ಬೆಂಗಳೂರು: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಸ್ಯಾಮ್‌ಸಂಗ್, ಪ್ರೀಮಿಯಂ ಎಸ್ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಸ್ಯಾಮ್‌ಸಂಗ್, 2023ರ ಹೊಸ ಆವೃತ್ತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಫೆಬ್ರುವರಿ 1ರಂದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್‌ಡ್ ಈವೆಂಟ್ ನಡೆಯಲಿದೆ.
ಹೊಸ ಎಸ್23 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸುವುದಕ್ಕೂ ಮೊದಲೇ, ಭಾರತದಲ್ಲೂ ಗ್ರಾಹಕರು ಎಸ್23 ವಿವಿಧ ಮಾದರಿಗಳನ್ನು ಪ್ರಿ ಬುಕ್ ಮಾಡಬಹುದು.
ಆಸಕ್ತರು, ₹1,999 ದರ ಪಾವತಿಸಿ ಪ್ರಿ ಬುಕಿಂಗ್ ಮಾಡಬಹುದು. ಅವರಿಗೆ ₹5,000 ಮೌಲ್ಯದ ವಿಶೇಷ ಕೊಡುಗೆಗಳು ದೊರೆಯಲಿದೆ ಎಂದು ಕಂಪನಿ ಹೇಳಿದೆ.
ಪ್ರಿಬುಕ್ ಮಾಡಿದ ಗ್ರಾಹಕರು ಮಾರ್ಚ್ 31, 2023ರ ಮೊದಲು ಬಾಕಿ ಮೊತ್ತವನ್ನು ಪಾವತಿಸಿ, ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ಪ್ರತಿ ವರ್ಷ ಸ್ಯಾಮ್‌ಸಂಗ್, ಪ್ರೀಮಿಯಂ ಎಸ್ ಸರಣಿಯಲ್ಲಿ ನೂತನ ಮಾದರಿಗಳನ್ನು ಪರಿಚಯಿಸುತ್ತದೆ. ಈ ಬಾರಿ, ಸ್ಯಾಮ್‌ಸಂಗ್ ಎಸ್23 ಅಲ್ಟ್ರಾ ಮಾದರಿಯಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಪರಿಚಯಿಸುವ ನಿರೀಕ್ಷೆಯಿದೆ.