ಭಾನುವಾರ, ಜೂನ್ 26, 2022
28 °C

ತಾಯಂದಿರ ದಿನ ಅಮ್ಮನಿಗೊಂದು ಗ್ಯಾಜೆಟ್ ಗಿಫ್ಟ್

ಕಿರಣ್ ಐ.ಜಿ. Updated:

ಅಕ್ಷರ ಗಾತ್ರ : | |

ಸ್ಮಾರ್ಟ್ ಬಾಟಲ್ ವಾರ್ಮರ್, ಹೀಟಿಂಗ್ ಮಗ್ – ಸಾಂದರ್ಭಿಕ ಚಿತ್ರ

ಮೇ 9 ತಾಯಂದಿರ ದಿನ.. ತಾಯಿಗೆ ವಿಶೇಷವಾದ ಗೌರವ ಅರ್ಪಿಸಲು ಈ ದಿನವನ್ನು ಮೀಸಲಿರಿಸಲಾಗುತ್ತದೆ. ನೀವು ತಾಯಿಗೆ ಅಥವಾ ಇತ್ತೀಚೆಗಷ್ಟೇ ಅಮ್ಮನಾಗಿರುವ, ಇಲ್ಲವೇ ಶೀಘ್ರದಲ್ಲಿ ತಾಯಿಯಾಗಲಿರುವವರಿಗೆ ಏನಾದರೂ ಉಡುಗೊರೆ ಕೊಡುವ ಮೂಲಕ ಈ ದಿನವನ್ನು ಸ್ಮರಣೀಯವಾಗಿಸಬಹುದು.

ಇಂದು ವಿಶೇಷ ದಿನಗಳಲ್ಲಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಡುವುದು ಸಹಜವಾಗಿದೆ. ಅದರಲ್ಲೂ ಈಗ ಮನೆಯಲ್ಲಿಯೇ ಇರಬೇಕಾಗಿದೆ. ಹೀಗಾಗಿ ತಾಯಿ ಮನೆ, ಮಕ್ಕಳು ಮತ್ತು ಕಚೇರಿ ಎಂದು ಹಲವು ಪಾತ್ರಗಳನ್ನು ಏಕಕಾಲಕ್ಕೆ ನಿರ್ವಹಿಸುತ್ತಾಳೆ. ಅದಕ್ಕೆ ಪೂರಕವಾಗಿ, ಸಹಾಯಕವಾಗಿ ಕೆಲವೊಂದು ಗ್ಯಾಜೆಟ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಒದಗಿಸುವ ಮೂಲಕ ಅವರ ಕೆಲಸವನ್ನು ಸುಲಭವಾಗಿಸಬಹುದು. ಅಲ್ಲದೆ, ಮಾನಸಿಕ ಮತ್ತು ದೈಹಿಕ ಒತ್ತಡ ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗುತ್ತದೆ.

ಜತೆಗೆ ಮಗುವಿನ ಪಾಲನೆಯ ಸಂದರ್ಭದಲ್ಲೂ ಗ್ಯಾಜೆಟ್‌ಗಳ ನೆರವು ಪಡೆಯುವುದರಿಂದ, ತಕ್ಕಮಟ್ಟಿಗೆ ಶ್ರಮ ಕಡಿಮೆ ಮಾಡಲು ಸಾಧ್ಯವಿದೆ. ಅಂತಹ ಕೆಲವೊಂದು ಉಪಕರಣಗಳ ವಿವರ ಇಲ್ಲಿದೆ.

ನೈಟ್ ಲ್ಯಾಂಪ್

ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದಾದ ಈ ಸಾಫ್ಟ್ ಲೈಟ್, ರಾತ್ರಿಯ ವೇಳೆ ಮಗುವಿಗೆ ಹಾಲುಣಿಸಲು, ಡೈಪರ್ ಬದಲಾಯಿಸಲು ನೆರವಾಗುತ್ತದೆ. ಜತೆಗೆ ಮಗುವಿನ ನಿದ್ರೆಗೆ ಪೂರಕವಾದ ಶಬ್ದವನ್ನು ಕೂಡ ಇದು ಹೊರಡಿಸುತ್ತದೆ. ಅಲ್ಲದೆ, ವಿವಿಧ ಬಣ್ಣಗಳ ಸಂಯೋಜನೆ, ಬೆಳಕನ್ನು ಹೊಂದಾಣಿಕೆ ಮಾಡುವುದು, ಅಲೆಕ್ಸಾ ಮೂಲಕ ವಾಯ್ಸ್ ಕಂಟ್ರೋಲ್ ಇದರ ವಿಶೇಷತೆಯಾಗಿದೆ. ಅದರಲ್ಲೇ ಗಡಿಯಾರ, ಬ್ಯಾಟರಿ ಮೀಟರ್ ಸಹಿತ ಹಲವು ಫೀಚರ್‌ಗಳಿವೆ.

ಬೇಬಿ ಮಾನಿಟರ್ ಮತ್ತು ಸ್ಮಾರ್ಟ್ ಸೆನ್ಸರ್

ಮನೆಯಲ್ಲಿ ಸೀಮಿತ ಸಂಖ್ಯೆಯ ಸದಸ್ಯರು ಇರುವಾಗ, ಮಗು ಇದ್ದರೆ ಅದನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಾದರೆ, ಆ ಸಂದರ್ಭದಲ್ಲಿ ಬೇಬಿ ಮಾನಿಟರ್ ನೆರವಾಗುತ್ತದೆ. ಜತೆಗೆ ಇದರಲ್ಲಿ ಕ್ಯಾಮೆರಾ, ಲೈವ್ ಸ್ಟ್ರೀಮ್ ಇರುವುದರಿಂದ ಮತ್ತು ಸೆನ್ಸರ್ ಸಹಿತ ಮಗುವಿನ ಚಲನವಲನ ಗಮನಿಸಿ ನಿಮಗೆ ಅಲರ್ಟ್ ಮಾಡುತ್ತದೆ. ಉಳಿದಂತೆ ಆಡಿಯೊ ಫೀಚರ್ ಇದ್ದು, ಮಗುವಿನ ಧ್ವನಿ ಕೇಳಿಸಿಕೊಳ್ಳುವುದು ಮತ್ತು ನಿಮ್ಮ ಧ್ವನಿಯ ಕಮಾಂಡ್ ಗುರುತಿಸಿ, ಅದಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ. ವೈಫೈ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಿ, ಬೇಬಿ ಮಾನಿಟರ್ ನಿಯಂತ್ರಿಸಬಹುದು.

ಸ್ಮಾರ್ಟ್ ಸ್ಪೀಕರ್

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಗೆಯ ಸ್ಮಾರ್ಟ್ ಸ್ಪೀಕರ್ ಹಲವು ರೀತಿಯಲ್ಲಿ ನಿಮಗೆ ನೆರವಾಗುತ್ತದೆ. ಮಗುವಿನ ಪಾಲನೆಯಲ್ಲಿ ತೊಡಗಿರುವ ತಾಯಿ, ಹತ್ತು ಹಲವು ಕೆಲಸ ನಿರ್ವಹಿಸುವಾಗ ಸಹಜವಾಗಿ ಅವರಿಗೆ ಸಹಾಯ ಬೇಕಾಗುತ್ತದೆ. ಆದರೆ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇದ್ದು, ಗಂಡ ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದರೆ, ಅಂತಹ ಸಮಯದಲ್ಲಿ ಸ್ಮಾರ್ಟ್ ಸ್ಪೀಕರ್ ನೆರವಿನಿಂದ ತಾಯಿ ರಿಮೈಂಡರ್ ಸೆಟ್ ಮಾಡಿಕೊಳ್ಳುವುದು, ನಿಗದಿತ ಸಮಯಕ್ಕೆ ಮಗುವಿನ ಚಾಕರಿ ಮಾಡುವ ಕುರಿತಂತೆ ಸ್ಮಾರ್ಟ್ ಸ್ಪೀಕರ್‌ನಲ್ಲಿ ರಿಮೈಂಡರ್ ಅಳವಡಿಸಿದರೆ, ಆ ಸಮಯಕ್ಕೆ ಸ್ಪೀಕರ್ ನೆನಪಿಸುತ್ತದೆ. ಮಗುವಿಗೆ ಔಷಧ ಕುಡಿಸುವುದು ಇರಬಹುದು, ಇಲ್ಲವೆ ಅಡುಗೆ ಕೋಣೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ಇರಿಸಿರುವ ಆಹಾರವನ್ನು ನಿಗದಿತ ಅವಧಿಗೆ ಆಫ್ ಮಾಡಲು ನೆನಪಿಸುವುದು ಸಹಿತ ವಿವಿಧ ಕೆಲಸಕ್ಕೆ ಸ್ಮಾರ್ಟ್ ಸ್ಪೀಕರ್ ಅನುಕೂಲ. ಅಲ್ಲದೆ, ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಮನೆಯಲ್ಲಿ ಅಳವಡಿಸಿ, ಸ್ಮಾರ್ಟ್ ಸ್ಪೀಕರ್‌ಗೆ ಲಿಂಕ್ ಮಾಡಿದ್ದರೆ, ತಾಯಿಯಾದವಳು ಕುಳಿತಲ್ಲಿಂದ ಎದ್ದು ಹೋಗದೆಯೇ ವಾಯ್ಸ್ ಕಮಾಂಡ್ ಮೂಲಕ ಅಂತಹ ಉಪಕರಣಗಳನ್ನು ಸುಲಭದಲ್ಲಿ ನಿಯಂತ್ರಿಸಬಹುದು.

ಸ್ಮಾರ್ಟ್ ಬಾಟಲ್ ವಾರ್ಮರ್, ಹೀಟಿಂಗ್ ಮಗ್

ಮಗುವಿಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಬಿಸಿಯಾಗಿಯೇ ಕೊಡಬೇಕಾಗುತ್ತದೆ. ಜತೆಗೆ ತಾಯಿಯಾದವಳು ಕೂಡ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಬಿಸಿ ಆಹಾರ ಸೇವನೆ ಉತ್ತಮ. ಹೀಗಾಗಿ ಪದೇ ಪದೇ ಆಹಾರ ತಯಾರಿಸಿ ಬಿಸಿ ಮಾಡಿಕೊಳ್ಳುವುದು ಕಷ್ಟವಾದರೆ, ಅಂತಹ ಸಂದರ್ಭದಲ್ಲಿ ಸ್ಮಾರ್ಟ್ ಬೇಬಿ ಬಾಟರ್ ವಾರ್ಮರ್, ಹೀಟಿಂಗ್ ಮಗ್‌ನಂತಹ ಸ್ಮಾರ್ಟ್ ಗ್ಯಾಜೆಟ್ ಬಳಸಿದರೆ, ಅದನ್ನು ಸ್ಮಾರ್ಟ್‌ಫೋನ್ ಮೂಲಕವೇ ನಿಯಂತ್ರಿಸಬಹುದು. ಅಲ್ಲದೆ, ಆಗಾಗ ಅಡುಗೆ ಕೋಣೆಗೆ ಕಾಲಿಡುವ ಪ್ರಮೇಯವೂ ತಪ್ಪುತ್ತದೆ. ಇಂತಹ ಹತ್ತು ಹಲವು ಗ್ಯಾಜೆಟ್‌ಗಳು ತಾಯಿಯ ಕೆಲಸವನ್ನು ಕಡಿಮೆ ಮಾಡುವುದಲ್ಲದೆ, ಸ್ಮಾರ್ಟ್ ಕೂಡ ಆಗಿಸುತ್ತದೆ. ಇದರಿಂದ ಹೆಚ್ಚಿನ ದೈಹಿಕ, ಮಾನಸಿಕ ಒತ್ತಡ ನಿವಾರಣೆಗೆ ನೆರವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು