ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

HP LaserJet Tank MFP 1005w Printer: ವೃತ್ತಿಪರರು, ಎಸ್‌ಎಂಬಿಗಳಿಗೆ ಸೂಕ್ತ

Last Updated 1 ಜೂನ್ 2022, 22:30 IST
ಅಕ್ಷರ ಗಾತ್ರ

ಎಚ್‌ಪಿ ಕಂಪನಿಯು ಮಾರುಕಟ್ಟೆ ಅಗತ್ಯಗಳಿಗೆ ಅನುಗುಣವಾಗಿ ಹೊಸ ಪ್ರಿಂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ವೃತ್ತಿಪರರು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು (ಎಸ್‌ಎಂಬಿ) ಗಮನದಲ್ಲಿ ಇಟ್ಟುಕೊಂಡು ‘ಎಚ್‌ಪಿ ಲೇಸರ್‌ಜೆಟ್‌ ಟ್ಯಾಂಕ್‌ ಎಂಎಫ್‌ಪಿ 1005ಡಬ್ಲ್ಯು’ ಪ್ರಿಂಟರ್‌ ಬಿಡುಗಡೆ ಮಾಡಿದೆ. ಪ್ರಿಂಟ್‌, ಸ್ಕ್ಯಾನ್‌, ಕಾಪಿ ಆಯ್ಕೆಗಳನ್ನು ಇದು ಹೊಂದಿದೆ. ಸುಲಭ ನಿರ್ವಹಣೆ, ಕಡಿಮೆ ಖರ್ಚು ಮತ್ತು ದೀರ್ಘ ಬಾಳಿಕೆ ಬರುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ಬೆಲೆ ₹ 20,692.

ಡ್ಯುಯಲ್‌ ಬ್ಯಾಂಡ್‌ ವೈಫೈ ಇದ್ದು, ವೈ–ಫೈ ಅನ್ನು ನೇರವಾಗಿ ಆನ್‌ ಅಥವಾ ಆಫ್‌ ಮಾಡಲು ಸುಲಭ ಆಗುವಂತೆ ಬಟನ್‌ ನೀಡಲಾಗಿದೆ. ಅದರ ಕೆಳಗಡೆ ಇರುವ ಬಟನ್‌, ಎಷ್ಟು ಕಾಪಿ ಪ್ರಿಂಟ್‌ ಮಾಡಬೇಕು ಎನ್ನುವುದನ್ನು ಸೆಲೆಕ್ಟ್ ಮಾಡಲು ಹಾಗೂ ಪ್ರಿಂಟ್‌ ಗುಣಮಟ್ಟ (ಬ್ರೈಟ್‌ನೆಸ್‌/ಡಾರ್ಕ್‌ನೆಸ್‌) ನಿಗದಿ ಮಾಡಲು ನೆರವಾಗುತ್ತದೆ. ನಂತರ ಇರುವ ಬಟನ್‌, ‘ಐಡಿ ಕಾರ್ಡ್‌’ ಪ್ರಿಂಟ್‌ ಮಾಡಲು ಉಪಯುಕ್ತವಾಗಿದೆ. ಒಂದು ಹಾಳೆಯ ಒಂದೇ ಬದಿಯಲ್ಲಿ ‘ಐಡಿ ಕಾರ್ಡ್‌’ನ ಎರಡೂ ಬದಿಯನ್ನು ಪ್ರಿಂಟ್‌ ಮಾಡಬಹುದು. ಇನ್ಫರ್ಮೇಷನ್‌, ಜಾಬ್‌ ರೆಸ್ಯೂಮ್‌, ಜಾಬ್‌ ಕ್ಯಾನ್ಸಲ್‌ ಹಾಗೂ ಪವರ್ ಆನ್‌/ಆಫ್‌ ಬಟನ್‌ಗಳಿವೆ.

ಸಾಮಾನ್ಯವಾಗಿ ಎಲ್ಲಾ ಪ್ರಿಂಟರ್‌ಗಳಲ್ಲಿ ಇರುವಂತೆ ಇದರಲ್ಲಿ ಟೋನರ್‌ ಕಾರ್ಟ್ರಿಡ್ಜ್‌ ಇಲ್ಲ. ಅದಕ್ಕೆ ಬದಲಾಗಿ ಟೋನರ್‌ ರಿಲೋಡ್‌ ಕಿಟ್‌ ನೀಡಲಾಗಿದೆ. ಇದರಿಂದ 5,000 ಪುಟಗಳನ್ನು ಪ್ರಿಂಟ್‌ ಮಾಡಬಹದು. 15 ಸೆಕೆಂಡ್‌ಗಳಲ್ಲಿ ಟೋನರ್ ರಿಫಿಲ್‌ ಮಾಡಬಹುದು. ಟೋನರ್‌ ರಿಲೋಡ್‌ ಕಿಟ್‌ (158ಎಕ್ಸ್‌ ಕಾರ್ಟ್ರಿಡ್ಜ್‌) 5,000 ಪುಟ ಪ್ರಿಂಟ್‌ ಮಾಡುವುದಕ್ಕೆ ₹ 1,464 ಮತ್ತು 2,500 ಪುಟ ಪ್ರಿಂಟ್‌ ಮಾಡುವುದಕ್ಕೆ (158ಎ ಕಾರ್ಟ್ರಿಡ್ಜ್‌) ₹ 887 ಬೆಲೆ ಇದೆ. ಪ್ರತಿ ಪೇಜ್‌ಗೆ29 ಪೈಸೆ ಖರ್ಚಾಗುತ್ತದೆ. ಪ್ರತಿ ನಿಮಿಷಕ್ಕೆ ಎ4 ಗಾತ್ರದ 22 ಪೇಜ್‌ ಪ್ರಿಂಟ್ ತೆಗೆಯಬಹುದು. ಎಷ್ಟು ಡಾರ್ಕ್‌ ಅಥವಾ ಲೈಟ್‌ ಆಗಿ ಪ್ರಿಂಟ್‌ ತೆಗೆಯುತ್ತೇವೆ ಎನ್ನುವುದರ ಮೇಲೆ ಪ್ರಿಂಟ್‌ಗೆ ತಗಲುವ ಖರ್ಚು ವ್ಯತ್ಯಾಸವಾಗುತ್ತದೆ. ಸ್ಟ್ಯಾಂಡರ್ಡ್‌ ಕಾರ್ಟ್ರಿಡ್ಜ್‌ಗೆ ಹೋಲಿಸಿದರೆ ಟೋನರ್‌ 5 ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. ಪೇಪರ್‌ ಇನ್‌ಪುಟ್‌ ಟ್ರೇನಲ್ಲಿ ಎ4 ಗಾತ್ರದ 150 ಹಾಳೆಗಳನ್ನು ಇಡಬಹುದು. ಔಟ್‌ಪುಟ್‌ ಟ್ರೇನಲ್ಲಿ 100 ಹಾಳೆ ಹಿಡಿಯುತ್ತದೆ. ಪ್ರಿಂಟ್‌ ರೆಸಲ್ಯೂಷನ್‌ ಗರಿಷ್ಠ 600ಡಿಪಿಐ ಇದೆ. ಆಪ್ಟಿಕಲ್‌ ಸ್ಕ್ಯಾನ್‌ ರೆಸಲ್ಯೂಷನ್‌ 600ಡಿಪಿಐ ವರೆಗೆ ಇದೆ. ಪ್ರಿಂಟಿಂಗ್‌ ಗುಣಮಟ್ಟ ಉತ್ತಮವಾಗಿದೆ. ಸುಲಭವಾಗಿ ಸ್ಕ್ಯಾನ್‌ ಮಾಡಿ ಪ‍್ರಿಂಟ್‌ ತೆಗೆಯಬಹುದು.

ಈ ಪ್ರಿಂಟರ್‌ ಬಳಕೆ ಸರಳವಾಗಿದೆ. ಸ್ಮಾರ್ಟ್‌ಫೋನ್‌ ಮೂಲಕವೇ ಪ್ರಿಂಟ್‌ ತೆಗೆಯಬಹುದು. ಇದಕ್ಕಾಗಿಎಚ್‌ಪಿ ಸ್ಮಾರ್ಟ್‌ ಆ್ಯಪ್‌ ಅನ್ನು ಮೊಬೈಲ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ವೈ–ಫೈ ಸಂಪರ್ಕ ಕಲ್ಪಿಸಿ ಅದರ ಮೂಲಕ ಸ್ಕ್ಯಾನ್‌, ಕಾಪಿ, ಪ್ರಿಂಟ್‌ ತೆಗೆಯುವುದು ಬಹಳ ಸುಲಭ. ಆದರೆ, ಎಚ್‌ಪಿ ಸ್ಮಾರ್ಟ್‌ ಆ್ಯಪ್‌ಗೆ ಸಂಪರ್ಕ ಸಾಧಿಸಲು ಹರಸಾಹಸ ಪಡಬೇಕು. ಈ ಹಿಂದೆ ‘ಎಚ್‌ಪಿ ಸ್ಮಾರ್ಟ್‌ ಟ್ಯಾಂಕ್‌ 530’ ಪ್ರಿಂಟರ್ ಅನ್ನು ಸಂಪರ್ಕಿಸುವಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಆ್ಯಪ್‌ ಸರಿಯಾಗಿ ಬೆಂಬಲ ನೀಡುತ್ತಿಲ್ಲ ಎಂದು ಪ್ಲೆಸ್ಟೋರ್‌ನಲ್ಲಿ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲಾ ಎಚ್‌ಪಿ ಸಾಧನಗಳಿಗೂ ಬೆಂಬಲ ನೀಡುವಂತೆ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಹೆಚ್ಚಿನ ಗಮನ ಹರಿಸುವ ತುರ್ತು ಅಗತ್ಯ ಇದೆ. ಲ್ಯಾಪ್‌ಟ್ಯಾಪ್‌ ಅಥವಾ ಡೆಸ್ಕ್‌ಟಾಪ್‌ ಜೊತೆ ಸಂಪರ್ಕಿಸಿ ಪ್ರಿಂಟ್‌ ತೆಗೆಯಬಹುದಾದರೂ, ಈಗ ಮೊಬೈಲ್‌ ಮೂಲಕವೇ ನಮ್ಮ ಬಹುತೇಕ ವ್ಯವಹಾರಗಳು ನಡೆಯುತ್ತಿವೆ. ಹೀಘಾಗಿ ತಕ್ಷಣಕ್ಕೆ ವಾಟ್ಸ್‌ಆ್ಯಪ್‌ಗೆ ಬಂದ ಡಾಕ್ಯುಮೆಂಟ್‌ ಪ್ರಿಂಟ್‌ ನೀಡಲು ಸುಲಭ ಆಗುವಂತಿರಬೇಕು.

ಬ್ಲಾಕ್‌ ಆ್ಯಂಡ್‌ ವೈಟ್‌ ಪ್ರಿಂಟರ್ ಆಗಿರುವುದರಿಂದ ವೃತ್ತಿಪರರರಿಗೆ ಅದರಲ್ಲಿಯೂ ಮುಖ್ಯವಾಗಿ ಸಿವಿಲ್‌ ಎಂಜಿನಿಯರ್‌, ಚಾರ್ಟರ್ಡ್ ಅಕೌಂಟೆಂಟ್‌, ವಕೀಲರಿಗೆ ಇದು ಉಪಯುಕ್ತವಾಗಲಿದೆ. ಶಾಲಾ ಕಾಲೇಜುಗಳಲ್ಲಿ ಪ್ರಿಂಟ್‌, ಕಾಪಿ, ಸ್ಕ್ಯಾನ್‌ ಮಾಡಲು ಬಳಸಬಹುದು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೇಳಿ ಮಾಡಿಸಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT