಜಿಸ್ಟ್ರೇಟ್‌ ಎ.ಕೆ.ಶುಕ್ಲಾ ತಿಳಿಸಿದರು.

‘ಕಾಲಾಪಾನಿ ಹಾಗೂ ನಭೀಧಂಗ್‌ನಲ್ಲಿರುವ 190 ಎಕರೆ ಜಾಗ ಗರ್ಬಿಯಾಂಗ್‌ನಲ್ಲಿನ ನಿವಾಸಿಗಳ ಹೆಸರಿನಲ್ಲಿ ನೋಂದಣಿಯಾಗಿದೆ. ಲಿಪುಲೇಖ್‌ ಪಾಸ್‌ನಲ್ಲಿರುವ ಭೂಮಿ ಗುಂಜಿ ಹಳ್ಳಿಯವರಿಗೆ ಸೇರಿದ್ದು’ ಎಂದು ಶುಕ್ಲಾ ತಿಳಿಸಿದರು. 1962ರಲ್ಲಿ ನಡೆದ ಯುದ್ಧಕ್ಕೂ ಮುನ್ನ ಕಾಲಾಪಾನಿಯಲ್ಲಿ ನಮ್ಮ ಪೂರ್ವಜನರು ಕೃಷಿ ಮಾಡುತ್ತಿದ್ದರು. ಯುದ್ಧದ ನಂತರ ಈ ಭಾಗದಲ್ಲಿ ಕೃಷಿ ಮತ್ತು ಭಾರತ ಮತ್ತು ಚೀನಾ ನಡುವೆ ಲಿಪುಲೇಖ್‌ ಪಾಸ್‌ ಮುಖಾಂತರ ನಡೆಯುತ್ತಿದ್ದ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿತು ಎಂದು ಗರ್ಬಿಯಾಂಗ್‌ ಹಳ್ಳಿಯ ಜನರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT