ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಶ್ಚರ್ಯ ರೈಗೆ ಕೊರೊನಾ ಸೋಂಕು ಇಲ್ಲ

ಬಚ್ಚನ್‌ ಕುಟುಂಬ ಕೋವಿಡ್‌ನಿಂದ ಬಚಾವ್ * ಜಯಾ ಬಚ್ಚನ್‌, ಆರಾಧ್ಯ ವರದಿ ನೆಗೆಟಿವ್‌
Last Updated 13 ಜುಲೈ 2020, 6:03 IST
ಅಕ್ಷರ ಗಾತ್ರ

ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರ ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್‌ ಮತ್ತು ಮೊಮ್ಮಗಳು ಆರಾಧ್ಯ ಅವರ ಕೋವಿಡ್‌ –19 ಟೆಸ್ಟ್ ವರದಿ ನೆಗೆಟಿವ್‌ ಬಂದಿದೆ.

ಅಮಿತಾಭ್‌ ಮತ್ತು ಅಭಿಷೇಕ್‌ ಬಚ್ಚನ್‌ ಇಬ್ಬರಿಗೂ ಶನಿವಾರ ರಾತ್ರಿ ಕೊರೊನಾ ಸೋಂಕು ತಗುಲಿರುವುದು ದೃಢಪಡುತ್ತಲೇ, ಈ ಮೂವರು ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ನಿಂದ ಕೋವಿಡ್‌–19 ಪರೀಕ್ಷೆ ಮಾಡಿಸಿಕೊಂಡಿದ್ದರು.

‘ಸದ್ಯ ಮೂವರಿಗೂ 14 ದಿನಕಡ್ಡಾಯ ಹೋಂ ಕ್ವಾರಂಟೈನ್‌ ಸೂಚಿಸಲಾಗಿದೆ. ಕ್ವಾರಂಟೈನ್‌ ಅವಧಿ ಮುಗಿದ ನಂತರ ಮತ್ತೊಮ್ಮೆ ಕೋವಿಡ್‌–19 ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸಲಹೆ ಮಾಡಲಾಗಿದೆ’ ಎಂದು ಮುಂಬೈ ಮೇಯರ್‌ ಕಿಶೋರಿ ಪೆಡ್ನೇಕರ್‌ ತಿಳಿಸಿದ್ದಾರೆ. ಮೂವರಿಗೂ ಕೊರೊನಾ ಸೋಂಕು ಇಲ್ಲ ಎಂಬ ವಿಷಯವನ್ನು ನಾನಾವತಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಭಾನುವಾರ ಮುಂಜಾನೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳಿಗೆ ತಿಳಿಸಿದ್ದಾರೆ.

‘ಬಚ್ಚನ್‌ ಕುಟುಂಬದ ಸದಸ್ಯರ ಜತೆ ಸಹಾಯಕ ಸಿಬ್ಬಂದಿ ಕೂಡ ‌ಶನಿವಾರ ರಾತ್ರಿ ಪರೀಕ್ಷೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಮೂವರ ಕೋವಿಡ್‌–19 ಟೆಸ್ಟ್‌ ವರದಿ ಬಂದಿದೆ. ಜಯಾ ಬಚ್ಚನ್‌, ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಳಿಗೆ ಸೋಂಕು ಇಲ್ಲ. ಮೂವರು ಆರೋಗ್ಯವಾಗಿದ್ದಾರೆ’ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ತಿಳಿಸಿದ್ದಾರೆ.

ಅಡುಗೆ ಕೆಲಸದವರು, ಮನೆಗೆಲಸದವರು, ಭದ್ರತಾ ಸಿಬ್ಬಂದಿ ಮತ್ತು ಕಾರು ಚಾಲಕರ ಕೋವಿಡ್‌–19 ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಸಂಜೆಯ ಒಳಗಾಗಿ ಎಲ್ಲರ ವರದಿ ಕೈಸೇರುವ ನಿರೀಕ್ಷೆ ಇದೆ.ಅಮಿತಾಭ್‌ ಮತ್ತು ಅಭಿಷೇಕ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಹೆಲ್ತ್‌ ಬುಲಿಟಿನ್‌ ತಿಳಿಸಿದೆ.

ಬಚ್ಚನ್‌ ಮನೆಕಂಟೇನ್ಮೆಂಟ್‌ ವಲಯ

ಪಾಲಿಕೆಯ ಆರೋಗ್ಯ ಮತ್ತು ನೈರ್ಮಲ್ಯ ಸಿಬ್ಬಂದಿ ಭಾನುವಾರ ಮುಂಜಾನೆ ಅಮಿತಾಭ್ ಬಚ್ಚನ್‌ ಅವರ ಮನೆಯನ್ನು ಸಾನಿಟೈಸ್‌ ಮಾಡಿದ್ದಾರೆ. ಈ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ಮನೆಯ ಸುತ್ತಲೂ ಮುಂಬೈ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ. ಬಚ್ಚನ್‌ ಮನೆಯಿಂದ ಯಾರೂ ಹೊರ ಬರುವಂತಿಲ್ಲ ಮತ್ತು ಒಳ ಹೋಗುವಂತಿಲ್ಲ ಎಂದು ಮೇಯರ್‌ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT