ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟೊ ಜಿ14: ಕಡಿಮೆ ಬೆಲೆಗೆ ಪ್ರೀಮಿಯಂ ಅನುಭವ

Published 5 ಸೆಪ್ಟೆಂಬರ್ 2023, 16:01 IST
Last Updated 5 ಸೆಪ್ಟೆಂಬರ್ 2023, 16:01 IST
ಅಕ್ಷರ ಗಾತ್ರ

ಮೋಟೊ ಜಿ ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಿಂದೆ ಸಂಚಲನ ಸೃಷ್ಟಿಸಿದ್ದು ಮೋಟೊರೊಲಾ ಕಂಪನಿಯ ಹೆಗ್ಗಳಿಕೆ. ಆಗ ಈ ಸ್ಮಾರ್ಟ್‌ಫೋನ್‌ ಸ್ಟಾಕ್‌ ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯನ್ನು ಹೊಂದಿತ್ತು. ಅದು ಫೋನ್‌ನ ಒಂದು ಹೆಗ್ಗಳಿಕೆಯೂ ಆಗಿತ್ತು. ಅದಾದ ನಂತರದಲ್ಲಿ ಕಂಪನಿಯು ಮೊಟೊ ಜಿ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈಗ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಮೊಟೊ ಜಿ14. ಇದರ ಹದಿನೈದು ದಿನಗಳ ಬಳಕೆಯನ್ನು ಆಧರಿಸಿದ ಅನುಭವ ಇಲ್ಲಿದೆ.

6.5 ಇಂಚಿನ ಪರದೆಯನ್ನು 4 ಜಿಬಿ ರ್‍ಯಾಮ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 128 ಜಿಬಿ ಆಂತರಿಕ ಮೆಮೊರಿ ಇದೆ. ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್‌ ಬಳಸಿ 1 ಟಿ.ಬಿ.ವರೆಗೆ ವಿಸ್ತರಿಸಿಕೊಳ್ಳುವ ಅವಕಾಶ ಇದೆ. ಅಲ್ಲದೆ, ಎರಡು ಸಿಮ್‌ ಸ್ಲಾಟ್ ಇದರಲ್ಲಿ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್‌ 5,000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ‘ಜಿ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ನಾವು, ಎಲ್ಲರಿಗೂ ಪ್ರೀಮಿಯಂ ಅನುಭವ ನೀಡುವ ಸ್ಮಾರ್ಟ್‌ಫೋನ್‌ಗಳು ಸಿಗುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದು ಮೋಟೊರೊಲಾ ಏಷ್ಯಾ ಪ್ಯಾಸಿಫಿಕ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ಮಣಿ ಹೇಳಿದ್ದರು. ಅವರ ಮಾತನ್ನು ಉಳಿಸಿಕೊಳ್ಳಲು ಕಂಪನಿ ಶ್ರಮ ಹಾಕಿದೆ.

ಮೊದಲ ನೋಟದಲ್ಲಿ ಆಕರ್ಷಿಸುವುದು ಈ ಸ್ಮಾರ್ಟ್‌ಫೋನ್‌ನ ಹೊರಕವಚ ಹಾಗೂ ಅದಕ್ಕೆ ಕಂಪನಿಯ ಕಡೆಯಿಂದ ನೀಡಿರುವ ಗ್ರಿಪ್ ಕವರ್. ಇದು ಬಜೆಟ್‌ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದರೂ, ಮೊದಲ ನೋಟಕ್ಕೆ ಬಜೆಟ್‌ ಶ್ರೇಣಿಗಿಂತ ಹೆಚ್ಚು ಉತ್ತಮವಾದ ಫೋನ್‌ನಂತೆ ಕಾಣುತ್ತದೆ. ಗ್ರಿಪ್‌ ಹಾಕಿದ್ದಾಗ, ಫೋನ್‌ ಹಿಡಿದುಕೊಳ್ಳುವ ಅನುಭವವು ಹಿಂದಿನ ಕೆಲವು ಮೋಟೊರೊಲಾ ಫೋನ್‌ಗಳಷ್ಟು ಉತ್ತಮವಾಗಿ ಇಲ್ಲದಿದ್ದರೂ, ಕೊಟ್ಟ ಕಾಸಿಗೆ ಯಾವ ಮೋಸವೂ ಇಲ್ಲ ಎನ್ನಬಹುದು. ಆದರೆ, ನೋಡುಗನ ಕಣ್ಣು ಸೆಳೆಯುವಂತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು 5,000 ಎಮ್‌ಎಎಚ್‌ ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ಬ್ಯಾಟರಿಯನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್‌ ಮಾಡಿದಾಗ, ಕರೆಗಳು, ವಿಡಿಯೊ ವೀಕ್ಷಣೆ, ಚಾಟಿಂಗ್‌ ಸೇರಿದಂತೆ ಸಾಮಾನ್ಯ ಬಳಕೆಯ ಸಂದರ್ಭದಲ್ಲಿ ಎರಡು ದಿನಗಳವರೆಗೆ ಬಾಳಿಕೆ ಬಂತು. ಆದರೆ, ಹೆಚ್ಚು ವಿಡಿಯೊ ವೀಕ್ಷಣೆ, ಆಟಗಳಿಗೆ ಬಳಕೆ ಮಾಡಿದಾಗ ಇಷ್ಟು ಬಾಳಿಕೆ ಬರಲಿಲ್ಲ. ಹೆಚ್ಚು ಬೆಳಕು ಇದ್ದಾಗ ತೆಗೆದ ಫೋಟೊಗಳ ಗುಣಮಟ್ಟವು ಚೆನ್ನಾಗಿ ಇತ್ತು. ಆದರೆ, ರಾತ್ರಿಯ ಸಂದರ್ಭದಲ್ಲಿ (ಬೇರೆ ಬೆಳಕಿನ ಮೂಲ ಇಲ್ಲದಿದ್ದಾಗ) ಹಾಗೂ ಮಂದ ಬೆಳಕಿನಲ್ಲಿ ತೆಗೆದ ಚಿತ್ರಗಳು ಹೆಚ್ಚು ಸ್ಪಷ್ಟವಾಗಿಲ್ಲ. ಇದು ಛಾಯಾಗ್ರಾಹಕರಿಗಾಗಿ ಸಿದ್ಧಪಡಿಸಿರುವ ಸ್ಮಾರ್ಟ್‌ಫೋನ್ ಅಲ್ಲವಾಗಿರುವ ಕಾರಣ, ಈ ಬಜೆಟ್‌ಗೆ ಕ್ಯಾಮೆರಾ ಬಗ್ಗೆ ತಕರಾರು ಮೂಡುವುದಿಲ್ಲ.

ಕಂಪನಿಯು ಇದರಲ್ಲಿ ಯೂನಿಸಾಕ್ ಪ್ರೊಸೆಸರ್ ಬಳಕೆ ಮಾಡಿದೆ. ಸಾಮಾನ್ಯ ಬಳಕೆಯ ಸಂದರ್ಭದಲ್ಲಿ ಫೋನ್‌ನ ಯಾವುದೇ ವಿಳಂಬ ಇಲ್ಲದೆ ಸ್ಪಂದಿಸುತ್ತದೆ. ಇದಕ್ಕೆ ಒಂದು ಕಾರಣ ಇದರಲ್ಲಿ ಇರುವ ಸ್ಟಾಕ್‌ ಆ್ಯಂಡ್ರಾಯ್ಡ್‌ಗೆ ಬಹಳ ಹತ್ತಿರವಾಗಿರುವ ಕಾರ್ಯಾಚರಣೆ ವ್ಯವಸ್ಥೆ. ಈಗ ಇದರಲ್ಲಿ ಆ್ಯಂಡ್ರಾಯ್ಡ್‌ 13 ನೀಡಲಾಗಿದ್ದು, ಮುಂದಿನ ಆ್ಯಂಡ್ರಾಯ್ಡ್‌ ಆವೃತ್ತಿಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ಕಂಪನಿ ಭರವಸೆ ನೀಡಿದೆ. ಮೋಟೊರೊಲಾ ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ಹಲವರು ಇಷ್ಟಪಡುವುದಕ್ಕೆ ಒಂದು ಕಾರಣ ಕಂಪನಿಯು ಸ್ಟಾಕ್ ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸುತ್ತದೆ ಎಂಬುದು. ಇದರಲ್ಲಿ ತುಸು ಮಾರ್ಪಾಡುಗಳೊಂದಿಗೆ ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯನ್ನು ನೀಡಲಾಗಿದೆ. ಇದು ಸ್ಟಾಕ್‌ ಆ್ಯಂಡ್ರಾಯ್ಡ್‌ಗೆ ಬಹಳ ಹತ್ತಿರದ ಅನುಭವವನ್ನು ನೀಡುತ್ತದೆ.

ಸ್ಮಾರ್ಟ್‌ಫೋನ್‌ನ ಮುಖ್ಯ ಪರದೆಯಿಂದ, ಆ್ಯಪ್‌ಗಳ ವಿಭಾಗಕ್ಕೆ ತೆರಳುವುದು, ಅಲ್ಲಿ ಬೇಕಾದ ಆ್ಯಪ್‌ ಆಯ್ಕೆ ಮಾಡಿಕೊಳ್ಳುವುದು ಸುಲಲಿತವಾಗಿ ಆಗುತ್ತವೆ. ಫಾಂಟ್‌ಗಳ ವಿನ್ಯಾಸ ಸರಳವಾಗಿದೆ.

ದಿನನಿತ್ಯದ ಬಳಕೆಗೆ, ವಿಡಿಯೊ ಕರೆಗಳನ್ನು ಮಾಡುವುದಕ್ಕೆ, ದಿನನಿತ್ಯ ಸಣ್ಣ–ಪುಟ್ಟ ಪ್ರಮಾಣದಲ್ಲಿ ಷೇರು ವಹಿವಾಟು ನಡೆಸುವುದಕ್ಕೆ, ಹತ್ತು ಹಲವು ಒಟಿಟಿ ವೇದಿಕೆಗಳ ಕಾರ್ಯಕ್ರಮಗಳನ್ನು ವೀಕ್ಷಿಸುವುದಕ್ಕೆ ಈ ಫೋನ್‌ ಹೇಳಿ ಮಾಡಿಸಿದಂತೆ ಇದೆ. ಆದರೆ, ದೊಡ್ಡ ಮಟ್ಟದ ಸ್ಮರಣಶಕ್ತಿಯನ್ನು ಬೇಡುವ ಆಟಗಳನ್ನು ಆಡುವುದನ್ನು ಇದಕ್ಕಿಂತ ಬೇರೆ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಸ್ಮಾರ್ಟ್‌ಫೋನ್‌ನ ತಳ ಭಾಗದಲ್ಲಿ ಸ್ಪೀಕರ್‌ ನೀಡಲಾಗಿದೆ. ಯಾವುದೇ ಟೇಬಲ್ ಮೇಲೆ ಇರಿಸಿಕೊಂಡು ಹಾಡುಗಳನ್ನು ಕೇಳಲು, ವಿಡಿಯೊ ನೋಡಲು ಇದು ಅನುಕೂಲಕರ. ಫೋನ್‌ನ ಹಿಂಭಾಗದಲ್ಲಿ ಸ್ಪೀಕರ್ ಇದ್ದಲ್ಲಿ, ಟೇಬಲ್ ಮೇಲೆ ಫೋನ್ ಇರಿಸಿದಾಗ ಧ್ವನಿ ಸ್ಪಷ್ಟವಾಗಿ ಕೇಳುವುದಿಲ್ಲ. ಆ ಸಮಸ್ಯೆ ಇದರಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT