ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IIT-M: ಅಂಗವಿಕಲರಿಗೆ ನಿಂತು ಕೆಲಸ ಮಾಡಲು ಅನುಕೂಲವಾಗುವ ಗಾಲಿ ಕುರ್ಚಿ ಅಭಿವೃದ್ಧಿ

Published 20 ಮಾರ್ಚ್ 2024, 16:40 IST
Last Updated 20 ಮಾರ್ಚ್ 2024, 16:40 IST
ಅಕ್ಷರ ಗಾತ್ರ

ಚೆನ್ನೈ: ಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ (IIT-M)ನ ತಂತ್ರಜ್ಞರು ಅಂಗವಿಕಲರಿಗಾಗಿ ನೂತನ ಮಾದರಿಯ ಗಾಲಿಕುರ್ಚಿಯನ್ನು ಅಭಿವೃದ್ಧಿಪಡಿಸಿದ್ದು, ಇದು ನಿಂತು ಕೆಲಸ ಮಾಡಲು ನೆರವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಚಾಲಿತ ಗಾಲಿ ಕುರ್ಚಿ ಇದಾಗಿದ್ದು, ಇದು ₹ 89,990ಕ್ಕೆ ಲಭ್ಯ ಎಂದು ಸಂಸ್ಥೆ ಹೇಳಿದೆ.

ನಡೆಯಲು ಸಾಧ್ಯವಾಗದವರು ಈ ಗಾಲಿಕುರ್ಚಿ ಬಳಸಿ ಓಡಾಡುವುದು ಮಾತ್ರವಲ್ಲ, ನಿಂತು ಕೆಲಸ ಮಾಡಲೂ ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಕೂತು ಮನೆಯಲ್ಲಿ ಓಡಾಡಲು ನೆರವಾಗುವುದರ ಜತೆಗೆ, ಕಪಾಟಿನಲ್ಲಿರುವ ಪುಸ್ತಕವನ್ನು ನಿಂತು ತೆಗೆದುಕೊಳ್ಳಬಹುದು, ಹೊಟೇಲು ಕೌಂಟರ್‌ನಲ್ಲಿ ನಿಂತು ಕಾಫಿ ಸವಿಯಬಹುದು ಅಥವಾ ಸ್ನೇಹಿತರೊಂದಿಗೆ ನಿಂತುಕೊಂಡೇ ಮಾತನಾಡುವಂತ ಸಾಧನ ಇದಾಗಿದೆ.

ಈ ಯೋಜನೆಯನ್ನು ಟಿಟಿಕೆ ಪುನರ್ವಸತಿ ಸಂಶೋಧನೆ ಹಾಗೂ ಉಪಕರಣ ಅಭಿವೃದ್ಧಿ ಕೇಂದ್ರವು ನಡೆಸಿದ್ದು, ಐಐಟಿ–ಎಂ ಮುಖ್ಯ ಪ್ರಧ್ಯಾಪಕಿ ಸುಜಾತಾ ಶ್ರೀನಿವಾಸನ್ ಹಾಗೂ ಅವರ ತಂಡ ಅಭಿವೃದ್ಧಿಪಡಿಸಿದೆ.

‘ಈ ಸಾಧನಕ್ಕೆ ಹಲವು ಪೇಟೆಂಟ್‌ಗಳನ್ನು ಪಡೆಯಲಾಗಿದೆ. ನಾಲ್ಕು ಸಂಶೋಧನಾ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಇಂಥದ್ದೊಂದು ಸಾಧನ ಅಂಗವಿಕಲರಿಗೆ ದೌರ್ಬಲ್ಯಗಳನ್ನು ಮೀರಿ, ಬದುಕಿನ ಸ್ವಾತಂತ್ರ್ಯ ನೀಡುವಲ್ಲಿ ನೆರವಾಗಿದೆ ಎಂಬುದೇ ಸಂತಸದ ವಿಷಯ’ ಎಂದು ಐಐಟಿ ಮದ್ರಾಸ್‌ನ ನಿರ್ದೇಶಕ ಪ್ರೊ. ವಿ.ಕಾಮಕೋಟಿ ತಿಳಿಸಿದ್ದಾರೆ.

‘ಇಂಥ ಸೌಕರ್ಯಗಳಿರುವ ಗಾಲಿ ಕುರ್ಚಿ ಆಮದು ಮಾಡಿಕೊಂಡಲ್ಲಿ ಅದರ ಬೆಲೆ ದುಬಾರಿಯಾಗಲಿದೆ. ಹೀಗಾಗಿ ಕೈಗೆಟಕುವ ಬೆಲೆಗೆ ಇಂಥದ್ದೊಂದು ಕುರ್ಚಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಅದು ಸಫಲಗೊಂಡಿದೆ’ ಎಂದಿದ್ದಾರೆ.

ಗಾಲಿ ಕುರ್ಚಿಯ ಮೊದಲ ಬಳಕೆದಾರರಾದ ರಮ್ಯಾ ಅವರು ಪ್ರತಿಕ್ರಿಯಿಸಿ, ‘ವಿದ್ಯುತ್ ಚಾಲಿತ ಈ ಗಾಲಿ ಕುರ್ಚಿಯ ಬಳಕೆಯಿಂದಾಗಿ ಕೂತು ಸಂಚರಿಸುವುದರ ಜತೆಗೆ, ತಾಯಿಯೊಂದಿಗೆ ನಿಂತುಕೊಂಡು ಅಡುಗೆಗೆ ನೆರವಾಗುತ್ತಿದ್ದೇನೆ’ ಎಂದು ತಿಳಿಸಿದರು.

‘ಅಂಗವೈಕಲ್ಯದಿಂದಾಗಿ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬ ನೋವು ನನ್ನನ್ನು ಸದಾ ಕಾಡುತ್ತಿತ್ತು. ಆದರೆ ಈ ಕುರ್ಚಿಯ ಬಳಕೆಯಿಂದ ಅದೂ ಸಾಧ್ಯವಾಗಿದೆ. ಈಗ ನನಗೆ ಸಂತಸದ ಜತೆಗೆ, ಹೆಮ್ಮೆಯೂ ಆಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT