ಬುಧವಾರ, ಸೆಪ್ಟೆಂಬರ್ 18, 2019
25 °C

ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್ ನಾಳೆ ಮಾರುಕಟ್ಟೆಗೆ

Published:
Updated:
Prajavani

ಸೋಲ್: ಸ್ಯಾಮ್ಸಂಗ್‌ ಕಂಪನಿಯ ಬಹುನಿರೀಕ್ಷಿತ ಸ್ಯಾಮ್ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಸ್ಮಾರ್ಟ್‌ಫೋನ್‌ ಶುಕ್ರವಾರ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಭಾರತದ ಮಾರುಕಟ್ಟೆಗೆ ಬಿಡುಗಡೆ ಆಗುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸ್ಮಾರ್ಟ್‌ಫೋನ್‌ ಮಡಚಿದಾಗ ಪರದೆ ಗಾತ್ರ 4.6 ಇಂಚು ಇದ್ದು, ಬಿಡಿಸಿದಾಗ 7.3 ಇಂಚಿನ ಟ್ಯಾಬ್ಲೆಟ್‌ ಗಾತ್ರಕ್ಕೆ ಹಿಗ್ಗುತ್ತದೆ. ಬೆಲೆ 1,980 ಡಾಲರ್‌ (₹ 1,40,580) ಇದೆ.

ಸ್ಯಾಮ್ಸಂಗ್ ಕಂಪನಿಯ ಪ್ರತಿಷ್ಠೆಯ ಕೂಸು ಎಂದೇ ಹೇಳಬಹುದಾದ ಗ್ಯಾಲಕ್ಸಿ ಫೋಲ್ಡ್ ಫೋನ್ ಏಪ್ರಿಲ್‌ 25ರಂದೇ ಮಾರುಕಟ್ಟೆ ಪ್ರವೇಶಿಸಬೇಕಿತ್ತು. ಕೆಲವು ಪತ್ರಕರ್ತರಿಗೆ ರಿವ್ಯೂಗೆಂದು ನೀಡಿದ್ದ ಹ್ಯಾಂಡ್‌ಸೆಟ್‌ನ ಡಿಸ್‌ಪ್ಲೇನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ಕಾರಣಕ್ಕಾಗಿ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಇದೀಗ ಕಂಪನಿಯು ಗುರುವಾರ ಫೋನ್‌ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದ್ದು, ದಕ್ಷಿಣ ಕೊರಿಯಾ, ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್‌ ಒಳಗೊಂಡು ಆಯ್ದ ಕೆಲವು ದೇಶಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಚೀನಾದ ಸ್ಮಾರ್ಟ್‌ಫೋನ್‌ಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಕಂಪನಿಯು ತನ್ನ ಫೋಲ್ಡಿಂಗ್‌ ಫೋನ್‌ನಿಂದ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಉತ್ತಮ ಮಾರಾಟ ಪ್ರಗತಿ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಖರೀದಿಸಿದ ಒಂದು ವರ್ಷದ ಒಳಗೆ ಸ್ಕ್ರೀನ್‌ ರಿಪೇರಿ ಮಾಡಬೇಕಾದರೆ ಅದರ ಶೇ 70ರಷ್ಟು ವೆಚ್ಚವನ್ನು ತಾನೇ ಭರಿಸುವುದಾಗಿಯೂ ಹೇಳಿಕೊಂಡಿದೆ.

ಸಮಸ್ಯೆ ನಿವಾರಣೆಯಾಗಿದೆ: ಫೋಲ್ಡ್ ಫೋನ್‌ನಲ್ಲಿ ಕಂಡುಬಂದಿದ್ದ ಸಮಸ್ಯೆಗಳೆಲ್ಲವನ್ನೂ ನಿವಾರಿಸಲಾಗಿದೆ. 1,980 ಡಾಲರ್‌ನ ಸ್ಮಾರ್ಟ್‌ಫೋನ್‌ ಸಿದ್ಧವಾಗಿದೆ ಎಂದು ಕಂಪನಿ ಈಚೆಗಷ್ಟೇ ಹೇಳಿಕೊಂಡಿತ್ತು.

ಏನಾಗಿತ್ತು: ಫೋನ್ ಪರದೆಗೆ ಪ್ರೊಟೆಕ್ಟಿವ್ ಲೇಯರ್ ಒಂದನ್ನು ಅಳವಡಿಸಲಾಗಿದೆ. ಆದರೆ, ಫೋನ್ ಬಳಸಲು ಆರಂಭಿಸುತ್ತಿದ್ದಂತೆಯೇ ಪರದೆಯ ಕೆಳ ಭಾಗದಲ್ಲಿ ಅದು ಕಿತ್ತು ಬರುತ್ತಿದೆ. ಅಂದರೆ ಸ್ಕ್ರೀನ್ ಗಾರ್ಡ್ ಹಾಕಿಸಿದ ಬಳಿಕ ಹೆಚ್ಚು ದಿನ ಕಳೆದಂತೆ ಅದು ಒಂದು ಬದಿಯಿಂದ ಕಿತ್ತುಕೊಂಡು ಬರುತ್ತದಲ್ಲಾ ಹಾಗೆ. ಅದರಲ್ಲಿಯೂ ಫೋನ್ ಬಿಡಿಸಿದಾಗ ಎರಡೂ ಪರದೆಗಳನ್ನು ಮಡಚುವ ಜಾಗದಿಂದ ಹೀಗೆ ಆ ಪ್ರೊಟೆಕ್ಟಿವ್ ಲೇಯರ್ ಸ್ವಲ್ಪವೇ ಕಿತ್ತು ಬರುವಂತೆ ಆಗಿತ್ತು. ಅದನ್ನು ತೆಗೆದಿದ್ದರಿಂದ ಪರದೆಗೆ ಹಾನಿಯಾಗಿತ್ತು. ‘ಎರಡು ಪರದೆಗಳು ಸೇರಿಸಿರುವ ಅಥವಾ ಎರಡು ಪರದೆಗಳು ಮಡಚುವ ಜಾಗದಲ್ಲಿ ಸಮಸ್ಯೆ ಕಂಡುಬಂದಿತ್ತು.

ಏನೆಲ್ಲಾ ಬದಲಾವಣೆ ಆಗಿದೆ

* ಫೋಲ್ಡಿಂಗ್‌ ಎಕ್ಸ್‌ಪೀರಿಯನ್ಸ್‌ಗೆ ಯಾವುದೇ ಧಕ್ಕೆ ಉಂಟಾಗದಂತೆ ಹ್ಯಾಂಡ್‌ಸೆಟ್‌ಗೆ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.

* ಪ್ರೊಟೆಕ್ಷನ್‌ ಕ್ಯಾಪ್‌ ಅಳವಡಿಸುವ ಮೂಲಕ ಫೋಲ್ಡಿಂಗ್‌ ಜಾಗವನ್ನು ಬಲಪಡಿಸಲಾಗಿದೆ.

* ಬಾಗುವ ಡಿಸ್‌ಪ್ಲೇ ಕೆಳಭಾಗಕ್ಕೆ ಹೆಚ್ಚುವರಿಯಾಗಿ ಲೋಹದ ಪದರ ಅಳವಡಿಸಲಾಗಿದೆ.

* ಫೋನ್‌ನ ದೇಹ ಮತ್ತು ತಿರುಗಣಿ ಮಧ್ಯೆ ಇದ್ದ ಅಂತರವನ್ನು ಕಡಿಮೆ ಮಾಡಲಾಗಿದೆ 

Post Comments (+)