ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್‌ ಫ್ಲಸ್‌ 7ಟಿ: ಫೋಟೊ, ಆಟಕ್ಕೆ ಪರ್ಫೆಕ್ಟ್

Last Updated 10 ನವೆಂಬರ್ 2019, 9:46 IST
ಅಕ್ಷರ ಗಾತ್ರ

ಪ್ರೀಮಿಯಂ ಸ್ಮಾರ್ಟ್‌ಫೋನ್‌ ತಯಾರಿಸುವ ಒನ್‌ಪ್ಲಸ್‌ ಕಂಪನಿಯ ಸುಧಾರಿತ ಒನ್‌ಪ್ಲಸ್‌ 7ಟಿ ಹ್ಯಾಂಡ್‌ಸೆಟ್‌ ಹಲವು ವಿಷಯಗಳಲ್ಲಿ ಗಮನ ಸೆಳೆಯುತ್ತದೆ. ವೇಗ, ಕ್ಯಾಮೆರಾ ಗುಣಮಟ್ಟ, ಅನ್‌ಲಾಕ್‌ ಆಯ್ಕೆಗಳು, ವಾಯ್ಸ್‌ ಕ್ಲಾರಿಟಿ ಹೀಗೆ ಕಂಪನಿಯ ಈ ಹಿಂದಿನ ಎಲ್ಲಾ ಫೋನ್‌ಗಳಿಗಿಂತಲೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತದೆ.

ಒನ್‌ಪ್ಲಸ್‌ 7 ಪ್ರೊಗೆ ಹೋಲಿಸಿದರೆ ಬಹಳ ದೊಡ್ಡ ಮಟ್ಟದ ಬದಲಾವಣೆಯೇನೂ ಮಾಡಿಲ್ಲವಾದರೂ, ಗರಿಷ್ಠ ಕಾರ್ಯಕ್ಷಮತೆ ದೃಷ್ಟಿಯಿಂದ ಉತ್ತಮವಾಗಿದೆ.ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 855ನಿಂದ 855 ಪ್ಲಸ್‌ಗೆ ಮೇಲ್ದರ್ಜೆಗೇರಿಸಲಾಗಿದೆ. 7 ಪ್ರೊದಲ್ಲಿ ಪಾಪ್‌ ಅಪ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿತ್ತು. ಆದರೆ 7ಟಿ ದಲ್ಲಿ ಡ್ರಾಪ್‌ ನಾಚ್‌ ಫ್ರಂಟ್‌ ಕ್ಯಾಮೆರಾ ನೀಡಲಾಗಿದೆ. ವಿನ್ಯಾಸದ ದೃಷ್ಟಿಯಿಂದ ಒಂದು ಪ್ರಮುಖ ಬದಲಾವಣೆ ಮಾಡಿದೆ. ಅದೇನೆಂದರೆ, ಫೋನ್‌ ಹಿಂಭಾಗದಲ್ಲಿ ಆಯುತಾಕಾರದಲ್ಲಿ ಕ್ಯಾಮೆರಾ ಮತ್ತು ಅದರ ಲೆನ್ಸ್‌ ನೀಡುವ ಬದಲಿಗೆ ವೃತ್ತಾಕಾರದಲ್ಲಿ ನೀಡಲಾಗಿದೆ.

ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆಯಲ್ಲಿಯೂ ಗೊರಿಲ್ಲಾ ಗ್ಲಾಸ್‌ ಬಳಸಲಾಗಿದ್ದು, ಅಲ್ಯುಮಿನಿಯಂ ಫ್ರೇಮ್‌ ಹ್ಯಾಂಡ್‌ಸೆಟ್‌ನ ಅಂದವನ್ನು ಹೆಚ್ಚಿಸಿದೆ. ಫೋನ್‌ನ ಮೇಲ್ಭಾಗದಲ್ಲಿ ಮೈಕ್ರೊಫೋನ್‌ ಮಾತ್ರವೇ ಇದೆ. ಬ್ಯಾಕ್‌ ಕವರ್‌ ಇಲ್ಲದೇ ಇದ್ದರೆ ಕೈಯಿಂದ ಜಾರಿಹೋಗುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿ ಕಂಪನಿಯೇ ಒಂದು ಟ್ರಾನ್ಸ್‌ಪರೆಂಟ್‌ ಬ್ಯಾಕ್ ಕವರ್‌ ನೀಡಿದೆ.

ಗುಣಮಟ್ಟದ ಟ್ರಿಪಲ್ ಕ್ಯಾಮೆರಾ

ಕ್ಯಾಮೆರಾಗಳ ಗುಣಮಟ್ಟ ಉತ್ತಮವಾಗಿವೆ. ಯಾವುದೇ ರೀತಿಯ ಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದು. ಇದರಲ್ಲಿ ತೆಗೆದ ಲ್ಯಾಂಡ್‌ಸ್ಕೇಪ್‌ ಫೋಟೊಗಳನ್ನು ನೋಡಲು ಹಿತ ಎನಿಸುತ್ತದೆ. ಪೊರ್ಟ್ರೇಟ್‌ ಆಯ್ಕೆಯಲ್ಲಿ ನೈಜ ಚಿತ್ರ ಸೆರೆಹಿಡಿಯಬಹುದು.

ಕೆಲವು ಫೋನ್‌ಗಳಲ್ಲಿ ಪೊರ್ಟ್ರೇಟ್‌ ಆಯ್ಕೆ ಇಟ್ಟುಕೊಂಡು ಕ್ಲಿಕ್ಕಿಸಿದರೆ ಹುಡುಗರಾದರೂ ತುಟಿಗೆ ಲಿಪ್‌ಸ್ಟಿಕ್‌ ಬಳಿದುಕೊಂಡಿರುವಂತೆ, ಮುಖವನ್ನು ಫೋಟೊ ಷಾಪ್‌ನಲ್ಲಿ ಎಡಿಟ್‌ ಮಾಡಿ ಗ್ಲೋಅಪ್‌ ಮಾಡಿರುವಂತೆ ಚಿತ್ರ ಸೆರೆಯಾಗುತ್ತದೆ. ಆದರೆ, ಇದರಲ್ಲಿ ಹಾಗಿಲ್ಲ. ಇರುವಂತೆಯೇ ಚಿತ್ರ ಸೆರೆಯಾಗಲಿದೆ. ಆದರೆ, ಪೊರ್ಟ್ರೇಟ್‌ನಲ್ಲಿ ಸುತ್ತಲಿನ ಚಿತ್ರ ತುಸು ಬ್ಲರ್‌ ಆಗುವುದರಿಂದ ನಾವು ಕನ್ನಡಿಯಲ್ಲಿ ಕಾಣುವುದಕ್ಕಿಂತಲೂ ತುಸು ಹೆಚ್ಚೇ ಅಂದವಾಗಿದ್ದೇವೆ ಎನ್ನುವ ಭಾವನೆ ಮೂಡುತ್ತದೆ.

ಝೂಮ್‌ ಸಮಸ್ಯೆ

ದೂರದಲ್ಲಿರುವ ವಸ್ತು, ಬೋರ್ಡ್‌ ಅನ್ನು ಝೂಮ್‌ ಮಾಡಿ ಕ್ಲಿಕ್ಕಿಸಿದಾಗ ಬರುವ ಚಿತ್ರವು ತೃಪ್ತಿದಾಯಕವಾಗಿಲ್ಲ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿರುವುದರಿಂದ ಔಟ್‌ಡೋರ್‌ನಲ್ಲಿ ಚಿತ್ರಗಳನ್ನು ತೆಗೆಯುವಾಗ ದೂರದಲ್ಲಿ ಕುಳಿತಿರುವ ಗಿಳಿ, ಅಳಿಲಿನ ಚಿತ್ರವನ್ನು ಜೂಮ್‌ ಮಾಡಿ ತೆಗೆದರೆ ಅಷ್ಟು ಸ್ಪಷ್ಟವಾಗಿ ಬರಲಿಲ್ಲ. ಈ ಬಗ್ಗೆ ಕಂಪನಿ ಗಮನವಹಿಸುವ ಅಗತ್ಯ ಇದೆ ಎನ್ನಿಸುತ್ತದೆ.

ಸೂಪರ್‌ ಮ್ಯಾಕ್ರೊ ಲೆನ್ಸ್

ಕಣ್ಣಿಗೆ ಕಾಣದೇ ಇರುವಂತಹ ಸೂಕ್ಷ್ಮವಾದ ಅಂಶಗಳನ್ನು ಸೆರೆಹಿಡಿಯಲು ಸೂಪರ್ ಮ್ಯಾಕ್ರೊ ಲೆನ್ಸ್ ಇದರಲ್ಲಿದೆ. ಹುಳ ಹುಪ್ಪಟೆಗಳ ವಿನ್ಯಾಸ, ಎಲೆಯ ರಚನೆ ಹೀಗೆ ಅತಿ ಸೂಕ್ಷ್ಮ ಅಂಶಗಳನ್ನು ಬಹಳ ಸ್ಪಷ್ಟವಾಗಿ ಸೆರೆಹಿಡಿಯಬಹದು.

ಫೇಸ್‌ ಮತ್ತು ಫಿಂಗರ್‌ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಗಳು ಬಹಳ ಬೇಗ ಸ್ಪಂದಿಸುತ್ತವೆ. ಮೊಬೈಲ್‌ನಲ್ಲಿ ಗೇಮ್‌ ಆಡುವ ಹವ್ಯಾಸ ಬೆಳೆಸಿಕೊಂಡಿರುವವರಿಗೆ ಹೇಳಿ ಮಾಡಿಸಿದ ಫೋನ್‌ ಇದಾಗಿದೆ. ಗೇಮಿಂಗ್‌ ಮೋಡ್‌ನಲ್ಲಿ ಯಾವುದೇ ರಗಳೆ ಇಲ್ಲದೇ ಆಟದ ಮಜವನ್ನು ಅನುಭವಿಸಬಹುದು. ಡಾಲ್ಬಿ ಅಟ್ಮಾಸ್‌ ಡ್ಯುಯಲ್‌ ಸ್ಟೀರಿಯೊ ಸ್ಪೀಕರ್‌ ಇರುವುದರಿಂದ ಹೆಡ್‌ಫೋನ್‌ನೊಂದಿಗೆ ಅಥವಾ ಇಲ್ಲದೆಯೂ ಸೌಂಡ್‌ ಸ್ಪಷ್ಟ ಮತ್ತು ಸಮತೋಲನದಿಂದ ಕೂಡಿದೆ. ಡಾಲ್ಬಿ ಅಟ್ಮಾಸ್‌ ಸ್ಪೀಕರ್‌ಗಳು ಗೇಮ್‌, ಮ್ಯೂಸಿಕ್‌, ಮೂವಿ ಆನಂದವನ್ನು ದುಪ್ಪಟ್ಟುಗೊಳಿಸುತ್ತವೆ.

ಬ್ಯಾಟರಿ ಬಾಳಿಕೆ ಸಾಲದು

₹ 10 ಸಾವಿರಕ್ಕೆ ಸಿಗುವ ಸ್ಮಾರ್ಟ್‌ಫೋನ್‌ನಲ್ಲಿಯೇ 4 ಸಾವಿರ ಎಂಎಎಚ್‌ ಬ್ಯಾಟರಿ ಇರುತ್ತದೆ. ಹೀಗಿರುವಾಗ ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗೆ 3,800 ಎಂಎಎಚ್‌ ಬ್ಯಾಟರಿ ಸಾಲದು. ಬ್ಯಾಟರಿ ವೇಗವಾಗಿ ಚಾರ್ಜ್‌ ಆಗುವಂತೆ ವಾರ್ಪ್‌ ಚಾರ್ಜರ್‌ ವ್ಯವಸ್ಥೆ ಇದ್ದು, 30 ರಿಂದ 40 ನಿಮಿಷದಲ್ಲಿ ಶೇ 100ರಷ್ಟು ಚಾರ್ಜ್‌ ಆಗುತ್ತದೆ. ಆದರೆ, ಬ್ಯಾಟರಿ ಹೆಚ್ಚು ಬಾಳಿಕೆ ಬರುವುದಿಲ್ಲ. ಹೆಚ್ಚಿನ ಕೆಲಸಗಳನ್ನೂ ಮಾಡದಿದ್ದರೂ ಅರ್ಧದಷ್ಟು ಬ್ಯಾಟರಿ ಬೇಗನೇ ಖಾಲಿಯಾಗಿಬಿಡುತ್ತದೆ.

ಒಂದು ದಿನ 250 ಫೋಟೊಗಳನ್ನು ಮಾತ್ರವೇ ತೆಗೆಯಲಾಯಿತು. ಅಷ್ಟಕ್ಕೇ ಮುಕ್ಕಾಲು ಪಾಲು ಚಾರ್ಜ್‌ ಕಡಿಮೆಯಾಯಿತು. ಕರೆ, ಚಾಟ್‌ ಮಾಡುವುದರ ಜತೆಗೆ ವಿಡಿಯೊ ನೋಡಿದರೆ, ಗೇಮ್‌ ಆಡಿದರೆ ಒಂದು ದಿನವೂ ಬಾಳಿಕೆ ಬರುವುದಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚು ವೇಗವಾಗಿ ಚಾರ್ಜ್‌ ಆಗಲಿದೆ ಎನ್ನುವ ಕಾರಣಕ್ಕೆ ಎಲ್ಲೆಡೆಯೂ ಚಾರ್ಜಿಂಗ್‌ ಪಾಯಿಂಟ್‌ ಸಿಗುತ್ತದೆ ಎಂದು ನಂಬಿಕೊಳ್ಳಲಾಗದು. ಪದೇ ಪದೇ ಬ್ಯಾಟರಿ ಚಾರ್ಜ್‌ ಮಾಡುವುದರಿಂದ ಅದರ ಒಟ್ಟಾರೆ ಬಾಳಿಕೆ ಅವಧಿಯೂ ಕ್ಷೀಣಿಸಲಾರಂಭಿಸುತ್ತದೆ. ಹೀಗಾಗಿ ವೇಗವಾಗಿ ಚಾರ್ಜ್‌ ಮಾಡುವುದಕ್ಕಷ್ಟೇ ಅಲ್ಲದೆ ಬ್ಯಾಟರಿ ಬಾಳಿಕೆ ಬರುವಂತೆ ಮಾಡುವಲ್ಲಿಯೂ ಗಮನ ನೀಡಬೇಕಾದ ಅಗತ್ಯ ಇದೆ.

ವೈಶಿಷ್ಟ್ಯ

ಪರದೆ;6.55 ಇಂಚ್‌ ಡಾಟ್‌ ನಾಚ್‌ ಅಮೊಎಲ್‌ಇಡಿ

ಆಸ್ಪೆಕ್ಟ್‌ ರೇಶಿಯೊ;20:9

ಪ್ರೊಸೆಸರ್; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 855 ಪ್ಲಸ್‌

ಒಎಸ್‌; ಆಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್ ಒಎಸ್

ಕ್ಯಾಮೆರಾ; 48+16+12 ಎಂಪಿ ಟ್ರಿಪಲ್‌ ಕ್ಯಾಮೆರಾ

ಸೆಲ್ಫಿ;16ಎಂಪಿ

ರ‍್ಯಾಮ್; 8ಜಿಬಿ ಎಲ್‌ಪಿಡಿಡಿಆರ್‌4ಎಕ್ಸ್‌

ಸಂಗ್ರಹಣಾ ಸಾಮರ್ಥ್ಯ; 128ಜಿಬಿ ಯುಎಫ್‌ಎಸ್‌ 3.02–ಲೇನ್ ಮತ್ತು 256 ಜಿಬಿ ಯುಎಫ್‌ಎಸ್‌ 3.02–ಲೇನ್‌

ಬ್ಯಾಟರಿ;3,800 ಎಂಎಎಚ್‌.ವಾರ್ಪ್‌ ಚಾರ್ಜರ್‌ 30ಟಿ

ಸಿಮ್‌;ಡ್ಯುಯಲ್‌ ನ್ಯಾನೊ ಸಿಮ್‌

ಯುಎಸ್‌ಬಿ; 3.1 ಜೆನ್‌1, ಟೈಪ್‌ ಸಿಚಾರ್ಜಿಂಗ್/ಇಯರ್‌ ಫೋನ್‌ ಪೋರ್ಟ್‌

ಬೆಲೆ;₹37,999 (6 ಜಿಬಿ 128 ಜಿಬಿ) ₹ 39,999 (8 ಜಿಬಿ 256 ಜಿಬಿ)

ಅನ್‌ಲಾಕ್‌: ಇನ್‌ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌ ಮತ್ತು ಫೇಸ್‌ ಅನ್‌ಲಾಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT