ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಸುರಕ್ಷತೆಗಿರಲಿ ಕಾಳಜಿ

Last Updated 31 ಮಾರ್ಚ್ 2021, 3:28 IST
ಅಕ್ಷರ ಗಾತ್ರ

ಇಂದು ಸ್ಮಾರ್ಟ್‌ಫೋನೇ ನಮ್ಮ ಸರ್ವಸ್ವ. ವೈಯಕ್ತಿಕ ಬಳಕೆಗಷ್ಟೇ ಅಲ್ಲದೆ, ನಿತ್ಯದ ವಹಿವಾಟಿಗೂ ಅದು ಅತ್ಯಗತ್ಯ. ಹೀಗಿರುವಾಗ ಅದರ ರಕ್ಷಣೆ ಮತ್ತು ಸುರಕ್ಷತೆಗೆ ಒಂದಷ್ಟು ಎಚ್ಚರಿಕೆಗಳು ಇರಲೇಬೇಕಲ್ಲವೇ?

ಕರೆ ಮಾಡಲು ಮತ್ತು ಟೆಕ್ಸ್ಟ್‌ ಮೆಸೇಜ್‌ ಕಳುಹಿಸಲಷ್ಟೇ ಸೀಮಿತವಾಗಿದ್ದ ಸೆಲ್‌ಫೋನ್‌ ಇಂದು ನಮ್ಮ ನಿತ್ಯಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅಲಾರ್ಮ್‌, ಫಿಟ್‌ನೆಸ್‌ ಟ್ರ್ಯಾಕರ್, ಕ್ಯಾಲ್ಕುಲೇಟರ್‌, ಕಂಪ್ಯೂಟರ್, ಲ್ಯಾಪ್‌ಟಾಪ್‌ ಹೀಗೆ ಇನ್ನೂ ಅನೇಕ ಸಾಧನಗಳ ಬಹುತೇಕ ಕೆಲಸಗಳನ್ನು ಸ್ಮಾರ್ಟ್‌ಫೋನ್‌ ಒಂದೇ ನಿರ್ವಹಿಸುತ್ತಿದೆ. ಹೀಗಾಗಿ, ಒಂದು ಹೊತ್ತಿನ ಊಟವನ್ನಾದರೂ ಬಿಡಬಹುದು, ಫೋನ್‌ ಬಿಟ್ಟು ಇರಲಾಗದು. ಒಂದರ್ಥದಲ್ಲಿ ಇದರಲ್ಲಿ ನಮ್ಮ ಸರ್ವಸ್ವವನ್ನೇ ಇಟ್ಟಿರುತ್ತೇವೆ. ಹೀಗಿರುವಾಗ ಇಂತಹ ಸ್ಮಾರ್ಟ್‌ಫೋನ್‌ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಬಗ್ಗೆಯೂ ಹೆಚ್ಚು ಗಮನ ವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯ ಇದ್ದೇ ಇದೆ.

ಸ್ಕ್ರೀನ್‌ ಲಾಕ್: ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಹಲವರು ಸ್ಕ್ರೀನ್‌ ಲಾಕ್‌ ಬಗ್ಗೆ ಹೆಚ್ಚು ಗಮನ ಕೊಡುವುದೇ ಇಲ್ಲ. ತಕ್ಷಣಕ್ಕೆ ಬಳಸಲು ಅನುಕೂಲ ಆಗಬೇಕು ಎನ್ನುವ ಏಕೈಕ ಕಾರಣಕ್ಕೆ ಕೆಲವರು ಪವರ್‌ ಬಟನ್‌ ಮುಟ್ಟಿದಾಕ್ಷಣ ಸ್ಕ್ರೀನ್‌ ತೆರೆಯುವಂತೆ ಇಟ್ಟುಕೊಂಡಿದ್ದರೆ, ಇನ್ನೂ ಕೆಲವರು ಸ್ವೈಪ್‌ ಆಯ್ಕೆ ಇಟ್ಟುಕೊಂಡಿರುತ್ತಾರೆ. ಇದರಿಂದ ಮೊಬೈಲ್‌ಗೆ ಸುರಕ್ಷತೆ ಸಿಗುವುದಿಲ್ಲ. ಇವುಗಳಿಗೆ ಬದಲಾಗಿ ಕಷ್ಟವಾದ ಪಾಸ್‌ವರ್ಡ್ ಅಥವಾ ಪ್ಯಾಟರ್ನ್‌ ಇಟ್ಟುಕೊಳ್ಳುವುದು ಸೂಕ್ತ. ಈಗಂತೂ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಫೇಸ್‌ಐಡಿ ಮತ್ತು ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಯ್ಕೆಗಳು ಇರುವುದರಿಂದ ಈ ಆಯ್ಕೆಗಳನ್ನು ಬಳಸಿದರೆ ತಕ್ಷಣಕ್ಕೆ ಯಾರೂ ನಮ್ಮ ಮೊಬೈಲ್‌ ದುರುಪಯೋಗಪಡಿಸಿಕೊಳ್ಳಲು ಆಗುವುದಿಲ್ಲ.

ಸಾಫ್ಟ್‌ವೇರ್‌ ಅಪ್‌ಡೇಟ್: ಸ್ಕ್ರೀನ್‌ ಲಾಕ್‌ ಮಾಡುವುದರಿಂದ ಬೇರೆಯವರು ನಮ್ಮ ಫೋನ್ ಬಳಸಲು ಆಗುವುದಿಲ್ಲ ಎನ್ನುವುದು ಸರಿ. ಆದರೆ ಹ್ಯಾಕರ್‌ಗಳಿಂದ ರಕ್ಷಣೆ ಪಡೆಯಲು ಇಷ್ಟು ಸಾಲುವುದಿಲ್ಲ. ಕಾರ್ಯಾಚರಣಾ ವ್ಯವಸ್ಥೆಯನ್ನು (ಒಎಸ್‌) ಆಗಾಗ್ಗೆ ಅಪ್‌ಡೇಟ್‌ ಮಾಡುತ್ತಿರಬೇಕು. ವರದಿಗಳ ಪ್ರಕಾರ, ಆಂಡ್ರಾಯ್ಡ್‌ ಫೋನ್‌ಗಳು ಹ್ಯಾಕಿಂಗ್‌ಗೆ ಒಳಗಾಗುವ ಪ್ರಮಾಣ ಹೆಚ್ಚು. ಹೀಗಾಗಿ ಒಎಸ್ ಅಪ್‌ಡೇಟ್‌ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಆದರೆ ಬಹಳಷ್ಟು ಜನರು ಒಎಸ್ ಆಟೊಮೆಟಿಕ್‌ ಅಪ್‌ಡೇಟ್‌ ಅನ್ನು ಆಫ್‌ ಮಾಡಿರುತ್ತಾರೆ. ಹೀಗೆ ಮಾಡುವುದರಿಂದ ಕಂಪನಿಯು ನೀಡುವ ಸಾಫ್ಟ್‌ವೇರ್‌ ಅಪ್‌ಡೇಟ್ ನೋಟಿಫಿಕೇಷನ್‌ ಬರುವುದೇ ಇಲ್ಲ. ಫೋನ್‌ಗೆ ಸುರಕ್ಷತೆ ಬೇಕು ಎಂದಾದರೆ ಆಟೊಮೆಟಿಕ್‌ ಅಪ್‌ಡೇಟ್‌ ಸದಾ ಆನ್‌ ಆಗಿರುವುದು ಒಳಿತು.

ವೈಯಕ್ತಿಕ ಲಾಗಿನ್‌ ಮತ್ತು ಪಾವತಿ ಮಾಹಿತಿಗಳನ್ನು ಸೇವ್ ಮಾಡದಿರಿ: ಬ್ರೌಸರ್ ಬಳಸುವಾಗ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಆಟೊ ಸೇವ್‌ ಆಗುವಂತೆ ಮಾಡಬೇಡಿ. ಲಾಗಿನ್‌ ಆಗುವ ಸಂದರ್ಭದಲ್ಲಿ ಪಾಸ್‌ವರ್ಡ್‌ ನೀಡಿದ ಬಳಿಕ ಅದರ ಕೆಳಗೆ Remember for next time ಎನ್ನುವಲ್ಲಿ ರೈಟ್‌ ಟಿಕ್‌ ಆಗಿರುತ್ತದೆ. ಅದನ್ನು ಅನ್‌ಟಿಕ್‌ ಮಾಡಿ. ಫೇಸ್‌ಬುಕ್‌ ಲಾಗಿನ್‌ ಆಗುವಾಗ ರಿಮೆಂಬರ್‌ ಮೈ ಪಾಸ್‌ವರ್ಡ್‌ ಎನ್ನುವ ಸೂಚನೆ ಬರುತ್ತದೆ. ಅದಕ್ಕೆ ಒಪ್ಪಿಗೆ ನೀಡಿದರೆ ಮುಂದೆಂದೂ ನೀವು ಫೇಸ್‌ಬುಕ್‌ ಬಳಸುವಾಗ ಪಾಸ್‌ವರ್ಡ್ ನೀಡುವ ಪ್ರಮೇಯವೇ ಬರುವುದಿಲ್ಲ. ಅದೇ ರೀತಿ ಆನ್‌ಲೈನ್‌ ಪೇಮೆಂಟ್ ಮಾಡುವಾಗಲೂ ನಮ್ಮ ಡೆಬಿಟ್‌ ಕಾರ್ಡ್‌ನ ಮಾಹಿತಿಗಳು ಸೇವ್‌ ಆಗುವಂತೆ ಮಾಡುತ್ತೇವೆ. ಫೋನ್‌ ಹ್ಯಾಕ್‌ ಆದರೆ, ಫೇಸ್‌ಬುಕ್‌ ಪಾಸ್‌ವರ್ಡ್‌, ಡೆಬಿಟ್‌ ಕಾರ್ಡ್‌ ಮಾಹಿತಿಗಳು ಹ್ಯಾಕರ್‌ ಕೈಗೆ ಸುಲಭವಾಗಿ ಸಿಗುತ್ತವೆ.

ಅಧಿಕೃತ ಮೂಲ ಗಳಿಂದಲೇ ಆ್ಯಪ್‌ ಡೌನ್‌ಲೋಡ್‌: ಯಾವುದೇ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದಿದ್ದರೂ ಅಧಿಕೃತ ಮೂಲಗಳನ್ನೇ ಬಳಸಿ. ಆಂಡ್ರಾಯ್ಡ್ ಆಗಿದ್ದರೆ ಗೂಗಲ್‌ ಪ್ಲೇ ಸ್ಟೋರ್‌, ಆ್ಯಪಲ್‌ ಫೋನ್ ಆಗಿದ್ದರೆ ಐಒಎಸ್‌ ಬಳಸಿ. ಹೀಗೆ ಮಾಡುವುದರಿಂದ ಮಾಲ್‌ವೇರ್‌, ಫಿಶಿಂಗ್‌, ಹ್ಯಾಕಿಂಗ್‌ ಸಾಧ್ಯತೆಗಳು ಕಡಿಮೆ. ಹಣ ಪಾವತಿ ಅಥವಾ ವರ್ಗಾವಣೆಗೆ ಆದಷ್ಟೂ ಬ್ಯಾಂಕ್‌ಗಳು ನೀಡುವ ಆ್ಯಪ್‌ಗಳು, ಪೇಟಿಎಂ, ಗೂಗಲ್‌ ಪೇ, ಫೋನ್‌ ಪೇ ತರಹದ ಅಧಿಕೃತ ಆ್ಯಪ್‌ಗಳನ್ನೇ ಬಳಸಿ.

ಈ ಮೇಲೆ ಹೇಳಿದ ಎಲ್ಲವೂ ನಮಗೆ ಗೊತ್ತಿರುವುದೇ. ಆದರೆ, ಮರೆವು ಅಥವಾ ನಿರ್ಲಕ್ಷ್ಯದಿಂದ ಬಹಳಷ್ಟನ್ನುನಾವು ಅನುಸರಿಸುವುದೇ ಇಲ್ಲ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಆಗಬಾರದು ಅಲ್ವೇ?

ಸಾರ್ವಜನಿಕ ವೈ–ಫೈ ಬಗ್ಗೆ ಎಚ್ಚರ
ಸಾರ್ವಜನಿಕವಾಗಿ ಲಭ್ಯವಾಗುವ ವೈ–ಫೈ ಸೇವೆಗಳನ್ನು ಆದಷ್ಟೂ ಬಳಸದೇ ಇರುವುದೇ ಒಳಿತು. ಇಂತಹ ಕಡೆಗಳಲ್ಲಿ ಬಳಕೆದಾರರ ಮಾಹಿತಿಗೆ ಸುರಕ್ಷತೆಯ ಖಾತರಿ ಇರುವುದಿಲ್ಲ. ಮೊಬೈಲ್‌ನಲ್ಲಿ ಬ್ಯಾಂಕಿಂಗ್‌ ವಹಿವಾಟು ನಡೆಸುವಾಗ ಮೊಬೈಲ್‌ ಡೇಟಾ ಅಥವಾ ಮನೆಯಲ್ಲಿ ಇರುವ ವೈ–ಫೈ ಹಾಟ್‌ಸ್ಪಾಟ್‌ ಅನ್ನೇ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT