ಟಿ.ವಿ.ಯಿಂದ ನೆಟ್‌ಫ್ಲಿಕ್ಸ್ ಕಡೆಗೆ...

7
ಬೇಕಾದ್‌ ನೋಡೋಕ್‌ ಬಾಳ್‌ ಐತಿ

ಟಿ.ವಿ.ಯಿಂದ ನೆಟ್‌ಫ್ಲಿಕ್ಸ್ ಕಡೆಗೆ...

Published:
Updated:

‘ಸೇ ಕ್ರೆಡ್ ಗೇಮ್ಸ್’ – ನೆಟ್‍ಫ್ಲಿಕ್ಸ್ ನಿರ್ಮಿಸಿದ ಮೊದಲ ಹಿಂದಿ ಭಾಷೆಯ ಥ್ರಿಲ್ಲರ್ ಸರಣಿ; ಅದು ಈಗ ಕೋರ್ಟ್ ಪ್ರಕರಣಗಳನ್ನು ಎದುರಿಸುವ ಮೂಲಕ ಸುದ್ದಿಯಾಗಿದೆ. ಅದರಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ವ್ಯಕ್ತಿತ್ವಕ್ಕೆ ಅಗೌರವ ತರುವ ಅಕ್ಷೇಪಾರ್ಹ ದೃಶ್ಯ, ಸಂಭಾಷಣೆಗಳಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಇದೇ ಸರಣಿಯಲ್ಲಿ ಅಭಿನಯಿಸಿರುವ ನಟಿ, ಕೆಲವು ದೃಶ್ಯಗಳಲ್ಲಿ ನಗ್ನಳಾಗಿ ಕಾಣಿಸಿಕೊಂಡಿರುವುದು ವಿವಾದದ ತಿರುವು ಪಡೆದುಕೊಂಡಿದೆ. ಕಿರುತೆರೆ ಮತ್ತು ವೆಬ್ ಸರಣಿಗಳಿಗೆ ಸೆನ್ಸಾರ್ ಇಲ್ಲದಿರುವ ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ. ಈ ಸಂಗತಿಗಳೊಂದಿಗೆ ‘ನೆಟ್‍ಫ್ಲಿಕ್ಸ್’ ಅಲೆ ಜೋರಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‍ಫ್ಲಿಕ್ಸ್ ಅಪ್‌ಲೋಡ್‌ ಡೌನ್‍ಲೋಡ್ ಮತ್ತು ಅದರ ಚಂದಾದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಭಾರತದಲ್ಲಿ ಟಿವಿ ನೋಡುತ್ತಿದ್ದವರೆಲ್ಲ ಈಗ ‘ಒಟಿಟಿ’ ಸೇವೆಗಳತ್ತ ಹೊರಳುತ್ತಿದ್ದಾರೆ.

ಕಿರುತೆರೆಯ ನಿತ್ಯ ಗೋಳಾಡುವ, ಮತ್ಸರ ತುಂಬಿದ ಧಾರಾವಾಹಿಗಳಿಂದ ಈಗಾಗಲೇ ಸಾಕಷ್ಟು ಮಂದಿ ರೋಸಿ ಹೋಗಿದ್ದಾರೆ. ಕೆಲವರು ಅಂತರ್ಜಾಲದ ಮೊರೆ ಹೋಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ದೂರಸಂಪರ್ಕ ಸೇವಾ ಸಂಸ್ಥೆಗಳು ನಿತ್ಯ ಕನಿಷ್ಠ 1 ಜಿಬಿ ಡೇಟಾ ಪೂರೈಸುತ್ತಿವೆ. ಪೋಸ್ಟ್ ಪೇಯ್ಡ್ ಸಂಪರ್ಕ ಪಡೆಯುವವರಿಗಾಗಿ ವಿವಿಧ ಒಟಿಟಿ ಸೇವಾ ಸಂಸ್ಥೆಗಳಿಗೆ ವರ್ಷದವರೆಗೂ ಉಚಿತ ಚಂದಾದಾರಿಕೆ ಉಡುಗೊರೆಯಾಗಿ ನೀಡುತ್ತಿವೆ. ಕೈಯಲ್ಲಿರುವ ಮೊಬೈಲ್ ಫೋನ್‍ಗೆ ಇಷ್ಟೆಲ್ಲ ಸಿಕ್ಕ ಮೇಲೆ ಟಿ.ವಿ ರಿಮೋಟ್‍ಗಾಗಿ ಕಿತ್ತಾಡುವ ಪ್ರಮೇಯವೇ ಇಲ್ಲವಾಗಿದೆ.

ಏನಿದು ಒಟಿಟಿ
ಇದು ಕೇಬಲ್ ಅಥವಾ ಡಿಶ್ ಸಂಪರ್ಕಕ್ಕಿಂತ ವಿಭಿನ್ನವಾಗಿದೆ. ಇದರ ವಿಸ್ತೃತ ರೂಪ ‘ಓವರ್-ದಿ-ಟಾಪ್’ ಎಂದು. ಅಂತರ್ಜಾಲವನ್ನು ಬಳಸಿಕೊಂಡು ಎಲ್ಲ ಕಾರ್ಯಕ್ರಮಗಳು ಅಥವಾ ವಿಡಿಯೊಗಳನ್ನು ಒಟಿಟಿ ಮೂಲಕ ನೋಡಬಹುದು. ಈ ವ್ಯವಸ್ಥೆಗೆ ಜಾಹೀರಾತುಗಳು ಮತ್ತು ಚಂದಾದಾರರೇ ಆದಾಯದ ಮೂಲ. ಹೊಸ-ಹಳೆಯ ಸಿನಿಮಾಗಳು, ವಿಶೇಷ ಚಿತ್ರ ಸರಣಿಗಳು, ಟಿ.ವಿ. ಚಾನೆಲ್‍ಗಳ ಕಾರ್ಯಕ್ರಮಗಳನ್ನು ನೋಡಬಹುದು. ಅದೇ ಜಾಲತಾಣದಲ್ಲಿ ಸಿಗುವ ಎಕ್ಸ್‌ಕ್ಲೂಸಿವ್‌ ಸರಣಿಗಳನ್ನು ಅಂತರ್ಜಾಲ ಸಂಪರ್ಕದೊಂದಿಗೆ ನೇರವಾಗಿ ಅಥವಾ ಕೆಲವು ಕಾರ್ಯಕ್ರಮಗಳನ್ನು ಡೌನ್‍ಲೋಡ್ ಮಾಡಿ ಆಫ್-ಲೈನ್‍ನಲ್ಲಿ ವೀಕ್ಷಿಸಬಹುದು.

ನೋಡುಗರ ಅವಶ್ಯಕತೆಗಳನ್ನು ಪೂರೈಸುವ ಈ ಡಿಜಿಟಲ್ ವಿತರಣಾ ವ್ಯವಸ್ಥೆ ವಿಸ್ತರಣೆಗಾಗಿ ವಿದೇಶ ಸಂಸ್ಥೆಗಳು ಸಹ ಭಾರತದ ಬೃಹತ್ ವೀಕ್ಷಕ ಮಾರುಕಟ್ಟೆಯತ್ತ ಚಿತ್ತ ನೆಟ್ಟಿವೆ. ಒಟಿಟಿ ವಿಡಿಯೊ ಪೂರೈಸುವ ನಿರ್ದಿಷ್ಟ ಸಂಸ್ಥೆಯ ವೆಬ್‍ಸೈಟ್, ಅಪ್ಲಿಕೇಷನ್ ಮೂಲಕ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‍ಟಾಪ್, ಡೆಸ್ಕ್‌ ಟಾಪ್ ಹಾಗೂ ಸ್ಮಾರ್ಟ್ ಟಿವಿಗಳಲ್ಲಿ ಇಷ್ಟಪಡುವ ವಿಡಿಯೊ ವೀಕ್ಷಿಸಬಹುದು. ಆದರೆ, ಅಂತರ್ಜಾಲ ಸಂಪರ್ಕ ಮತ್ತು ಚಂದಾದಾರರಾಗಿರುವುದು ಅಗತ್ಯ.

ಈಗ ‘ಸೇಕ್ರೆಡ್ ಗೇಮ್ಸ್‌’ ಕಥೆಗೆ ಬರೋಣ...
ನೆಟ್‌ಫ್ಲಿಕ್ಸ್‌ – 2006ರಲ್ಲಿ ಬಿಡುಗಡೆಯಾದ ವಿಕ್ರಮ್ ಚಂದ್ರ ಅವರ 900 ಪುಟಗಳ ಕಾದಂಬರಿಯನ್ನು ಆಧರಿಸಿದ 8 ಕಂತುಗಳ ‘ಸೇಕ್ರೆಡ್ ಗೇಮ್ಸ್’ ಸರಣಿ ನಿರ್ಮಿಸಿ ಜುಲೈ ಮೊದಲ ವಾರದಿಂದ ಪ್ರದರ್ಶಿಸುತ್ತಿದೆ. ಅಮೆರಿಕ ಮೂಲದ ನೆಟ್‍ಫ್ಲಿಕ್ಸ್ ಭಾರತದಲ್ಲಿ ಪ್ರದರ್ಶನ ಆರಂಭಿಸಿದ್ದು 2016ರಲ್ಲಿ. ವಿಶ್ವದ ಹಲವು ಭಾಷೆಗಳ ಪ್ರಮುಖ ಟಿವಿ ಕಾರ್ಯಕ್ರಮಗಳು, ಹೊಸ ಹಾಗೂ ಹಳೆಯ ಸಿನಿಮಾಗಳ ಹಕ್ಕುಗಳನ್ನು ಖರೀದಿಸಿದೆ. 190 ರಾಷ್ಟ್ರಗಳಲ್ಲಿ 12.5 ಕೋಟಿ ಚಂದಾದಾರರನ್ನು(ಅಮೆರಿಕದಲ್ಲೇ 5.6 ಕೋಟಿ) ಹೊಂದಿದ್ದು, ಈ ವರ್ಷ ₹54 ಸಾವಿರ ಕೋಟಿ ಹೂಡಿಕೆಯೊಂದಿಗೆ ತನ್ನದೇ ಬ್ಯಾನರ್‌ನ ಅಡಿ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿದೆ. ₹25 ಕೋಟಿಗೆ ‘ಬಾಹುಬಲಿ-2’ ಸಿನಿಮಾದ ಹಕ್ಕು ಹಾಗೂ ₹20 ಕೋಟಿ ನೀಡಿ ‘ದಂಗಲ್’ ಸಿನಿಮಾ ಪ್ರದರ್ಶನದ ಹಕ್ಕು ಖರೀದಿಸಿದೆ. ಈ ಮೂಲಕ ಭಾರತದ ಮನರಂಜನೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಈ ಸಂಸ್ಥೆ ಬೃಹತ್ ಹೂಡಿಕೆಗೆ ಮುಂದಾಗಿದೆ.

ವಿಡಿಯೊ ಆನ್ ಡಿಮಾಂಡ್ ಹೆಸರಿನಲ್ಲಿ ಟಾಟಾ ಸ್ಕೈನಂತಹ ಕೆಲವು ಸಂಸ್ಥೆಗಳು ಕಾಸು ಕೊಟ್ಟು ನೆಚ್ಚಿನ ಕಾರ್ಯಕ್ರಮ ನೋಡುವ ವ್ಯವಸ್ಥೆಗಳನ್ನು ಪ್ರಾರಂಭಿಸಿದರೂ ಹೆಚ್ಚು ಜನರನ್ನು ಸೆಳೆಯಲಿಲ್ಲ. ಆದರೆ, 40 ಕೋಟಿಗೂ ಹೆಚ್ಚು ಅಂತರ್ಜಾಲ ಸಂಪರ್ಕ ಹೊಂದಿರುವ ದೇಶದಲ್ಲಿ ‘ಹಾಟ್‍ಸ್ಟಾರ್’ ಒಟಿಟಿ ವ್ಯವಸ್ಥೆ ಮೂಲಕ ಕಾರ್ಯಕ್ರಮ ವೀಕ್ಷಿಸುವವರ ಸಂಖ್ಯೆ ಅತಿ ಹೆಚ್ಚು. ಕೆಲವು ಸಿನಿಮಾಗಳನ್ನು ಹೊರತಪಡಿಸಿ ಬಹುತೇಕ ಉಚಿತ ವೀಕ್ಷಣೆ ಮತ್ತು ಪ್ರಕಟಣೆ ಅವಕಾಶ ನೀಡಿರುವ ‘ಯುಟ್ಯೂಬ್’ನಲ್ಲಿ ಎಲ್ಲವೂ ಸಿಗುವುದಿಲ್ಲ.

ಸ್ಟಾರ್ ಇಂಡಿಯಾದ ‘ಹಾಟ್‍ಸ್ಟಾರ್’(7.5 ಕೋಟಿ ಚಂದಾದಾರರು), ವಯೋಕಾಮ್ 18ರ ‘ವೂಟ್’(1.5 ಕೋಟಿ ಚಂದಾದಾರರು), ಅಮೆಜಾನ್‌ ಪ್ರೈಮ್ ವಿಡಿಯೊ(1.1 ಕೋಟಿ ಚಂದಾದಾರರು), ಸೋನಿ ಲಿವ್(50 ಲಕ್ಷ ಚಂದಾದಾರರು) ಹಾಗೂ ನೆಟ್‍ಫ್ಲಿಕ್ಸ್ ಭಾರತದಲ್ಲಿ 50 ಲಕ್ಷ ಚಂದಾದಾರರನ್ನು ಹೊಂದಿವೆ. ಹಾಟ್‍ಸ್ಟಾರ್‌ನಲ್ಲಿ ತಿಂಗಳಿಗೆ ₹199ನಿಂದ ಪ್ಲಾನ್ ಲಭ್ಯವಿದೆ. ಅಮೆಜಾನ್ ಪ್ರೈಮ್‍ನಲ್ಲಿ ತಿಂಗಳಿಗೆ ₹ 129 ಅಥವಾ ವಾರ್ಷಿಕ ₹999 ಪ್ಲಾನ್‍ಗಳಿವೆ. ಆದರೆ, ನೆಟ್‍ಫ್ಲಿಕ್ಸ್ ಪ್ರಾರಂಭಿಕ ಹಂತವೇ ₹ 500. ಹಾಗಾಗಿ, ಚಂದಾದಾರಿಕೆ ಮೊತ್ತವನ್ನು ಪರಿಷ್ಕರಿಸಲು ಮುಂದಾಗಿದ್ದು, ಪ್ರಸ್ತುತ 1 ತಿಂಗಳು ಉಚಿತ ವೀಕ್ಷಣೆ ಅವಕಾಶ ನೀಡಿ ವೀಕ್ಷಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಜಾನಾ ವರದಿ ಪ್ರಕಾರ, ಅಪ್ಲಿಕೇಷನ್ ಡೌನ್‍ಲೋಡ್ ಮತ್ತು ಬಳಕೆ ಆಧಾರದಲ್ಲಿ 2018ರ ಮೊದಲಾರ್ಧದಲ್ಲಿ ಹಾಟ್‍ಸ್ಟಾರ್ ಶೇ 70, ಸೋನಿ ಲಿವ್ ಶೇ 13, ವೂಟ್ ಶೇ 11, ಅಮೆಜಾನ್ ಪ್ರೈಮ್ ಶೇ 5 ಹಾಗೂ ನೆಟ್‍ಫ್ಲಿಕ್ಸ್ ಶೇ 1.4 ವೀಕ್ಷಕರ ಪಾಲುದಾರಿಕೆ ಹೊಂದಿವೆ.

ಟಾರ್ಗೆಟ್ 2020
ಕಳೆದ ವರ್ಷದ ಎರಿಕ್ಸನ್ ಸಂಶೋಧನಾ ವರದಿ ಪ್ರಕಾರ, 2020ರ ವೇಳೆಗೆ ಟಿ.ವಿ. ಚಾನೆಲ್ ಹಾಗೂ ಒಟಿಟಿ ವೇದಿಕೆಗಳಲ್ಲಿ ಕಾರ್ಯಕ್ರಮ ವೀಕ್ಷಿಸುವವರ ಸಂಖ್ಯೆ ಸಮಾನವಾಗಿರಲಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಶೇ 50ರಷ್ಟು ಟಿ.ವಿ.ಚಾನೆಲ್ ವೀಕ್ಷಿಸಬಹುದಾಗಿದೆ. 2010-2017ರ ನಡುವೆ ಸ್ಮಾರ್ಟ್‌ಫೋನ್‌ನಲ್ಲಿ ವೀಕ್ಷಣೆ ಪ್ರಮಾಣ ಶೇ 85ರಷ್ಟು ಏರಿಕೆ ಕಂಡಿದೆ. ಸರಾಸರಿ ವಾರಕ್ಕೆ 30 ಗಂಟೆ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ವೀಕ್ಷಿಸಲಾಗುತ್ತಿದ್ದು, 16 ವರ್ಷದಿಂದ 19 ವರ್ಷ ವಯೋಮಾನದವರು ನೋಡುವ ವಿಡಿಯೊಗಳಲ್ಲಿ ಆಯ್ದ ವಿಡಿಯೊ(ವಿಡಿಯೊ ಆನ್ ಡಿಮಾಂಡ್)ಗಳ ಪ್ರಮಾಣವೇ ಶೇ 60.

ಬದಲಾಗುತ್ತಿರುವ ಜಾಹೀರಾತು
ಕುತೂಹಲ ಘಟದಲ್ಲಿರುವ ಕಾರ್ಯಕ್ರಮದ ನಡುವೆ ದಿಢೀರನೆ ಬಿತ್ತರವಾಗುವ ಜಾಹೀರಾತು ಕಿರಿಕಿರಿಯಿಂದಾಗಿಯೇ ಅನೇಕರು ಟಿ.ವಿ. ಚಾನೆಲ್‌ಗಳ ಬದಲು ಬಹು ಆಯ್ಕೆಗಳನ್ನು ಒಳಗೊಂಡ ಒಟಿಟಿ ಸಂಸ್ಥೆಗಳತ್ತ ಮುಖ ಮಾಡಿದ್ದಾರೆ. ಇಲ್ಲಿ ನಾವು ವೀಕ್ಷಿಸುವ ವಿಡಿಯೊ, ಕಾರ್ಯಕ್ರಮಗಳನ್ನು ಗಮನಿಸುವ ಕೃತಕ ಬುದ್ಧಿಮತ್ತೆ, ಆಯ್ದ ಜಾಹೀರಾತುಗಳನ್ನು ನೋಡುಗರ ಮುಂದಿಡುತ್ತದೆ (ಯುಟ್ಯೂಬ್, ವೂಟ್‍ನಲ್ಲಿ ಗಮನಿಸಬಹುದು).

ವೀಕ್ಷಕರ ಆಸಕ್ತಿ, ವೀಕ್ಷಣಾ ಸಮಯ ಈ ಎಲ್ಲವನ್ನೂ ಪರೋಕ್ಷವಾಗಿ ಬಳಕೆ ಮಾಡಿಕೊಂಡು ನಿರ್ದಿಷ್ಟ ಜಾಹೀರಾತು ನೀಡುವುದನ್ನೂ ಕಾಣಬಹುದಾಗಿದೆ. ಟಿ.ವಿ ಚಾನೆಲ್‍ಗಳಲ್ಲಿ ಸಾಮೂಹಿಕವಾಗಿ ಬಿತ್ತರಿಸುವ ಜಾಹೀರಾತುಗಳಿಗಿಂತ ಭಿನ್ನವಾಗಿ ಇಲ್ಲಿ ಪ್ರತಿ ವೀಕ್ಷಕನನ್ನು ಗುರಿಯಾಗಿಸಿಕೊಳ್ಳಲಾಗುತ್ತದೆ. ಇದು ಜಾಹೀರಾತು ಕ್ಷೇತ್ರದಲ್ಲಿಯೂ ಬದಲಾವಣೆಯನ್ನು ತಂದಿದೆ. ವೈಯಕ್ತಿಕ ವೀಕ್ಷಣಾ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳುವ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ಮೂಲಕ ಕ್ಷಣಾರ್ಧದಲ್ಲಿ ಟಾರ್ಗೆಟ್ ವಿಡಿಯೊ ರವಾನಿಸುವುದನ್ನು ತಪ್ಪಿಸಿಲ್ಲ. 

ಯುಟ್ಯೂಬ್‌ ರೆಡ್‌ 
ನೆಟ್‌ಫ್ಲೆಕ್ಸ್‌ ಮತ್ತು ಅಮೆಜಾನ್‌ಗೆ ಪೈಪೋಟಿ ನೀಡಲು ’ಯುಟ್ಯೂಬ್‌’ ತಾನೇ ಹೊಸ ಕಾರ್ಯಕ್ರಮಗಳನ್ನು ನಿರ್ಮಿಸಲು ಮುಂದಾಗಿದೆ. ಭಾರತ, ಫ್ರಾನ್ಸ್‌, ಜರ್ಮನಿ, ಜಪಾನ್‌ ಹಾಗೂ ಮೆಕ್ಸಿಕೊ ವೀಕ್ಷಕರನ್ನು ಗಮನದಲ್ಲಿರಿಸಿಕೊಂಡು ಸಂಗೀತಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳು, ರಿಯಾಲಿಟಿ ಸರಣಿ ಕಾರ್ಯಕ್ರಮ, ಟಾಕ್‌ ಷೋ ಹಾಗೂ ಧಾರಾವಾಹಿ(ಸರಣಿ) ನಿರ್ಮಿಸುತ್ತಿರುವುದಾಗಿ ಯುಟ್ಯೂಬ್‌ ಹೇಳಿಕೊಂಡಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಹಾಗೂ ಸಬ್‌ಟೈಟಲ್‌ಗಳು ಅಥವಾ ಡಬ್‌ ಮಾಡಿ ವಿಡಿಯೊಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ಯೋಜನೆ ಹೊತ್ತಿದೆ. ಈಗಾಗಲೇ ದಕ್ಷಿಣ ಕೊರಿಯಾದಲ್ಲಿ ಕೆಲವು ಕಾರ್ಯಕ್ರಮ ಹಾಗೂ ಭಾರತದಲ್ಲಿ ’ಅನ್‌ಕ್ರಿಕೆಟ್‌’ ಹೆಸರಿನಲ್ಲಿ ಹಿಂದಿ ಟಾಕ್‌ ಷೋ ಒಂದನ್ನು ನಿರ್ಮಿಸಿದೆ.

ನಿಗದಿತ ಮೊತ್ತ ಪಾವತಿಸಿ ಮಾಸಿಕ ಚಂದಾದಾರರಾಗಿರುವ ಗ್ರಾಹಕರು ’ಯುಟ್ಯೂಬ್‌ ರೆಡ್‌’ ಮೂಲಕ ಯುಟ್ಯೂಬ್‌ ಪ್ರೀಮಿಯಂ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಉಳಿದ ವಿಡಿಯೊಗಳನ್ನು ಈಗಿರುವಂತೆಯೇ ಉಚಿತವಾಗಿ ವೀಕ್ಷಿಸಬಹುದು. ಕೆಲವು ವಿಡಿಯೊಗಳು ಜಾಹೀರಾತುಗಳನ್ನು ಒಳಗೊಂಡಿರುತ್ತವೆ. ಭಾರತದಲ್ಲಿ ಇನ್ನೂ ಯುಟ್ಯೂಬ್‌ ಪ್ರೀಮಿಯಂ ಕಾರ್ಯಕ್ರಮ ಬಿತ್ತರಿಸುವುದನ್ನು ಪ್ರಾರಂಭಿಸಿಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !