ಗುರುವಾರ , ನವೆಂಬರ್ 14, 2019
19 °C

Tecno Camon 12 Air: ₹10 ಸಾವಿರ ಒಳಗಿನ ವಿನೂತನ ಕ್ಯಾಮೆರಾ ಫೋನ್

Published:
Updated:
Tecno Camon 12 Air

ಹೊಸದಿಲ್ಲಿ: ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿ ಇದೀಗ ಬಜೆಟ್ ಸ್ಮಾರ್ಟ್ ಫೋನ್ ವಲಯದ ಸ್ಫರ್ಧೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಟೆಕ್‌ನೋ ಕ್ಯಾಮಾನ್ 12 ಏರ್ ಎಂಬ ಹೊಸದಾದ, ಡಾಟ್-ಇನ್ ಡಿಸ್‌ಪ್ಲೇ ಪರಿಕಲ್ಪನೆಯ ಅತ್ಯಾಧುನಿಕ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು, ಇದರ ಬೆಲೆ 10 ಸಾವಿರ ರೂ.ಗಿಂತಲೂ ಕಡಿಮೆ.

ಸ್ಕ್ರೀನ್ ಮೇಲಿನ ಎಡತುದಿಯಲ್ಲಿ ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದ್ದು, ಇದಕ್ಕೆ ಡಾಟ್-ಇನ್ ಡಿಸ್‌ಪ್ಲೇ ಅಂತ ಹೆಸರಿಸಲಾಗಿದೆ. ಕ್ಯಾಮೆರಾ ಕೇಂದ್ರಿತ ಫೋನ್‌ಗಳಲ್ಲಿ ಸ್ಕ್ರೀನ್ ಮೇಲೆ ನಾಚ್ ಎಂಬ, ಕ್ಯಾಮೆರಾ ಸೆನ್ಸರ್ ಅಳವಡಿಸುವ ಜಾಗ ಇದುವರೆಗೆ ಮಧ್ಯ ಮೇಲ್ಭಾಗದಲ್ಲಿರುತ್ತಿತ್ತು. ಇದೀಗ ಕ್ಯಾಮಾನ್ 12 ಏರ್‌ನಲ್ಲಿ ಇದು ಎಡ ಮೇಲ್ಭಾಗದಲ್ಲಿದೆ. ಇದರ ಬೆಲೆ ರೂ. 9999 ಮಾತ್ರ.

ಕಳೆದ ತಿಂಗಳು ಟೆಕ್‌ನೋ ಸ್ಪಾರ್ಕ್ ಗೋ, ಟೆಕ್‌ನೋ ಸ್ಪಾರ್ಕ್ 4 ಹಾಗೂ ಟೆಕ್‌ನೋ ಸ್ಪಾರ್ಕ್ ಏರ್ ಎಂಬ ಮೂರು ಫೋನ್‌ಗಳನ್ನು 5ರಿಂದ 9 ಸಾವಿರ ರೂ. ಒಳಗೆ ಬಿಡುಗಡೆ ಮಾಡುವ ಮೂಲಕ ಟೆಕ್‌ನೋ ಬ್ರ್ಯಾಂಡ್, ಅಗ್ಗದ ದರದ ಎಂಟ್ರಿ ಲೆವೆಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು.

ಸ್ಪಾರ್ಕ್ ಸರಣಿಯ ಫೋನ್‌ಗಳ ಮಾರಾಟದ ಭರಾಟೆಯಿಂದ ಉತ್ತೇಜನಗೊಂಡು, ದೀಪಾವಳಿಗಾಗಿ ಇದೀಗ ಕ್ಯಾಮಾನ್ 12 ಏರ್ ಅನ್ನು ಬಿಡುಗಡೆ ಮಾಡಲಾಗಿದೆ. 6.55 ಇಂಚಿನ ಡಾಟ್ ನಾಚ್ ಡಿಸ್‌ಪ್ಲೇ, 16MP+2MP+5MP ಸಾಮರ್ಥ್ಯದ ಮತ್ತು ಕ್ವಾಡ್ ಫ್ಲ್ಯಾಶ್ ಇರುವ ಎಐ ಗೂಗಲ್ ಲೆನ್ಸ್ ಅಂತರ್ನಿರ್ಮಿತವಾಗಿರುವ ತ್ರಿವಳಿ ಕ್ಯಾಮೆರಾ, ಹೀಲಿಯೊ ಪಿ22 ಶಕ್ತಿಶಾಲಿ ಒಕ್ಟಾ ಕೋರ್ ಪ್ರೊಸೆಸರ್, 5GB RAM ಹಾಗೂ 64 GB ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದೆ. 256 ಜಿಬಿ ವರೆಗೆ ವಿಸ್ತರಿಸಬಹುದು. 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಸೆನ್ಸರ್ ಇದೆ. ಈ ಹೊಸ ಫೋನ್ ಆಂಡ್ರಾಯ್ಡ್ 9 (ಪೈ) ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಚಾಲನೆಯಾಗುತ್ತಿದ್ದು, ಫೋಟೋಗ್ರಫಿ ಆಸಕ್ತಿ ಇರುವ ಯುವಕರನ್ನು ಆಕರ್ಷಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಾರುಕಟ್ಟೆಯ ಸಂವೇದನೆಗೆ ತಕ್ಕಂತೆ ನಾವು ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಎಂಟ್ರಿ ಹಾಗೂ ಬಜೆಟ್ ಲೆವೆಲ್ ವಿಭಾಗದಲ್ಲಿ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಮಾತ್ರ ಇರಬಹುದಾದ ವೈಶಿಷ್ಟ್ಯಗಳನ್ನು ಅಗ್ಗದ ದರದಲ್ಲಿ ಕೊಡಮಾಡುವ ಮೂಲಕ 10 ಸಾವಿರ ರೂ. ಒಳಗಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಛಾಪು ಬೀರಿದ್ದೇವೆ ಎಂದು ಟ್ರಾನ್ಸಿಯನ್ ಇಂಡಿಯಾ ಸಿಇಒ ಅರಿಜೀತ್ ತಲಪಾತ್ರ ಹೇಳಿದ್ದಾರೆ.

HD+ ಡಾಟ್ ಇನ್ ಡಿಸ್‌ಪ್ಲೇ, ಅಲ್ಟ್ರಾ ಥಿನ್ ಬೆಜೆಲ್ಸ್, 4000 mAh ಬ್ಯಾಟರಿ, ಓದುವ ಮೋಡ್, ನೇತ್ರ ರಕ್ಷಣಾ ವೈಶಿಷ್ಟ್ಯ, ಫಿಂಗರ್‌ಪ್ರಿಂಟ್ ಹಾಗೂ ಫೇಸ್ ಅನ್‌ಲಾಕ್ ವ್ಯವಸ್ಥೆ ಹೊಂದಿರುವ ಈ ಫೋನ್ ಕೇವಲ 172 ಗ್ರಾಂ ತೂಗುತ್ತದೆ. ಹಿಂಭಾಗದಲ್ಲಿ ಗ್ರೇಡಿಯಂಟ್ ಬಣ್ಣದ ಕವಚವಿದೆ. ಬೇ ಬ್ಲೂ ಮತ್ತು ಸ್ಟೆಲ್ಲಾರ್ ಪರ್ಪಲ್- ಹೀಗೆ ಎರಡು ಬಣ್ಣಗಳಲ್ಲಿ ಲಭ್ಯ. ಇದರಲ್ಲಿರುವ 4000 mAh ಬ್ಯಾಟರಿಯು ನಿರಂತರವಾಗಿ 12 ಗಂಟೆಗಳ ವೀಡಿಯೊ ಪ್ಲೇ ಮಾಡಲು, 8 ಗಂಟೆಗಳ ಗೇಮಿಂಗ್, 10 ಗಂಟೆಗಳ ವೆಬ್ ಬ್ರೌಸಿಂಗ್ ಹಾಗೂ 114 ಗಂಟೆಗಳ ಹಾಡು ಆಲಿಸುವಿಕೆಗೆ ನೆರವಾಗುತ್ತದೆ ಎಂದಿದೆ ಕಂಪನಿ.

ಪ್ರತಿಕ್ರಿಯಿಸಿ (+)