ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಒಂದೇ ಕಾರ್ಡ್: ಅಂಜುಮ್ ಪರ್ವೇಜ್

ಮೆಟ್ರೊ, ಬಿಎಂಟಿಸಿ, ಆಟೊ, ಟ್ಯಾಕ್ಸಿ ಸೇರಿ ನಗರ ಸಾರಿಗೆ ವ್ಯವಸ್ಥೆಯ ಪ್ರತಿಯೊಂದಕ್ಕೂ ಒಂದೇ ಕಾರ್ಡ್‌
Published 1 ಡಿಸೆಂಬರ್ 2023, 0:30 IST
Last Updated 1 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಸೇರಿ ರಾಜ್ಯದ ಆರೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಒಂದೇ ಮಾದರಿಯ ಕಾರ್ಡ್‌ ಪರಿಚಯಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಅದು ಜಾರಿಗೆ ಬರಲಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾ‍ಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಸಂಚಾರ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ ಅವರು ಈ ವಿಷಯ ತಿಳಿಸಿದರು.

‘ಇದರೊಂದಿಗೆ ಮೆಟ್ರೊ, ಬಿಎಂಟಿಸಿ, ಆಟೊ, ಟ್ಯಾಕ್ಸಿ ಸೇರಿದಂತೆ ನಗರ ಸಾರಿಗೆ ವ್ಯವಸ್ಥೆಯಲ್ಲಿನ ಪ್ರತಿಯೊಂದರಲ್ಲೂ ಒಂದೇ ಕಾರ್ಡ್‌ ಬಳಸಿ ಪ್ರಯಾಣಿಸಬಹುದಾದ ಕಾರ್ಡ್‌ ಪರಿಚಯಿಸುವ ಯೋಜನೆಯೂ ಇದೆ. ಇಂಥದ್ದೊಂದು ವ್ಯವಸ್ಥೆಯನ್ನು ಸಿದ್ಧಪಡಿಸುವ ಯುವ ತಂತ್ರಜ್ಞರ ಗುಂಪಿಗೆ ಸ್ವಾಗತವಿದೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಒಟ್ಟು 55 ಮೆಟ್ರೊ ನಿಲ್ದಾಣಗಳಿವೆ. ಇವುಗಳ ಸುತ್ತಲಿರುವ 2 ರಿಂದ 3 ಕಿ.ಮೀ ಪ್ರದೇಶವನ್ನು ಸಮಗ್ರವಾಗಿ ಬದಲಿಸುವ ನಿಟ್ಟಿನಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಇದರ ಭಾಗವಾಗಿ ನಗರದ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಆರು ಮೆಟ್ರೊ ನಿಲ್ದಾಣಗಳ ಸುತ್ತಲಿನ ಪ್ರದೇಶವನ್ನು ಹೀಗೆಯೇ ಬದಲಿಸಲಾಗುವುದು. ಜನರು ನಡೆದು ಅಥವಾ ಸೈಕಲ್‌ ಮೂಲಕ ನೇರವಾಗಿ ಮೆಟ್ರೊ ನಿಲ್ದಾಣ ತಲುಪುವಂತಹ ವಾತಾವರಣ ನಿರ್ಮಿಸಲಾಗುತ್ತದೆ’ ಎಂದರು.

‘ಮಹಾನಗರಗಳಲ್ಲಿನ ಸಂಚಾರ ಸಮಸ್ಯೆಗೆ ನಡಿಗೆ ಹಾಗೂ ಮೆಟ್ರೊ ರೈಲು ಸೌಲಭ್ಯವೇ ಶಾಶತ್ವ ಪರಿಹಾರ. ಉಳಿದ ಸಾರಿಗೆ ವ್ಯವಸ್ಥೆಗಳು ಅವುಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತವೆ. ಮುಂದಿನ 15 ವರ್ಷಗಳಿಗೆ ಬೆಂಗಳೂರಿಗೆ ಸಿಂಗಪುರ  ಮಾದರಿಯ ಸಾರಿಗೆ ವ್ಯವಸ್ಥೆ ಜಾರಿಗೆ ತರುವುದು ಅತ್ಯಗತ್ಯ’ ಎಂದರು.

ಭವಿಷ್ಯದಲ್ಲಿ ಚಾಲಕ ರಹಿತ ಮೆಟ್ರೊ‌: ‘ದೆಹಲಿ ಮೆಟ್ರೊ ಚಾಲಕ ರಹಿತ ರೈಲನ್ನು ಪರಿಚಯಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಮುಂದೆ ಖರೀದಿಸುವ ಎಲ್ಲಾ ಮೆಟ್ರೊ ರೈಲುಗಳು ಚಾಲಕ ರಹಿತ ವ್ಯವಸ್ಥೆಯನ್ನೇ ಹೊಂದಿರುತ್ತವೆ. ಹೀಗಾಗಿ ’ನಮ್ಮ ಮೆಟ್ರೊ’ ಕೂಡಾ ಇದನ್ನು ಅಳವಡಿಸುವಲ್ಲಿ ಸದಾ ಮುಂದಿರಲಿದೆ’ ಎಂದು ಅಂಜುಮ್ ಪರ್ವೇಜ್ ಹೇಳಿದರು.

‘ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಲ್ಲಿ ಸರ್ಕಾರದ ನೀತಿಗಳು ಸದಾ ಜನ ಸ್ನೇಹಿ ಅಭಿವೃದ್ಧಿಗೆ ಪೂರಕವಾಗಿರಬೇಕೆ ಹೊರತು ವಾಹನ ಸ್ನೇಹಿಯಾಗಿರಬಾರದು’ ಎಂದು ಪರ್ಪಲ್‌ ಮೊಬಿಲಿಟಿ ಸೊಲೂಷನ್ಸ್‌ನ ಸಿಎಂಡಿ ಪ್ರಸನ್ನ ಪಟವರ್ಧನ್ ಹೇಳಿದರು.

‘ಯಾವುದೇ ಮಹಾನಗರದಲ್ಲಿನ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿರುತ್ತವೆ. ಇದು ಜನರಿಗೆ ಸಮಸ್ಯೆ ಸೃಷ್ಟಿಸುವ ಜತೆಗೆ, ವ್ಯಕ್ತಿಯ ಕಾರ್ಯಕ್ಷಮತೆಯನ್ನೇ ಕುಗ್ಗಿಸುತ್ತವೆ. ವೈಯಕ್ತಿಕ ಆರೋಗ್ಯದ ಜತೆಗೆ ಕೌಟುಂಬಿಕ ಆರೋಗ್ಯವೂ ಹದಗೆಡುತ್ತದೆ. ಇವೆಲ್ಲದಕ್ಕೂ ಸಾರ್ವಜನಿಕ ಸಾರಿಗೆಯೇ ಪರಿಹಾರ. ಆದರೆ, ಇದನ್ನು ಎಲ್ಲರೂ ಮುಕ್ತವಾಗಿ ಬಳಸಿಕೊಳ್ಳುವಂತಹ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕಿದೆ‘ ಎಂದು ಅಭಿಪ್ರಾಯಪಟ್ಟರು. ಟಿ.ವಿ. ಪತ್ರಕರ್ತೆ ರಿತು ಸಿಂಗ್ ಸಂವಾದ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT