ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಏರಿಕೆ: ಭಾರತದಲ್ಲಿ ಶಿಯೋಮಿ, ಆ್ಯಪಲ್, ರಿಯಲ್‌ಮಿ ಫೋನ್‌ಗಳ ಬೆಲೆ ಹೆಚ್ಚಳ

Last Updated 4 ಏಪ್ರಿಲ್ 2020, 10:50 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ಗಳ ಮೇಲಿನ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಏರಿಕೆ ಕಳೆದ ತಿಂಗಳು ಘೋಷಣೆಯಾಗಿದ್ದು, ಏಪ್ರಿಲ್‌ 1ರಿಂದಲೇ ಹೊಸ ತೆರಿಗೆ ಅನ್ವಯವಾಗಲಿದೆ. ಮೊಬೈಲ್‌ ಮೇಲಿನ ಜಿಎಸ್‌ಟಿ ಶೇ 12ರಿಂದ ಶೇ 18ಕ್ಕೆ ಏರಿಕೆ ಮಾಡಲಾಗಿದೆ.

ಜಾಗತಿಕವಾಗಿ ಕೋವಿಡ್‌–19 ವ್ಯಾಪಿಸುತ್ತಿರುವುದರಿಂದ ಅಮೆರಿಕನ್ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ ಇಳಿಮುಖವಾಗಿರುವುದು ಹಾಗೂ ಜಿಎಸ್‌ಟಿ ಹೆಚ್ಚಳದಿಂದಾಗಿ ಮೊಬೈಲ್‌ ಕಂಪನಿಗಳು ಬೆಲೆ ಹೆಚ್ಚಿಸುವ ಒತ್ತಡಕ್ಕೆ ಸಿಲುಕಿವೆ. ಶಿಯೋಮಿ, ಆ್ಯಪಲ್‌, ರಿಯಲ್‌ಮಿ ಹಾಗೂ ಇತರೆ ಮೊಬೈಲ್‌ ತಯಾರಿಕಾ ಕಂಪನಿಗಳು ಭಾರತದಲ್ಲಿ ತಮ್ಮ ಬ್ರ್ಯಾಂಡ್‌ಗಳ ಮೊಬೈಲ್‌ಗಳ ಬೆಲೆ ಹೆಚ್ಚಿಸುತ್ತಿರುವುದಾಗಿ ಘೋಷಿಸಿವೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಮೊಬೈಲ್‌ ತಯಾರಿಕೆ, ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ಭಾಗಗಳಿಂದ ಮೊಬೈಲ್‌ ತಯಾರಿಕೆಗೆ ಅಗತ್ಯವಿರುವ ಬಿಡಿ ಭಾಗಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದೇಶಿ ವಿನಿಮಯದಲ್ಲೂ ತೀವ್ರ ಏರಿಳಿತ ಉಂಟಾಗಿದೆ ಹಾಗೂ ಆರ್ಥಿಕ ಹಿಂಜರಿತ ವಾತಾವರಣ ಸೃಷ್ಟಿಯಾಗಿರುವುದಿಂದ ಜಗತ್ತಿನ ಬಹುತೇಕ ಮೊಬೈಲ್‌ ಕಂಪನಿಗಳು ದರ ಹೆಚ್ಚಿಸುವ ನಿರ್ಧಾರಕ್ಕೆ ಮುಂದಾಗಿವೆ ಎಂದು ರಿಸರ್ಚ್ ಕೌಂಟರ್‌ಪಾಯಿಂಟ್‌ನ ಉಪಾಧ್ಯಕ್ಷ ನೀಲ್‌ ಶಾ ತಿಳಿಸಿದ್ದಾರೆ.

'ಮೊಬೈಲ್‌ ಫೋನ್‌ಗಳ ಮೇಲಿನ ಜಿಎಸ್‌ಟಿ ಶೇ 12ರಿಂದ ಶೇ 18ಕ್ಕೆ ಏರಿಕೆಯಾಗಿದೆ. ಶಿಯೋಮಿ ನಿಯಮಾವಳಿಗಳ ಪ್ರಕಾರ ನಮ್ಮ ಹಾರ್ಡ್‌ವೇರ್‌ ಪ್ರಾಡಕ್ಟ್‌ಗಳ ಮೇಲೆ ಶೇ 5ಕ್ಕಿಂತ ಕಡಿಮೆ ಲಾಭಾಂಶ ಇಟ್ಟು ಕೊಂಡ, ನಾವು ನಮ್ಮ ತಯಾರಿಕೆಗಳ ಮೇಲಿನ ದರ ಹೆಚ್ಚಳ ಮಾಡುತ್ತಿದ್ದೇವೆ. ತಕ್ಷಣದಿಂದಲೇ ಹೊಸ ದರ ಅನ್ವಯವಾಗಲಿವೆ' ಎಂದು ಶಿಯೋಮಿ ಇಂಡಿಯಾದ ಮುಖ್ಯಸ್ಥ ಮನು ಕುಮಾರ್‌ ಜೈನ್‌ ಟ್ವೀಟಿಸಿದ್ದಾರೆ.

ಶಿಯೋಮಿ ಎಂಐ ಮತ್ತು ರೆಡ್‌ಮಿ ಸರಣಿಯ ಮೊಬೈಲ್‌ಗಳ ಹೊಸ ದರ ಎಂಐ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪೊಕೊ ಸಹ ತನ್ನ ಮೊಬೈಲ್‌ ಮಾದರಿಗಳ ಬೆಲೆಯನ್ನು ₹1,000ದ ವರೆಗೂ ಹೆಚ್ಚಿಸಿದೆ. ರಿಯಲ್‌ಮಿ ಸಹ ಬೆಲೆ ಏರಿಕೆ ಮಾಡಿದ್ದು, 2018ರಿಂದ ಇದೇ ಮೊದಲ ಬಾರಿಗೆ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿದೆ.

ಅಮೆರಿಕದ ಪ್ರೀಮಿಯಮ್‌ ಮೊಬೈಲ್‌ ಫೋನ್‌ ತಯಾರಿಕಾ ಕಂಪನಿ ಆ್ಯಪಲ್‌ ಸಹ ಭಾರತದಲ್ಲಿ ಐಫೋನ್‌ಗಳ ಮೇಲಿನ ಬೆಲೆಯನ್ನು ಹೆಚ್ಚಳ ಮಾಡಿದೆ. ಈ ಹಿಂದೆ ₹1,11,200 ಇದ್ದ ಐಫೋನ್‌ 11 ಪ್ರೊ ಮ್ಯಾಕ್ಸ್‌ (64 ಜಿಬಿ) ಬೆಲೆ ₹1,17,100 ನಿಗದಿಯಾಗಿದೆ. ಐಫೋನ್‌ 11 ಪ್ರೊ (64 ಜಿಬಿ) ₹1,06,600 ಆಗಿದೆ ಹಾಗೂ ಐಫೋನ್‌ 11 ಬೆಲೆ ₹68,300 ನಿಗದಿಯಾಗಿದೆ. ₹29,900 ಇದ್ದ ಐಫೋನ್‌ 7 (32 ಜಿಬಿ) ಬೆಲೆ ₹31,500ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT